Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 
ದೇಶ

ಟಿಎಂಸಿ ಸರ್ಕಾರದಿಂದ ಭಯೋತ್ಪಾದನೆಯ ಆಳ್ವಿಕೆ; ಮೋದಿ-ದೀದಿ ಒಂದೇ ನಾಣ್ಯದ ಎರಡು ಮುಖಗಳು ಅಂದಿದ್ದೇಕೆ ರಾಹುಲ್ ಗಾಂಧಿ..? | Rahul Gandhi

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ಶನಿವಾರ (ಏ.25) ಬೆಳಿಗ್ಗೆ ಅತ್ಯಂತ ಆಘಾತಕಾರಿ ಘಟನೆ ಸಂಭವಿಸಿದ್ದು, ಕಾಂಗ್ರೆಸ್ ಕಾರ್ಯಕರ್ತ ದೇಬ್ದೀಪ್ ಚಟರ್ಜಿ (43) ಎಂಬುವವರನ್ನು ಅವರ ಪತ್ನಿ ಮತ್ತು 10 ವರ್ಷದ ಮಗನ ಮುಂದೆಯೇ ಯುವಕರ ಗುಂಪೊಂದು ಹೊಡೆದು ಕೊಂದಿದೆ ಎಂದು ಆರೋಪಿಸಲಾಗಿದ್ದು, ಈ ಘಟನೆಯನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಖಂಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್​ ಗಾಂಧಿ, ಇದು ಸಂಪೂರ್ಣವಾಗಿ ಖಂಡನೀಯ ಕೃತ್ಯವಾಗಿದ್ದು, ಈ ಹತ್ಯೆಯಲ್ಲಿ ಟಿಎಂಸಿ ಸಂಬಂಧಿತ ಗೂಂಡಾಗಳು ಭಾಗಿಯಾಗಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಭಯೋತ್ಪಾದನೆಯ ಆಳ್ವಿಕೆ ನಡೆಸುತ್ತಿದ್ದು, ಚುನಾವಣೆಯ ಬಳಿಕ ವಿರೋಧಿಗಳನ್ನು ಗುರಿಯಾಗಿಸುವುದು ಅಲ್ಲಿ ವಾಡಿಕೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಮೃತರ ಕುಟುಂಬಕ್ಕೆ ತಕ್ಷಣ ಭದ್ರತೆ ಮತ್ತು ಪರಿಹಾರ ನೀಡಬೇಕು ಹಾಗೂ ದೋಷಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರಾಹುಲ್​ ಒತ್ತಾಯಿಸಿದ್ದು, ಇತ್ತ ಅಸನ್ಸೋಲ್‌ನಲ್ಲಿ ಪುಯಿಟಾಂಡಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಟಿಎಂಸಿ ಜಿಲ್ಲಾ ಸಂಚಾಲಕ ವಿ. ಶಿವದಾಸನ್ ದಾಸು ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ಚುನಾವಣೆ ಸಮಯದಲ್ಲಿ ಜನರ ಗಮನವನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್​ ಈ ಕಟ್ಟುಕಥೆಗಳನ್ನು ಹೆಣೆಯುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಏನಿದು ಘಟನೆ...?

ಮೃತ ದೇಬ್ದೀಪ್ ಪತ್ನಿ ಪಿಯಾಲಿ ಚಟರ್ಜಿ ನೀಡಿರುವ ಮಾಹಿತಿಯ ಪ್ರಕಾರ, ಕುಟುಂಬವು ಬರ್ತ್​​ಡೇ ಪಾರ್ಟಿಯಲ್ಲಿ ಭಾಗವಹಿಸಿ ಬೆಳಿಗ್ಗೆ 1 ಗಂಟೆ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ದೇಬ್ದೀಪ್ ಚಲಾಯಿಸುತ್ತಿದ್ದ ಕಾರು, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಮೋಟಾರ್‌ಸೈಕಲ್‌ಗೆ ಅಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದು, ಈ ಸಣ್ಣ ಕಾರಣಕ್ಕಾಗಿ ಬೈಕಿನ ಬಳಿ ಕುಳಿತಿದ್ದ ಸ್ಥಳೀಯ ಯುವಕರು ಜಗಳ ಆರಂಭಿಸಿದ್ದಾರೆ. ದೇಬ್ದೀಪ್ ಕಾರಿನಿಂದ ಇಳಿದು ಕ್ಷಮೆಯಾಚಿಸಿದರೂ ಕೇಳದ ಯುವಕರು ಹಲ್ಲೆ ನಡೆಸಿದ್ದಾರೆ.
ಈ ವೇಳೆ ದೇಬ್ದೀಪ್ ಅವರು ಸ್ಥಳೀಯ ಕಾಂಗ್ರೆಸ್ ನಾಯಕ ಪ್ರಸೇನ್‌ಜಿತ್ ಪುಯಿಟಾಂಡಿಗೆ ಕರೆ ಮಾಡುವುದಾಗಿ ಹೇಳುತ್ತಿದ್ದಂತೆಯೇ ಯುವಕರು ಮನಬಂದಂತೆ ಹೊಡೆಯಲು ಶುರು ಮಾಡಿದ್ದಾರೆ ಎನ್ನಲಾಗಿದೆ. ಪತ್ನಿ ಮತ್ತು ಮಗ ಕೈಮುಗಿದು ಬೇಡಿಕೊಂಡರೂ ಬಿಡದ ದಾಳಿಕೋರರು ದೇಬ್ದೀಪ್ ಅವರನ್ನು ಬಲವಾಗಿ ತಳ್ಳಿ ನೆಲಕ್ಕೆ ಬೀಳಿಸಿದ್ದಾರೆ. ಇದರಿಂದ ಅವರ ತಲೆ ರಸ್ತೆಗೆ ಡಿಕ್ಕಿ ಹೊಡೆದು ಅವರು ಪ್ರಜ್ಞಾಹೀನರಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಘಟನೆಗೆ ಸಂಬಂಧಪಟ್ಟ ಆರೋಪಿಗಳು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೌನ್ಸಿಲರ್ ಅನಿಮೇಶ್ ದಾಸ್ ಸಹಾಯಕರು ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ಕೌನ್ಸಿಲರ್ ಅನಿಮೇಶ್ ದಾಸ್, ತಮಗೆ ಘಟನೆಯ ಬಗ್ಗೆ ಮತ್ತು ಅದಕ್ಕೆ ಕಾರಣರಾದವರಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಪ್ರಕರಣದ ಪ್ರಾಥಮಿಕ ತನಿಖೆ ಆರಂಭಿಸಿರುವ ಅಸನ್ಸೋಲ್ ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿಗಳು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮೋದಿ-ದೀದಿ ಒಂದೇ ನಾಣ್ಯದ ಎರಡು ಮುಖಗಳು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸೆರಾಂಪೋರ್‌ನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಬ್ಬರೂ ಬಡವರ ಹಿತ ಕಾಯುವ ಬದಲು ಕೇವಲ ಶ್ರೀಮಂತರಿಗೆ ಸಹಾಯ ಮಾಡುತ್ತಾ, ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ತಮ್ಮನ್ನು ತಾವು ದೇಶಭಕ್ತ ಎಂದು ಕರೆದುಕೊಳ್ಳುತ್ತಾರೆ, ಆದರೆ ವಾಸ್ತವದಲ್ಲಿ ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ, ಮೋದಿ ಎಲ್ಲಿಗೆ ಹೋದರೂ ಜನರಲ್ಲಿ ದ್ವೇಷ ಮತ್ತು ಭಯದ ವಾತಾವರಣ ಹರಡುತ್ತಿದ್ದಾರೆ, ಪ್ರಸ್ತುತ ದೇಶವು ಎರಡು ಭಿನ್ನ ಸಿದ್ಧಾಂತಗಳ ನಡುವಿನ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟ ರಾಹುಲ್​, ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಹರಡುತ್ತಿರುವ ದ್ವೇಷ ಹಾಗೂ ಹಿಂಸಾಚಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಏಕತೆ ಮತ್ತು ಸಹೋದರತ್ವದ ಹೋರಾಟವಾಗಿದೆ ಎಂದರು(ಏಜೆನ್ಸೀಸ್​).