Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ಬಿಜೆಪಿಯಲ್ಲಿ ನಿಮ್ಮ ನೆಚ್ಚಿನ ರಾಜಕಾರಣಿ ಯಾರು..?, ಇನ್‌ಸ್ಟಾಗ್ರಾಮ್‌ನ ಆಸ್ಕ್ ಮೀ ಎನಿಥಿಂಗ್ ಸಂವಾದದಲ್ಲಿ ಯುವಕರೊಬ್ಬರು ಕೇಳಿದ ಈ ಪ್ರಶ್ನೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ ಉತ್ತರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಸಣ್ಣದೊಂದು ಹಿಂಜರಿಕೆಯೂ ಇಲ್ಲದೆ ತಕ್ಷಣವೇ ಉತ್ತರಿಸಿದ ರಾಹುಲ್ ಗಾಂಧಿ, ಖಂಡಿತವಾಗಿಯೂ ಕ್ಯಾಪ್ಟನ್ ಅಮರಿಂದರ್ ಸಿಂಗ್, ಅವರು ತುಂಬಾ ಕೂಲ್ ಹಾಗೂ ಮಿಲಿಟರಿ ಇತಿಹಾಸದ ವಿಷಯದಲ್ಲಿ ಅದ್ಭುತ ಜ್ಞಾನ ಹೊಂದಿದ್ದಾರೆ ಎನ್ನುತ್ತಾ ಆತ್ಮೀಯವಾಗಿ ಹಲೋ, ಅಂಕಲ್ ಅಮರಿಂದರ್ ಎಂದು ಕರೆದು ಸರ್ಪ್ರೈಸ್ ನೀಡಿದ್ದಾರೆ.
ಕಳೆದ ತಿಂಗಳು ನೀಟ್ ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಪೊಲೀಸರ ಅಶ್ರುವಾಯು ಹಾಗೂ ಪೆಲೆಟ್ ಗನ್‌ಗಳ ದಾಳಿಗೆ ತುತ್ತಾಗಿದ್ದ ವಿದ್ಯಾರ್ಥಿಗಳ ನಿಯೋಗವನ್ನು ಭೇಟಿಯಾದ ಮರುದಿನವೇ ರಾಹುಲ್ ಗಾಂಧಿ ಈ ಸಂವಾದ ನಡೆಸಿದ್ದರು.
ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ, ಇತ್ತೀಚೆಗೆ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗಿನ ತಮ್ಮ ಸಂವಾದದ ತುಣುಕುಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದಾರೆ. ಭಾರತದ 1.4 ಬಿಲಿಯನ್ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, 2029 ರ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆಯುವ ವೇಳೆಗೆ ಜೆನ್ ಝೀ ಅತಿದೊಡ್ಡ ಮತದಾನದ ಬಣವಾಗುವ ನಿರೀಕ್ಷೆಯಿದೆ.
ಪಂಜಾಬ್‌ನ ಮಾಜಿ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ಸಿಎಂ ಹುದ್ದೆಯಿಂದ ದಿಢೀರ್ ತೆಗೆದುಹಾಕಿದ ನಂತರ ಕಾಂಗ್ರೆಸ್ ತೊರೆದಿದ್ದರು. ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಅವರು, ತಮ್ಮ ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷವನ್ನು 2022 ರಲ್ಲಿ ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. ಜೂನ್ ತಿಂಗಳಿನಲ್ಲಿ ನಡೆದ ಜನ್ಮದಿನದಂದು ರಾಹುಲ್ ಗಾಂಧಿ ತಮಗೆ ಶುಭ ಹಾರೈಸಿದ್ದರು ಮತ್ತು ತಮ್ಮ ಸಹೋದರನ ಅಗಲಿಕೆಗೆ ಸಂತಾಪ ಸೂಚಿಸಿದ್ದರು ಎಂಬುದನ್ನು ಅಮರಿಂದರ್ ಸಿಂಗ್ ಹಂಚಿಕೊಂಡಿದ್ದರು.
ಇಂತಹ ಸೌಜನ್ಯದ ನಡವಳಿಕೆ ಬಿಜೆಪಿಯಲ್ಲಿ ಇಲ್ಲ ಎಂದು ಹೇಳಿದ್ದ ಅವರು, ಕಾಂಗ್ರೆಸ್‌ನಲ್ಲಿ ಸಮಾಲೋಚನೆ ನಡೆಸುವ ರಾಜಕೀಯ ಸಂಸ್ಕೃತಿಯಿತ್ತು ಎಂದು ನೆನಪಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕತ್ವವು ಪಂಜಾಬ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ತಮ್ಮ ಅಭಿಪ್ರಾಯವನ್ನು ಕೇಳುತ್ತಿತ್ತು, ಆದರೆ ಬಿಜೆಪಿಯಲ್ಲಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯು ಹೆಚ್ಚು ಕೇಂದ್ರೀಕೃತವಾಗಿದೆ ಎಂದು ಸಿಂಗ್ ವಿವರಿಸಿದ್ದರು.
ಸಂವಾದದ ವೇಳೆ ನೀವು ಬ್ಯಾಟ್‌ಮ್ಯಾನ್ ಹೌದೇ..? ಎಂದು ಕೇಳಲಾದ ತಮಾಷೆಯ ಪ್ರಶ್ನೆಗೆ ರಾಹುಲ್ ಗಾಂಧಿ, ಯಾರೂ ನನ್ನನ್ನು ಮತ್ತು ಬ್ಯಾಟ್‌ಮ್ಯಾನ್ ಅನ್ನು ಒಂದೇ ಕೊಠಡಿಯಲ್ಲಿ ಒಟ್ಟಿಗೆ ನೋಡಿಲ್ಲ ಎಂಬುದಷ್ಟೇ ನಿಜ ಎಂದು ನಗೆಚಟಾಕಿ ಹಾರಿಸಿದರು. ಇನ್ನು ತಮ್ಮ ಮೇಲೆ ಪ್ರಭಾವ ಬೀರಿದ ತತ್ವಜ್ಞಾನದ ಬಗ್ಗೆ ಮಾತನಾಡುತ್ತಾ, ಭಾರತದ ಸಂವಿಧಾನವನ್ನು ರೂಪಿಸುವಲ್ಲಿ ಪ್ರಭಾವ ಬೀರಿದ ಭಗವಾನ್ ಬುದ್ಧ, ಗುರು ನಾನಕ್ ದೇವ್, ಬಸವಣ್ಣ, ಶಂಕರ್‌ದೇವ್, ಬಿರ್ಸಾ ಮುಂಡಾ, ಪೆರಿಯಾರ್, ಮಹಾತ್ಮ ಫುಲೆ, ನಾರಾಯಣ ಗುರು, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಗಾಂಧೀಜಿ ಅವರ ಚಿಂತನೆಗಳನ್ನು ಉಲ್ಲೇಖಿಸಿದರು.
ಕಳೆದ ಕೆಲವು ವಾರಗಳಿಂದ ರಾಜಕೀಯ ನಾಯಕರಲ್ಲಿ ಇನ್‌ಸ್ಟಾಗ್ರಾಮ್ ಪ್ರಮುಖ ಸಂವಹನ ವೇದಿಕೆಯಾಗಿ ಹೊರಹೊಮ್ಮಿದೆ. ಯುವಜನರನ್ನು ತಲುಪಲು ಬಿಜೆಪಿಯೂ ಸಕ್ರಿಯ ಪ್ರಯತ್ನ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮುನ್ನೆಲೆಯಲ್ಲಿಟ್ಟುಕೊಂಡು ರೀಲ್ಸ್‌ಗಳನ್ನು ಮಾಡುತ್ತಿದೆ. ಒಂದಲ್ಲ ಒಂದು ವೀಡಿಯೋದಲ್ಲಿ ಬಿಜೆಪಿಯು ಪ್ರಸಿದ್ಧ ಫ್ರೆಂಡ್ಸ್ ಸೀರಿಯಲ್‌ನ ಥೀಮ್ ಸಾಂಗ್ ಬಳಸಿಕೊಂಡು ಮೋದಿ ಅವರನ್ನು ಯುವಕರ ಪರವಾಗಿ ನಿಲ್ಲುವ ನಾಯಕನಾಗಿ ಬಿಂಬಿಸಿದೆ. ಯುವ ಪೀಳಿಗೆಯನ್ನು ತಲುಪಲು ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿರಲು ಪ್ರಧಾನಿ ಮೋದಿ ತಮ್ಮ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ(ಏಜೆನ್ಸೀಸ್).