3 ಲಕ್ಷ ರೂ. ವೆಚ್ಚದ ಮಾರ್ಬಲ್ ವಿಗ್ರಹದೊಂದಿಗೆ ತಲೆಎತ್ತಲಿದೆ ಪ್ರಧಾನಿ ಮೋದಿ ತಾಯಿಯ ದೇವಾಲಯ!  
ದೇಶ

3 ಲಕ್ಷ ರೂ. ವೆಚ್ಚದ ಮಾರ್ಬಲ್ ವಿಗ್ರಹದೊಂದಿಗೆ ತಲೆಎತ್ತಲಿದೆ ಪ್ರಧಾನಿ ಮೋದಿ ತಾಯಿಯ ದೇವಾಲಯ! ಎಲ್ಲಿ? ಏನಿದರ ವಿಶೇಷತೆ? Heeraben Modi Temple

ನವೆಂಬರ್ 15ರ ಭಾನುವಾರದಂದು ನಡೆದ ಈ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅದೋನಿಯ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಶಾಸಕ ಪಿ.ವಿ. ಪಾರ್ಥಸಾರಥಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೇವಾಲಯದ ನಿರ್ಮಾಣಕ್ಕೆ ಚಾಲನೆ ನೀಡಿದರು.

ವಿಜಯವಾಡ: ಪ್ರಧಾನಿ ನರೇಂದ್ರ ಮೋದಿಯವರ ದಿವಂಗತ ತಾಯಿ ಹೀರಾಬೆನ್ ಮೋದಿ ( Heeraben Modi Temple ) ಅವರ ಸ್ಮರಣಾರ್ಥ ಆಂಧ್ರಪ್ರದೇಶದಲ್ಲಿ ವಿನೂತನ ದೇವಾಲಯವೊಂದರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ.

ಮಾತೃಪ್ರೇಮ ಮತ್ತು ಗೌರವದ ಪ್ರತೀಕವಾಗಿ ಕರ್ನೂಲ್ ಜಿಲ್ಲೆಯ ಯಮ್ಮಿಗನೂರು ಮಂಡಲದ ಗುಡಿಕಲ್ ಗ್ರಾಮದಲ್ಲಿ ದೇವಾಲಯ ನಿರ್ಮಾಣವಾಗುತ್ತಿದ್ದು, ರಾಜಕೀಯ ಪಕ್ಷಗಳ ಗಡಿಯನ್ನು ಮೀರಿ ಎಲ್ಲರೂ ಕೈಜೋಡಿಸಿರುವುದು ವಿಶೇಷ ಗಮನ ಸೆಳೆದಿದೆ. ಮಾತಾ ಶ್ರೀ ಮಂದಿರಂ ಚಾರಿಟೇಬಲ್ ಸೊಸೈಟಿ ಈ ಕಾರ್ಯಕ್ಕೆ ಮುಂದಾಗಿದೆ.

ನವೆಂಬರ್ 15ರ ಭಾನುವಾರದಂದು ನಡೆದ ಈ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅದೋನಿಯ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಶಾಸಕ ಪಿ.ವಿ. ಪಾರ್ಥಸಾರಥಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೇವಾಲಯದ ನಿರ್ಮಾಣಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕೇವಲ ಬಿಜೆಪಿ ಮಾತ್ರವಲ್ಲದೆ, ಮಿತ್ರಪಕ್ಷ ಜನಸೇನಾ ಹಾಗೂ ಪ್ರತಿಪಕ್ಷ ವೈಎಸ್‌ಆರ್‌ಸಿಪಿ (YSRCP) ಪಕ್ಷಗಳ ಸ್ಥಳೀಯ ನಾಯಕರು ಮತ್ತು ಪ್ರತಿನಿಧಿಗಳು ಕೂಡ ಸಕ್ರಿಯವಾಗಿ ಪಾಲ್ಗೊಂಡು ನರೇಂದ್ರ ಮೋದಿಯವರ ತಾಯಿಗೆ ನಮನ ಸಲ್ಲಿಸಿದರು.

ಕೇವಲ ಹೀರಾಬೆನ್ ಮೋದಿ ಅವರ ವಿಗ್ರಹ ಪ್ರತಿಷ್ಠಾಪನೆಗೆ ಮಾತ್ರವಲ್ಲದೆ, ಈ ಬೃಹತ್ ದೇವಾಲಯ ಸಂಕೀರ್ಣದಲ್ಲಿ ದೇವಾನುದೇವತೆಗಳ ಸನ್ನಿಧಿಯೂ ತಲೆಎತ್ತಲಿದೆ. ಪ್ರಸ್ತಾವಿತ ದೇವಾಲಯದ ಸಂಕೀರ್ಣದಲ್ಲಿ ಹೀರಾಬೆನ್ ಅವರ ಗರ್ಭಗುಡಿಯ ಜತೆಗೆ ಪ್ರತ್ಯೇಕವಾಗಿ ಭಗವಾನ್ ಶಿವ, ದಕ್ಷಿಣಾಮೂರ್ತಿ, ಭಗವಾನ್ ಶ್ರೀರಾಮ ಮತ್ತು ಪ್ರಥಮ ಪೂಜಿತ ಗಣೇಶನ ಸನ್ನಿಧಿಗಳನ್ನು ಕೂಡ ನಿರ್ಮಿಸಲು ಮಾತಾ ಶ್ರೀ ಮಂದಿರಂ ಚಾರಿಟೇಬಲ್ ಸೊಸೈಟಿ ಯೋಜನೆ ರೂಪಿಸಿದೆ.

ಈ ದೇವಾಲಯಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ. ಸುಮಾರು 3 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಕರ್ಷಕವಾದ ಹೀರಾಬೆನ್ ಅವರ ಸುಂದರವಾದ ಮಾರ್ಬಲ್ ವಿಗ್ರಹವನ್ನು ವಿಶೇಷವಾಗಿ ಕೆತ್ತಿಸಿ ಸಿದ್ಧಪಡಿಸಿಡಲಾಗಿದೆ. ಚಾರಿಟೇಬಲ್ ಟ್ರಸ್ಟ್ ಮೊದಲು ದೇವಾಲಯದ ಆವರಣದಲ್ಲಿ ಗೋಶಲೆಯನ್ನು ನಿರ್ಮಿಸಲಿದ್ದು, ತದನಂತರ ಹೀರಾಬೆನ್ ಅವರ ದೇವಾಲಯದ ನಿರ್ಮಾಣ ಕಾರ್ಯವನ್ನು ಮುಂದುವರಿಸಲಿದೆ. ಇದರೊಂದಿಗೆ ಸಮಾಜಮುಖಿ ಚಿಂತನೆಯ ಭಾಗವಾಗಿ ಬಡ ಮಕ್ಕಳೆಡೆಗೆ ಪ್ರೀತಿ ತೋರಲು ಒಂದು ಅನಾಥಾಶ್ರಮವನ್ನು ನಿರ್ಮಿಸುವ ಯೋಜನೆಯನ್ನೂ ಟ್ರಸ್ಟ್ ಹೊಂದಿದೆ.

ಸಮಾಜದ ದಾನಿಗಳು ಮತ್ತು ಶ್ರೇಯೋಭಿಲಾಷಿಗಳ ದೇಣಿಗೆಯ ಸಹಾಯದಿಂದ ಈ ಸಂಪೂರ್ಣ ಬೃಹತ್ ಯೋಜನೆಯನ್ನು ಹಂತ ಹಂತವಾಗಿ ಪೂರ್ಣಗೊಳಿಸಲು ಟ್ರಸ್ಟ್ ನಿರ್ಧರಿಸಿದೆ. ಆದಾಗ್ಯೂ, ಈ ಸಂಪೂರ್ಣ ಯೋಜನೆಗೆ ತಗಲುವ ಅಂತಿಮ ವೆಚ್ಚದ ವಿವರಗಳನ್ನು ಟ್ರಸ್ಟ್ ಇನ್ನೂ ಬಹಿರಂಗಪಡಿಸಿಲ್ಲ.

ಅಂದಹಾಗೆ, ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಅವರು ತಮ್ಮ 99ನೇ ವಯಸ್ಸಿನಲ್ಲಿ ಅಂದರೆ, 2022ರ ಡಿಸೆಂಬರ್​ 30 ರಂದು ನಿಧನರಾದರು. ತಾಯಿಯ ಮೇಲಿನ ಅಪಾರ ಪ್ರೀತಿ ಹಾಗೂ ಅವರ ಆದರ್ಶಗಳನ್ನು ಸದಾ ಸ್ಮರಣೆಯಲ್ಲಿಡಲು ನಿರ್ಮಿಸುತ್ತಿರುವ ಈ ದೇವಾಲಯವು ಈಗ ಇಡೀ ದೇಶದ ಗಮನ ಸೆಳೆದಿದೆ, (ಏಜೆನ್ಸೀಸ್​).