ವಾಷಿಂಗ್ಟನ್: ಅಮೆರಿಕಾದ ಮೈನೆ ರಾಜ್ಯದಲ್ಲಿ ಭಾರಿ ಹಿಮಪಾತದಿಂದ ಖಾಸಗಿ ಜೆಟ್ವೊಂದು ಟೇಕ್ ಆಫ್ ಆಗುವ ವೇಳೆ ಪತನಗೊಂಡಿದ್ದು, ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೋಮವಾರ(ಜ. 26) ವರದಿಯಾಗಿದೆ.
ಮೈನೆ ರಾಜ್ಯದ ಬ್ಯಾಂಗೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 7.45ರ ಸುಮಾರಿಗೆ ಈ ಘಟನೆ ನಡೆದಿದೆ. ಒಟ್ಟು ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಬೊಂಬಾರ್ಡಿಯರ್ ಚಾಲೆಂಜರ್ 600 ಜೆಟ್ ವಿಮಾನ ನಿಲ್ದಾಣದಿಂದ ಹೊರಡುವಾಗ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್‌ಎಎ), ಜೆಟ್ ಪತನವನ್ನು ದೃಢಪಡಿಸಿದ್ದು, ಸಾವುನೋವುಗಳನ್ನು ಖಚಿತ ಪಡಿಸಿದೆ. ಮತ್ತು ಗಾಯಗೊಂಡ ಸಿಬ್ಬಂದಿಯನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿದೆ.
ಯುನೈಟೆಡ್ ಸ್ಟೇಟ್ಸ್‌ನ ದೊಡ್ಡ ಭಾಗಗಳಲ್ಲಿ ಚಳಿಗಾಲದ ಬೃಹತ್ ಬಿರುಗಾಳಿಗಳು ಬೀಸಿ, ಭಾರೀ ಹಿಮ, ಹಿಮಪಾತ ಮತ್ತು ಘನೀಕರಿಸುವ ಮಳೆಯನ್ನು ತಂದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇದು ದೇಶಾದ್ಯಂತ ವಾಯು ಮತ್ತು ರಸ್ತೆ ಪ್ರಯಾಣವನ್ನು ಅಡ್ಡಿಪಡಿಸಿದೆ. ಭಾನುವಾರ ಒಂದೇ ದಿನವೇ 12 ಸಾವಿರ ವಿಮಾನಗಳು ರದ್ದಾಗಿದ್ದು, 20 ಸಾವಿರ ವಿಮಾನ ಪ್ರಯಾಣಗಳು ವಿಳಂಬವಾಗಿವೆ ಎನ್ನಲಾಗಿದೆ (ಏಜೆನ್ಸೀಸ್).