ಘಟನೆಯ ಸ್ಥಳ 
ದೇಶ

ಭಾರಿ ಮಳೆ: ಕೆಲವೇ ವಾರಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸುರಂಗ ಕುಸಿತ; ಸಂಚಾರ ಅಸ್ತವ್ಯಸ್ತ | Tunnel collapses

ಮುಂಬೈ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲವೇ ವಾರಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ 7 ಸಾವಿರ ಕೋಟಿ ಮೌಲ್ಯದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸುರಂಗದ ಒಂದು ಭಾಗ ಕುಸಿದ(Tunnel collapses) ಹಿನ್ನೆಲೆ ಸೋಮವಾರ(ಜು. 06) ಭಾರಿ ಸಂಚಾರ ಅಸ್ತವ್ಯಸ್ಥ ಉಂಟಾಗಿದ್ದು, ಸಾವಿರಾರು ಪ್ರಯಾಣಿಕರು ಆಹಾರ, ನೀರು ಅಥವಾ ದಾರಿಯಿಲ್ಲದೆ ಗಂಟೆಗಟ್ಟಲೆ ಜಾಮ್​ನಲ್ಲಿ ಸಿಲುಕಿಕೊಂಡಿದ್ದಾರೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(MSRDC) ನಿರ್ಮಿಸಿದ 19 ಕಿ.ಮೀ. ಮಿಸ್ಸಿಂಗ್ ಲಿಂಕ್ ಯೋಜನೆಯನ್ನು 9 ವಾರಗಳ ಹಿಂದೆ ಅಷ್ಟೇ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಇದು ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು 20-25 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
ಸುರಂಗದ ಒಂದು ಬದಿ ಕುಸಿತದ ಪರಿಣಾಮ ಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ವಾಹನಗಳು ಹಲವಾರು ಗಂಟೆಗಳ ಕಾಲ ಸಿಲುಕಿಕೊಂಡಿವೆ. ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಮುಂಬೈ-ಪುಣೆ ಮತ್ತು ಪುಣೆ-ಮುಂಬೈ ಎರಡೂ ಎಕ್ಸ್​ಪ್ರೆಸ್​​ವೇನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಲು ಎಂಎಸ್‌ಆರ್‌ಡಿಸಿ ಜನರಿಗೆ ಸಲಹೆ ನೀಡಿದೆ.
ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನಮ್ಮ ನಿಯಂತ್ರಣಕ್ಕೆ ಮೀರಿದ ಹಲವು ವಿಷಯಗಳಿವೆ. ಮಳೆ ತುಂಬಾ ಜೋರಾಗಿದ್ದು, ಮಿಸ್ಸಿಂಗ್ ಲಿಂಕ್‌ನಲ್ಲಿ ಭೂಕುಸಿತ ಉಂಟಾಗಿದೆ. ಮೊದಲ ಬಾರಿಗೆ ಹೆದ್ದಾರಿಯ ಆ ನಿರ್ದಿಷ್ಟ ಭಾಗದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ರಸ್ತೆಯಲ್ಲಿ 100 ಟನ್‌ಗಳಿಗೂ ಹೆಚ್ಚು ಅವಶೇಷಗಳು ಸಂಗ್ರಹಗೊಂಡಿವೆ. ಆದಾಗ್ಯೂ, ಅಗ್ನಿಶಾಮಕ ದಳ ಮತ್ತು ಇತರ ಸರ್ಕಾರಿ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಅವಶೇಷಗಳನ್ನು ತೆರವುಗೊಳಿಸಿದರು ಎಂದು ಹೇಳಿದ್ದಾರೆ.
ಇನ್ನೂ ಸುರಂಗ ಕುಸಿತಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಭ್ರಷ್ಟಾಚಾರವು ಯೋಜನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದೆ. ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, ಭ್ರಷ್ಟಾಚಾರ ಎಷ್ಟು ದೊಡ್ಡದಾಗಿದೆ ಎಂದರೆ, ಗುತ್ತಿಗೆದಾರರು ಶಾಸಕರು, ಸಂಸದರು, ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಶೇಕಡಾ 50 ಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಯಿತು, ಇದರ ಪರಿಣಾಮವಾಗಿ ಉದ್ಘಾಟನೆಯಾದ ಒಂಬತ್ತು ವಾರಗಳಲ್ಲಿ ಕಳಪೆ ಕೆಲಸ ಕುಸಿದು ಬಿದ್ದಿತು. ಮಿಸ್ಸಿಂಗ್ ಲಿಂಕ್‌ಗಾಗಿ ಖರ್ಚು ಮಾಡಿದ 7,000 ಕೋಟಿ ರೂ. ಮಳೆಯಲ್ಲಿ ಕೊಚ್ಚಿಹೋಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).