ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಾಜೌರಿಯಲ್ಲಿ ಭಾನುವಾರ(ಜು. 19) ಸುರಿದ ಭಾರೀ ಮತ್ತು ನಿರಂತರ ಮಳೆಯಿಂದಾಗಿ(Heavy rain) ಹನ್ನೆರಡು ಜನ ಮೃತಪಟ್ಟಿದ್ದು, ಮನೆಗಳು ಮತ್ತು ರಸ್ತೆಗಳು ಹಾನಿಗೊಳಗಾಗಿದ್ದು, ವಾಹನಗಳು ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ.
ಹವಾಮಾನ ಇಲಾಖೆಯೂ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು, ಸಿಎಂ ಓಮರ್ ಅಬ್ದುಲ್ಲಾ, ತಮ್ಮ ದೆಹಲಿ ಭೇಟಿಯನ್ನು ರದ್ದುಗೊಳಿಸಿ ಜಮ್ಮುವಿಗೆ ಮರಳುತ್ತಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
ನಿರಂತರ ಮಳೆಯಿಂದಾಗಿ ಸುರಂಕೋಟೆಯ ಗಡಿ ಪ್ರದೇಶ ಮತ್ತು ಪೂಂಚ್‌ನ ಗಡಿ ಜಿಲ್ಲೆಯ ಇತರ ಪ್ರದೇಶಗಳಲ್ಲಿ ಭಾರೀ ಪ್ರವಾಹ ಮತ್ತು ಮಣ್ಣು ಕುಸಿತ ಉಂಟಾಗಿದೆ. ಸುರಂಕೋಟ್‌ನ ಲೋವರ್ ಮುರ್ರಾ ಪ್ರದೇಶವು ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ. ಅಲ್ಲಿ ಪ್ರವಾಹದ ನೀರು ಮತ್ತು ಭೂಕುಸಿತದ ಅವಶೇಷಗಳು ವಸತಿ ಪ್ರದೇಶಗಳಿಗೆ ನುಗ್ಗಿ ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಪೂಂಚ್ ಮುಖ್ಯ ವೈದ್ಯಾಧಿಕಾರಿ ಡಾ. ಪರ್ವೇಜ್ ಅಹ್ಮದ್ ಖಾಸಗಿ ದಿನಪತ್ರಿಕೆಯೊಂದಿಗೆ ಮಾತನಾಡಿದ್ದು, ನಿನ್ನೆ ಸಂಜೆಯಿಂದ ಗಡಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಠಾತ್ ಪ್ರವಾಹ ಮತ್ತು ಮಣ್ಣು ಕುಸಿತದಿಂದಾಗಿ ಅನೇಕ ಮನೆಗಳು ಕುಸಿದಿವೆ. ಪೂಂಚ್ ಜಿಲ್ಲೆಯಲ್ಲಿ ಈವರೆಗೆ ಭೂಕುಸಿತದಿಂದ 11 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ಮರ್ಹೋಟೆ ಪ್ರದೇಶದಲ್ಲಿ ಹೊಳೆಯಲ್ಲಿ ಕೊಚ್ಚಿ ಹೋದ ಅಪ್ರಾಪ್ತ ಬಾಲಕಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ನಂತರ ಆಕೆಯ ಶವವನ್ನು ಹೊರತೆಗೆಯಲಾಗಿದ್ದು, ಧುಂಡಕ್ ಸೇತುವೆ ಬಳಿಯ ಹೊಳೆಯಿಂದ ಅಪರಿಚಿತ ಮಹಿಳೆಯ ಶವವನ್ನು ಹೊರತೆಗೆಯಲಾಗಿದೆ.
ನೆರೆಯ ರಾಜೌರಿ ಜಿಲ್ಲೆಯಲ್ಲಿ ಮುಂಜಾನೆ 2.30 ರ ಸುಮಾರಿಗೆ ರಾಜೌರಿಯ ಬೇಲೆ ವಾಲಾದಲ್ಲಿರುವ ಜನರಲ್ ಬಸ್ ನಿಲ್ದಾಣದಲ್ಲಿ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದೆ. ಹಲವು ವಸತಿ ಮನೆಗಳಿಗೆ ನೀರು ನುಗ್ಗಿದ್ದು, ಮತ್ತು ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಅನೇಕ ಖಾಸಗಿ ಮತ್ತು ಸಾರ್ವಜನಿಕ ವಾಹನಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ ಎನ್ನಲಾಗಿದೆ.
ಭಾರೀ ಮಳೆಯಿಂದ ಹಾನಿಗೊಳಗಾದ ಎರಡೂ ಗಡಿ ಜಿಲ್ಲೆಗಳಲ್ಲಿ ಅಧಿಕಾರಿಗಳು ಬೃಹತ್ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಆದರೆ, ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎನ್ನಲಾಗಿದೆ (ಏಜೆನ್ಸೀಸ್).