ಶಾಲೆಯೊಂದರ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್
- ಶಾಲೆಯೊಂದರ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್
- ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ನಡೆದಿದೆ ಎನ್ನಲಾದ ಘಟನೆ
- ಶಿಕ್ಷಕಿ ವಿರುದ್ಧ ತನಿಖೆಗೆ ಆಗ್ರಹ
ಚಿತ್ರಕೂಟ: ಶಾಲೆ ಎಂದರೆ ಅದು ವಿದ್ಯೆ ಕಲಿಸುವ ಕಲಿಸುವ ದೇಗುಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಗುರುಗಳು ಅಲ್ಲಿ ಆದರ್ಶವಾಗಿರಬೇಕು. ಆದರೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿರುವ ಘಟನೆ ಇಡೀ ಶಿಕ್ಷಣ ಕ್ಷೇತ್ರವೇ ತಲೆತಗ್ಗಿಸುವಂತೆ ಮಾಡಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರು ಪುಟ್ಟ ಬಾಲಕಿಯರಿಂದ ಮಸಾಜ್ (Massage from Students) ಮಾಡಿಸಿಕೊಳ್ಳುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲೇನಿದೆ?
ಚಿತ್ರಕೂಟದ ಕಾರ್ವಿ ಪ್ರದೇಶದ ನಯಾ ಬಜಾರ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಮಧು ಕುಮಾರಿ ಎಂಬುವವರು ಶಾಲಾ ಕೊಠಡಿಯ ನೆಲದ ಮೇಲೆ ಚಾಪೆ ಹಾಸಿ ಆರಾಮವಾಗಿ ಮಲಗಿ ಅವರ ಸುತ್ತಲೂ ಪುಟ್ಟ ವಿದ್ಯಾರ್ಥಿನಿಯರು ನಿಂತಿದ್ದು, ಒಬ್ಬೊಬ್ಬರೇ ಮಸಾಜ್ ಮಾಡುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ.
ಕೇವಲ ಕೈಗಳಿಂದ ಮಸಾಜ್ ಮಾಡಿಸಿಕೊಳ್ಳುವುದಕ್ಕೆ ಈ ಶಿಕ್ಷಕಿ ತೃಪ್ತರಾದಂತೆ ಕಾಣುತ್ತಿಲ್ಲ. ವಿಡಿಯೋದಲ್ಲಿ ಕಂಡುಬಂದಂತೆ, ವಿದ್ಯಾರ್ಥಿನಿಯೊಬ್ಬಳು ಚಪಾತಿ ಲಟ್ಟಿಸುವ ಲಟ್ಟಣಿಗೆ (ರೋಲಿಂಗ್ ಪಿನ್) ಹಿಡಿದು ಶಿಕ್ಷಕಿಯ ಬೆನ್ನಿನ ಮೇಲೆ ಮಸಾಜ್ ಮಾಡುತ್ತಿದ್ದಾಳೆ.
ಇನ್ನು ಕೆಲವರು ಕೈ ಮತ್ತು ಕಾಲುಗಳಿಂದ ಮಸಾಜ್ ಮಾಡುತ್ತಿದ್ದರೆ, ಮುಖ್ಯೋಪಾಧ್ಯಾಯಿನಿ ಮಾತ್ರ ಯಾವುದೋ ರಾಜಮನೆತನದ ಸುಖ ಅನುಭವಿಸುವಂತೆ ಆರಾಮವಾಗಿ ಮೊಬೈಲ್ ನೋಡುತ್ತಾ ಮಲಗಿದ್ದಾರೆ. ಈ ದೃಶ್ಯಗಳನ್ನು ಕಂಡು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಶಿಕ್ಷಣ ವ್ಯವಸ್ಥೆಗೆ ಕಪ್ಪುಚುಕ್ಕೆ
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅಕ್ಷರ ಕಲಿಯಲಿ ಎಂದು, ಆದರೆ ಇಲ್ಲಿ ಶಿಕ್ಷಕಿಯರು ಮಕ್ಕಳನ್ನು ತಮ್ಮ ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಈಗ ಎದ್ದಿದೆ. ಶಾಲಾ ಅವಧಿಯಲ್ಲೇ ಇಂತಹ ಕೃತ್ಯ ನಡೆದಿದ್ದು, ಮಕ್ಕಳ ಸುರಕ್ಷತೆ ಮತ್ತು ಶಾಲಾ ವಾತಾವರಣದ ಬಗ್ಗೆ ಪೋಷಕರಲ್ಲಿ ಕಳವಳ ಮೂಡಿಸಿದೆ. ಮಕ್ಕಳು ಶಾಲೆಗೆ ಹೋಗುವುದು ಸೇವಕರಾಗಲಿಕ್ಕಲ್ಲ, ವಿದ್ಯಾರ್ಥಿಗಳಾಗಲಿಕ್ಕೆ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಕಠಿಣ ಕ್ರಮದ ಎಚ್ಚರಿಕೆ
ಈ ನಾಚಿಕೆಗೇಡಿನ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ, ತಕ್ಷಣವೇ ತನಿಖೆಗೆ ಆದೇಶಿಸಿದೆ. ಮುಖ್ಯೋಪಾಧ್ಯಾಯಿನಿ ಮಧು ಕುಮಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಶಿಕ್ಷಕ ವೃತ್ತಿಯ ಘನತೆಗೆ ಚ್ಯುತಿ ತರುವ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ,(ಏಜನ್ಸೀಸ್).