ಜನಸೇವೆಗಾಗಿ ಸ್ಟಾರ್‌ಗಿರಿಯನ್ನು ತ್ಯಾಗ ಮಾಡಿದ್ದಾರೆ! ತಮಿಳುನಾಡು ಸಿಎಂ ವಿಜಯ್ ನಿರ್ಧಾರಕ್ಕೆ ರಾಮ್ ಚರಣ್ ಶ್ಲಾಘನೆ!  
ದೇಶ

ಜನಸೇವೆಗಾಗಿ ಸ್ಟಾರ್‌ಗಿರಿಯನ್ನು ತ್ಯಾಗ ಮಾಡಿದ್ದಾರೆ! ತಮಿಳುನಾಡು ಸಿಎಂ ವಿಜಯ್ ನಿರ್ಧಾರಕ್ಕೆ ರಾಮ್ ಚರಣ್ ಶ್ಲಾಘನೆ! Ram Charan praises CM Vijay

ಚೆನ್ನೈ: ತಮ್ಮ ಚಿತ್ರರಂಗದ ಉತ್ತುಂಗದ ಸ್ಟಾರ್‌ಗಿರಿಯನ್ನು ಮತ್ತು ಅತ್ಯುನ್ನತ ಯಶಸ್ಸನ್ನು ಬದಿಗಿಟ್ಟು, ಜನರ ಸೇವೆಗಾಗಿ ರಾಜಕೀಯಕ್ಕೆ ಧುಮುಕಿದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ನಿರ್ಧಾರ ನಿಜಕ್ಕೂ ಹೆಮ್ಮೆ ತರುವಂತದ್ದು ಎಂದು ಟಾಲಿವುಡ್‌ನ ಸ್ಟಾರ್​ನಟ ರಾಮ್ ಚರಣ್(Ram Charan praises CM Vijay) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಆರು ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗಳ ಆಡಳಿತವನ್ನು ಕೊನೆಗಾಣಿಸಿ, ಕಳೆದ ತಿಂಗಳು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ಸಿ. ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ್ದರು. ಈ ಐತಿಹಾಸಿಕ ಬೆಳವಣಿಗೆಯನ್ನು ಭಾರತೀಯ ಚಿತ್ರರಂಗದ ಪ್ರಮುಖ ನಾಯಕರು ಕೊಂಡಾಡುತ್ತಿದ್ದಾರೆ.

ರಾಮ್ ಚರಣ್ ಹೆಮ್ಮೆಯ ನುಡಿಗಳು

ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ಪೆದ್ದಿ ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗ್ಲೋಬಲ್ ಸ್ಟಾರ್ ರಾಮ್ ಚರಣ್, ತಮಿಳುನಾಡು ಸಿಎಂ ವಿಜಯ್ ಅವರನ್ನು ಶ್ಲಾಘಿಸಿದ್ದಾರೆ. ನಾನು ತಮಿಳುನಾಡಿನ ನೂತನ ಮುಖ್ಯಮಂತ್ರಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಗೌರವಾನ್ವಿತ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜನರ ಸೇವೆಗಾಗಿ ತಮ್ಮ ವೃತ್ತಿಜೀವನದ ಅತ್ಯುನ್ನತ ತಾರಾ ವರ್ಚಸ್ಸನ್ನು ತ್ಯಾಗ ಮಾಡಿದ್ದಾರೆ. ಚಿತ್ರರಂಗದ ಒಬ್ಬ ಸದಸ್ಯನಾಗಿ ನನಗೆ ಅವರ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ತಮಿಳುನಾಡಿನ ಜನತೆಗೆ ಮತ್ತು ವಿಜಯ್ ಸರ್ ಅವರಿಗೆ ನನ್ನ ಶುಭಾಶಯಗಳು ಎಂದು ರಾಮ್ ಚರಣ್ ಹೇಳಿದ್ದಾರೆ.
ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದಿಂದ ಬಂದು ರಾಜಕೀಯ ಶಕ್ತಿಯಾಗಿ ಬೆಳೆದ ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರಂತಹ ದಿಗ್ಗಜ ನಾಯಕರ ಸಾಲಿಗೆ ಈಗ 'ದಳಪತಿ' ವಿಜಯ್ ಸೇರ್ಪಡೆಯಾಗಿದ್ದಾರೆ.

ನೆಹರು ಕ್ರೀಡಾಂಗಣದಲ್ಲಿ ಅದ್ಧೂರಿ ಪ್ರಮಾಣ ವಚನ

51 ವರ್ಷದ ನಟ ಕಮ್ ರಾಜಕಾರಣಿ ವಿಜಯ್ ಅವರು ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜನಸಾಗರದ ಮಧ್ಯೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಅದ್ಧೂರಿ ಸಮಾರಂಭದಲ್ಲಿ ವಿಜಯ್ ಅವರ ಪೋಷಕರಾದ ಎಸ್‌ಎ ಚಂದ್ರಶೇಖರ್ ಮತ್ತು ಶೋಭಾ, ಖ್ಯಾತ ನಟಿ ತ್ರಿಷಾ ಕೃಷ್ಣನ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ದೇಶದ ಪ್ರಮುಖ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಅಧಿಕಾರ ಬೋಧಿಸಿದ್ದರು.

ಹಲವು ದಿನಗಳ ತೀವ್ರ ಕಸರತ್ತಿನ ನಂತರ ಮೈತ್ರಿ ಸರ್ಕಾರ

ಕೇವಲ ಎರಡು ವರ್ಷಗಳ ಹಿಂದೆ (2024ರಲ್ಲಿ) ಸ್ಥಾಪನೆಯಾಗಿದ್ದ ಟಿವಿಕೆ ಪಕ್ಷಕ್ಕೆ ಅಧಿಕಾರದ ಗದ್ದುಗೆ ಏರುವುದು ಅಷ್ಟು ಸುಲಭವಾಗಿರಲಿಲ್ಲ. ಒಟ್ಟು 234 ವಿಧಾನಸಭಾ ಸ್ಥಾನಗಳ ಪೈಕಿ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತಾದರೂ, ಬಹುಮತಕ್ಕೆ ಬೇಕಾದ 118 ರ ಮ್ಯಾಜಿಕ್ ನಂಬರ್ ತಲುಪಲು 10 ಸ್ಥಾನಗಳ ಕೊರತೆ ಇತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ರಾಜ್ಯಪಾಲರನ್ನು ಹಲವು ಬಾರಿ ಭೇಟಿ ಮಾಡಿ, ತೀವ್ರ ರಾಜಕೀಯ ಮಾತುಕತೆ ನಡೆಸಿದರು. ಅಂತಿಮವಾಗಿ 5 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಮತ್ತು ತಲಾ 2 ಸ್ಥಾನಗಳನ್ನು ಹೊಂದಿರುವ ಸಿಪಿಐ ಹಾಗೂ ಸಿಪಿಐ-ಎಂ (ಎಡಪಕ್ಷಗಳು) ಪಕ್ಷಗಳ ಬೆಂಬಲದೊಂದಿಗೆ ಒಟ್ಟು 120 ಶಾಸಕರ ಬಲದೊಂದಿಗೆ ವಿಜಯ್ ಯಶಸ್ವಿಯಾಗಿ ಮೈತ್ರಿ ಸರ್ಕಾರವನ್ನು ರಚಿಸಿದರು.
1974 ರಲ್ಲಿ ಚೆನ್ನೈನಲ್ಲಿ ಜನಿಸಿದ ವಿಜಯ್, ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿ ನಂತರ ತಮಿಳು ಚಿತ್ರರಂಗದ ಸರ್ವೋಚ್ಚ ನಾಯಕರಾಗಿ ಬೆಳೆದರು. 1994 ರ 'ರಸಿಗನ್' ಚಿತ್ರದ ನಂತರ ಅವರಿಗೆ ದಳಪತಿ ಎಂಬ ಬಿರುದು ಒಲಿಯಿತು. 'ತುಪ್ಪಾಕಿ', 'ಕತ್ತಿ', 'ಮೆರ್ಸಲ್', 'ಬಿಗಿಲ್' ಮತ್ತು 'ಲಿಯೋ' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ಅವರು, ತಮ್ಮ ಕೊನೆಯ ಸಿನಿಮಾ ಘೋಷಿಸಿ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಸಮರ್ಪಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಭಾಷಣದಲ್ಲಿ, ತಾವು ಒಬ್ಬ ಸಾಮಾನ್ಯ ಮನುಷ್ಯ ಎಂದು ಬಣ್ಣಿಸಿಕೊಂಡ ವಿಜಯ್, ರಾಜ್ಯದಲ್ಲಿ ನಿಜವಾದ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಯುಗವನ್ನು ತರುವುದಾಗಿ ಭರವಸೆ ನೀಡಿದ್ದಾರೆ,(ಏಜೆನ್ಸೀಸ್​).