ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ, ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕ್ ಬರ್ಬರ ಹತ್ಯೆ, ನಿರ್ದೇಶಕ ರೋಹಿತ್ ಶೆಟ್ಟಿಗೆ ಜೀವ ಬೆದರಿಕೆ, ಇದೀಗ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್!.
ಈ ಎಲ್ಲಾ ಪ್ರಕರಣಗಳ ಹಿಂದಿರುವ ಶಕ್ತಿ ಎಂದರೆ ಅದು ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಕುಖ್ಯಾತ ಬಿಷ್ಣೋಯ್ ಗ್ಯಾಂಗ್ ಆಗಿದೆ. ಕಳೆದ ಮೂರು ವರ್ಷಗಳಿಂದ ಈ ಗ್ಯಾಂಗ್ ಮುಂಬೈನಲ್ಲಿ ತನ್ನ ಅಟ್ಟಹಾಸವನ್ನು ನಡೆಸುತ್ತಲೇ ಬಂದಿದೆ.
ಆದರೆ, ಇಷ್ಟೆಲ್ಲಾ ರಾದ್ಧಾಂತಗಳು ನಡೆಯುತ್ತಿದ್ದರೂ ಮುಂಬೈ ಪೊಲೀಸರಿಗೆ ಲಾರೆನ್ಸ್ ಬಿಷ್ಣೋಯಿಯನ್ನು ಮುಟ್ಟಲು ಕೂಡ ಸಾಧ್ಯವಾಗುತ್ತಿಲ್ಲ. ಕಸ್ಟಡಿಗೆ ಪಡೆದು ಮುಖಾಮುಖಿ ವಿಚಾರಣೆ ನಡೆಸಲು ಇರುವ ಕಾನೂನಿನ ತೊಡಕು ಪೊಲೀಸರ ಕೈ ಕಟ್ಟಿಹಾಕಿದೆ ಎಂದು ಹೇಳಲಾಗುತ್ತಿದೆ.
ಲಾರೆನ್ಸ್ ಬಿಷ್ಣೋಯಿ ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಾಬರಮತಿ ಜೈಲಿನಲ್ಲಿದ್ದಾನೆ. ಈತನನ್ನು ಜೈಲಿನಿಂದ ಹೊರಗೆ ತರದಂತೆ ಕೇಂದ್ರ ಗೃಹ ಸಚಿವಾಲಯವೇ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
2023ರ ಆಗಸ್ಟ್‌ನಲ್ಲಿ ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯವು ಸಿಆರ್ಪಿಸಿ ಸೆಕ್ಷನ್ 268 ರ ಅಡಿಯಲ್ಲಿ ಬಿಷ್ಣೋಯಿಯನ್ನು ಜೈಲಿನಿಂದ ಹೊರಗೆ ಕರೆದೊಯ್ಯುವುದನ್ನು ನಿಷೇಧಿಸಿತ್ತು. ಇದೀಗ ಹೊಸದಾಗಿ ಜಾರಿಗೆ ಬಂದಿರುವ 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ' (BNSS) ಸೆಕ್ಷನ್ 303ರ ಅಡಿಯಲ್ಲಿ ಈ ಆದೇಶವನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಸಾರ್ವಜನಿಕ ಶಾಂತಿ ಕಾಪಾಡುವುದು ಮತ್ತು ಕರೆದೊಯ್ಯುವಾಗ ಸಂಭವಿಸಬಹುದಾದ ಭೀಕರ ಗ್ಯಾಂಗ್‌ವಾರ್ ತಪ್ಪಿಸುವುದು ಈ ಆದೇಶದ ಮುಖ್ಯ ಉದ್ದೇಶವೆಂದು ಹೇಳಲಾಗುತ್ತಿದೆ.
ಈ ಕಠಿಣ ಕಾನೂನಿನ ಫಲವಾಗಿ, ಯಾವುದೇ ನ್ಯಾಯಾಲಯ ಪ್ರೊಡಕ್ಷನ್ ವಾರಂಟ್ ಹೊರಡಿಸಿದರೂ, ಯಾವುದೇ ತನಿಖಾ ಸಂಸ್ಥೆ ಕಸ್ಟಡಿ ಕೇಳಿದರೂ ಈತನನ್ನು ಹೊರಗೆ ತರುವಂತಿಲ್ಲ. ವಿಚಾರಣೆ ಮಾಡಲೇಬೇಕೆಂದರೆ ಕೇವಲ ವಿಡಿಯೋ ಕಾಲ್ ಮೂಲಕ ಅಥವಾ ಸಬರಮತಿ ಜೈಲಿಗೆ ಹೋಗಿ ಮಾತ್ರ ಮಾತನಾಡಿಸಲು ಅವಕಾಶ ನೀಡಲಾಗಿದೆ.
ಅಂದಹಾಗೆ ಇಂತಹ ವಿಶೇಷ ಕಾನೂನು ರಕ್ಷಣೆಯನ್ನು ದೇಶದಲ್ಲಿ ಲಾರೆನ್ಸ್ ಒಬ್ಬನೇ ಪಡೆದಿಲ್ಲ. ಈ ಹಿಂದೆ 2015 ರಲ್ಲಿ ಇಂಡೋನೇಷ್ಯಾದಿಂದ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಗಡೀಪಾರು ಮಾಡಿದಾಗ ಆತನನ್ನೂ ದೆಹಲಿಯ ತಿಹಾರ್ ಜೈಲಿನಲ್ಲಿ ಇದೇ ರೀತಿಯ ಬಿಗಿ ಭದ್ರತೆಯಲ್ಲಿಡಲಾಗಿತ್ತು.
ಮುಂಬೈ ಪೊಲೀಸರಲ್ಲೇ ದಾವೂದ್ ಇಬ್ರಾಹಿಂ ಪರ ಕೆಲಸ ಮಾಡುವವರಿದ್ದಾರೆ, ಮುಂಬೈಗೆ ಹೋದರೆ ತನ್ನ ಜೀವಕ್ಕೆ ಅಪಾಯವಿದೆ ಎಂದು ರಾಜನ್ ಹೇಳಿಕೊಂಡಿದ್ದ. ಇನ್ನು ಬಿಷ್ಣೋಯಿಯ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯಿ ಕೂಡ ಅಮೆರಿಕದಿಂದ ಗಡೀಪಾರಾಗಿ ಬಂದಾಗಿನಿಂದ ತಿಹಾರ್ ಜೈಲಿನಲ್ಲಿ ಇದೇ ನಿಯಮದಡಿ ಲಾಕ್ ಆಗಿದ್ದಾನೆ.
ಪಂಜಾಬ್, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ವಿದೇಶಗಳಲ್ಲೂ ಹತ್ತಾರು ಕ್ರಿಮಿನಲ್ ಕೇಸ್‌ಗಳಿರುವ ಬಿಷ್ಣೋಯಿ, ಜೈಲಿನಲ್ಲೇ ಕೂತು ತನ್ನ ನೆಟ್‌ವರ್ಕ್ ಆಪರೇಟ್ ಮಾಡುತ್ತಿದ್ದಾನೆ ಎಂಬ ಗಂಭೀರ ಆರೋಪಗಳಿವೆ.
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಿಷ್ಣೋಯ್ ಸಮುದಾಯದ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ನಿಮ್ಮ ಕುಟುಂಬವನ್ನೇ ಬಿಡುವುದಿಲ್ಲ ಎಂದು ನಟ ಸಲ್ಮಾನ್ ಖಾನ್ಗೆ ಇತ್ತೀಚೆಗಷ್ಟೇ ಧಮಕಿ ಹಾಕಲಾಗಿತ್ತು. ಇದರ ಮುಂದುವರಿದ ಭಾಗವಾಗಿ, ಸಲ್ಮಾನ್‌ಗೆ ಆಪ್ತರಾಗಿರುವ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಜುಹುವಿನಲ್ಲಿ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅಮೆರಿಕದಲ್ಲಿರುವ ಬಿಷ್ಣೋಯ್ ಗ್ಯಾಂಗ್‌ನ ಅನಿಲ್ ಪಂಡಿತ್ ಆಡಿಯೋ ಸಂದೇಶ ಹಂಚಿಕೊಂಡು, ಈ ಕೃತ್ಯ ತಮ್ಮದೇ ಎಂದು ಹೇಳಿಕೊಂಡಿದ್ದಾನೆ. ನಂತರ ಪೊಲೀಸರು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಶೂಟರ್‌ಗಳನ್ನು ಅರೆಸ್ಟ್ ಮಾಡಿದ್ದಾರೆ, (ಏಜೆನ್ಸೀಸ್).