Dilip Ghosh | ಬಂಗಾಳದಲ್ಲಿ ಎಗ್​ ಬೆಲೆ ಏರಿದ್ದಕ್ಕೂ ದೀದಿ ಪಕ್ಷವೇ ಕಾರಣ ಎಂದು ಲೇವಡಿ ಮಾಡಿದ ಸಚಿವ ಘೋಷ್ 
ದೇಶ

ಕಲ್ಲೇನು ಎಸೆಯುತ್ತಿಲ್ಲವಲ್ಲ, ಮೊಟ್ಟೆ ತಾನೇ..? ಬಂಗಾಳದಲ್ಲಿ ಎಗ್​ ಬೆಲೆ ಏರಿದ್ದಕ್ಕೂ ದೀದಿ ಪಕ್ಷವೇ ಕಾರಣ ಎಂದು ಲೇವಡಿ ಮಾಡಿದ ಸಚಿವ ಘೋಷ್ | Dilip Ghosh

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಎದುರು ಹೀನಾಯ ಸೋಲು ಕಂಡ ಬೆನ್ನಲ್ಲೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ನಾಯಕರು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಈಡಾಗಿದ್ದಾರೆ. ರಾಜ್ಯ ರಾಜಕೀಯ ಕದನದಲ್ಲಿ ಈಗ ಮೊಟ್ಟೆಗಳು ಮುಂಚೂಣಿಗೆ ಬಂದಿದ್ದು, ಕೋಪಗೊಂಡ ನಾಗರಿಕರು ಮೊಟ್ಟೆ ದಾಳಿಗಳ ಮೂಲಕ ಟಿಎಂಸಿ ನಾಯಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಸಂಸದರಾದ ಕುನಾಲ್ ಘೋಷ್, ಮಹುವಾ ಮೊಯಿತ್ರಾ ಮತ್ತು ಹಲವು ಮಾಜಿ ಸಚಿವರು ಸಾರ್ವಜನಿಕವಾಗಿ ಮೊಟ್ಟೆ ದಾಳಿಯನ್ನು ಎದುರಿಸಿದ್ದಾರೆ. ಈ ಸರಣಿಯ ಅತ್ಯಂತ ಆಘಾತಕಾರಿ ಘಟನೆ ಬುಧವಾರ ಕೋಲ್ಕತ್ತಾದಲ್ಲಿ ನಡೆದಿದೆ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಬೃಹತ್ ರ‍್ಯಾಲಿಯ ಮೇಲೆಯೇ ಪ್ರತಿಭಟನಾಕಾರರು ಮೊಟ್ಟೆಗಳನ್ನು ಎಸೆದಿದ್ದಾರೆ. ಅಷ್ಟೇ ಅಲ್ಲದೆ, ಟಿಎಂಸಿ ನಾಯಕರನ್ನು ನೋಡಿ ಚೋರ್-ಚೋರ್ (ಕಳ್ಳ-ಕಳ್ಳ) ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಇದು ಹೊಸ ಆವಿಷ್ಕಾರ, ಕಲ್ಲು ಎಸೆಯುತ್ತಿಲ್ಲವಲ್ಲ!: ಘೋಷ್

ಈ ಹೊಸ ಪ್ರತಿಭಟನೆಯ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಸಚಿವ ದಿಲೀಪ್ ಘೋಷ್ ಇದನ್ನು ವಿಭಿನ್ನವಾಗಿ ಸಮರ್ಥಿಸಿಕೊಂಡಿದ್ದಾರೆ. ಎನ್‌ಡಿಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇದು ಜನರ ಆಕ್ರೋಶದ ಹೊಸ ಆವಿಷ್ಕಾರ. ಕನಿಷ್ಠ ಪಕ್ಷ ಜನ ಕಲ್ಲು-ಇಟ್ಟಿಗೆಗಳನ್ನಂತೂ ಎಸೆಯುತ್ತಿಲ್ಲವಲ್ಲ..? ಮೊಟ್ಟೆ ದಾಳಿಯಿಂದ ಯಾರಿಗಾದರೂ ಗಾಯವಾಗಿದೆಯೇ..? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಚುನಾವಣೆ ಮುಗಿದಾಗಿನಿಂದ ರಾಜ್ಯದಲ್ಲಿ ಮೊಟ್ಟೆ ಬೆಲೆ ಗಗನಕ್ಕೇರಿದೆ ಎಂದು ವ್ಯಂಗ್ಯವಾಡಿದ್ದಾರೆ.
ಟಿಎಂಸಿ ಆಡಳಿತಾವಧಿಯಲ್ಲಿ ಬಿಜೆಪಿ ನಾಯಕರು ಎದುರಿಸಿದ ಹಿಂಸಾಚಾರಕ್ಕೆ ಹೋಲಿಸಿದ ಘೋಷ್, ನಾವು ವಿರೋಧ ಪಕ್ಷದಲ್ಲಿದ್ದಾಗ ನಮ್ಮ ನಾಯಕರನ್ನು ಥಳಿಸಲಾಯಿತು, ನೇಣು ಹಾಕಲಾಯಿತು. ಮಮತಾ ಬ್ಯಾನರ್ಜಿ ಈಗ ಹತಾಶರಾಗಿದ್ದಾರೆ, ಬುಧವಾರದ ರ‍್ಯಾಲಿಯಲ್ಲಿ ಅವರು ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡುತ್ತಿದ್ದರು, ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

100ಕ್ಕೂ ಹೆಚ್ಚು ಘಟನೆಗಳು: ಹೈಕೋರ್ಟ್ ಮೆಟ್ಟಿಲೇರಿದ ವಿವಾದ

ಚುನಾವಣಾ ಫಲಿತಾಂಶದ ನಂತರ ಟಿಎಂಸಿ ನಾಯಕರ ಮೇಲೆ ಈವರೆಗೆ 100ಕ್ಕೂ ಹೆಚ್ಚು ಮೊಟ್ಟೆ ದಾಳಿ ಪ್ರಕರಣಗಳು ವರದಿಯಾಗಿವೆ. ಈ ವಿಷಯ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ಸಂಸದ ಅಭಿಷೇಕ್ ಬ್ಯಾನರ್ಜಿ ಪರ ವಕೀಲ ಡ್ಯಾನಿಶ್ ಫಾರೂಕಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಚುನಾವಣಾ ಸೋಲಿನ ನಂತರ ಟಿಎಂಸಿ ನಾಯಕರನ್ನು ಗುರಿಯಾಗಿಸಿಕೊಂಡು ನಡೆದ ಪ್ರತಿಯೊಂದು ಮೊಟ್ಟೆ ಎಸೆಯುವ ಘಟನೆಯ ಬಗ್ಗೆ ವರದಿ ನೀಡುವಂತೆ ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಅಲ್ಲದೆ, ಈ ಘಟನೆಗಳಿಗೆ ಸಂಬಂಧಿಸಿದಂತೆ ಈವರೆಗೆ ಎಷ್ಟು ಎಫ್‌ಐಆರ್ ದಾಖಲಿಸಲಾಗಿದೆ ಎಂಬ ವಿವರವನ್ನು ನೀಡುವಂತೆ ನಿರ್ದೇಶನ ನೀಡಿದೆ(ಏಜೆನ್ಸೀಸ್​).