ನಟಿ, ನಿರೂಪಕಿ ಅನಸೂಯಾ ಭಾರದ್ವಾಜ್ 
ದೇಶ

ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ; 42 ಮಂದಿ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ ನಟಿ ಅನಸೂಯಾ ಭಾರದ್ವಾಜ್ | Anasuya Bharadwaj

ಹೈದರಾಬಾದ್: ನಟಿಯರ ಬಟ್ಟೆ ಬಗೆಗಿನ ನಟ ಶಿವಾಜಿ ಮಾಡಿದ ಕಮೆಂಟ್​​​ಗಳ ವಿವಾದ ಇನ್ನೂ ಮುಂದುವರೆದಿದ್ದು, ತೆಲುಗಿನ ಜನಪ್ರಿಯ ನಟಿ, ನಿರೂಪಕಿ ಅನಸೂಯಾ ಭಾರದ್ವಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಹೈದರಾಬಾದ್​ನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. 
ನಟಿ ಅನಸೂಯಾ ದೂರಿನ ಪ್ರಕಾರ, ಕೆಲವರು ತಮ್ಮ ಫೋಟೋಗಳನ್ನು ಮಾರ್ಫಿಂಗ್ ಮಾಡುವ ಮೂಲಕ, ಅಶ್ಲೀಲ ವಿಡಿಯೋಗಳನ್ನು ಮಾಡುವ ಮೂಲಕ ತಮ್ಮ ವೃತ್ತಿಪರ & ವೈಯಕ್ತಿಕ ಜೀವನವನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. 
ಒಬ್ಬ ಮಹಿಳೆಯಾಗಿ ಮತ್ತು ಸಾರ್ವಜನಿಕ ವ್ಯಕ್ತಿಯಾಗಿ ತನ್ನ ಮೇಲೆ ನಡೆಯುತ್ತಿರುವ ಇಂತಹ ದಾಳಿ ಅಸಹನೀವಾಗಿದ್ದು, ತೀವ್ರ ಮಾನಸಿಕ ಯಾತನೆಯಿಂದ ಬಳಲುತ್ತಿದ್ದೇನೆ. ತಮ್ಮ ಖ್ಯಾತಿಗೆ ಕಳಂಕ ತರುವ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳು, ವೀಡಿಯೊಗಳನ್ನು ಹಾಕಿ ಕಿರುಕುಳ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಇನ್ನೂ ಅನಸೂಯಾ ದೂರಿನನ್ವಯ, ಮದರ್ ರೂರಲ್ ಎಜುಕೇಶನ್ ಸೊಸೈಟಿ ನಿರ್ದೇಶಕಿ ಬೊಜ್ಜ ಸಂಧ್ಯಾ ರೆಡ್ಡಿ, ಯೂಟ್ಯೂಬರ್ ಪ್ರಿಯಾ ಚೌಧರಿ ಹಾಗೂ ಗೋಗಿ ನೇನಿ ಸೇರಿದಂತೆ ಒಟ್ಟು 42 ಜನರ ವಿರುದ್ಧ ಐಟಿ ಕಾಯ್ದೆಯಡಿ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 
ಈ ಕುರಿತು ಮಾತನಾಡಿರುವ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಅನಸೂಯಾ ಅವರನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ವಿಷಯಗಳನ್ನು ಹರಡಿ, ಪ್ರಚಾರ ಮಾಡುವುದರ ದೂರು ದಾಖಲಾಗಿದೆ. ಪೊಲೀಸರು ಸಂಪೂರ್ಣ ವಿವರಗಳನ್ನು ಸಂಗ್ರಹಿಸಲು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಹೆಚ್ಚಿನ ಸೆಕ್ಷನ್​ಗಳನ್ನು ಸೇರಿಸಿ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).