Ajit Pawar | ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್
ಪುಣೆ: ಇಡೀ ದೇಶವನ್ನೇ ಬೆಚ್ಚಿಬೀಳಿಸುವ ಭೀಕರ ವಿಮಾನ ಅಪಘಾತವೊಂದು ಪುಣೆಯ ಬಾರಾಮತಿ ಬಳಿ ಬುಧವಾರ ಸಂಭವಿಸಿದ್ದು, ಮುಂಬೈನಿಂದ ಹೊರಟಿದ್ದ ವಿಶೇಷ ವಿಮಾನವು ತಾಂತ್ರಿಕ ದೋಷದಿಂದ ಪತನಗೊಂಡಿದ್ದು, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಐವರೂ ಮೃತಪಟ್ಟಿದ್ದಾರೆ.
ಸರ್ಕಾರದ ವಿಷಯವಾಗಿ ಸದಾ ಕ್ರಿಯಾಶೀಲರಾಗಿದ್ದ ಅಜಿತ್ ದಾದಾಗೆ ಆಗಾಗ ವಿವಾದಗಳು ಸುತ್ತಿಕೊಳ್ಳುತ್ತಿದ್ದವು. ಅದರಲ್ಲಿ ಪ್ರಮುಖವಾಗಿರುವುದೆಂದರೆ ಮಹಿಳಾ ಐಪಿಎಸ್ ಅಧಿಕಾರಿಯ ಮೇಲೆ ಒತ್ತಡ ಹೇರಿದ್ದು, ಮತ್ತೊಂದು ಮತದಾರರನ್ನು ಕುರಿತು ಅನುದಾನದ ಆಮೀಷದ ಹೇಳಿಕೆ ನೀಡಿದ್ದರು.
ಮಹಿಳಾ ಅಧಿಕಾರಿಗೆ ಅವಾಜ್
ಅಕ್ರಮವಾಗಿ ಮಣ್ಣು ಅಗೆಯುತ್ತಿರುವುದನ್ನು ತಡೆಯಲು ತೆರಳಿದ್ದ ಮಹಿಳಾ ಐಪಿಎಸ್ ಅಧಿಕಾರಿಯ ಮೇಲೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಒತ್ತಡ ಹೇರಿದ್ದರು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ನಡೆಯಿಂದ ಡಿಸಿಎಂ ಪವಾರ್ ವಿವಾದಕ್ಕೆ ಸಿಲುಕಿದ್ದರು.
ಮಹಾರಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಲಾ ತಾಲೂಕಿನ ಕುರ್ಡು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿತ್ತು, ರಸ್ತೆ ಕಾಮಗಾರಿಗೆ ಬಳಸುತ್ತಿದ್ದ ಮಣ್ಣನ್ನು ಅಕ್ರಮವಾಗಿ ಅಗೆಯುತ್ತಿದ್ದರು ಎಂಬ ದೂರು ಬಂದ ಹಿನ್ನಲೆಯಲ್ಲಿ, ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಂಜನಾ ಕೃಷ್ಣ, ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳೊಂದಗೆ ವಾಗ್ವಾದಕ್ಕಿಳಿದರು ಮತ್ತು ಸ್ಥಳೀಯ ಎನ್‌ಸಿಪಿ ಕಾರ್ಯಕರ್ತರು ನೇರವಾಗಿ ಅಜಿತ್ ಪವಾರ್ಗೆ ಕರೆ ಮಾಡಿ, ಸ್ಥಳದಲ್ಲಿದ್ದ ಅಂಜನಾ ಕೃಷ್ಣ ಅವರಿಗೆ ನೀಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿತ್ತು.
ವೈರಲ್ ಆಗಿದ್ದ ವಿಡಿಯೋವನ್ನು ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಡಿಸಿಎಂ ಅಜಿತ್ ಪವಾರ್, ತಕ್ಷಣ ಕಾರ್ಯಾಚರಣೆಯನ್ನು ನಿಲ್ಲಿಸಿ, ಅಲ್ಲಿಂದ ತೆರಳುವಂತೆ ಸೂಚಿಸುತ್ತಾರೆ, ಆದರೆ ಅಧಿಕಾರಿ ಅಂಜನಾ, ಪವಾರ್ ಧ್ವನಿಯನ್ನು ಗುರುತಿಸಲಾಗದೆ, ನೀವು ಏನು ಹೇಳುತ್ತಿದ್ದೀರಿ ಎಂದು ನನಗೆ ಅರ್ಥವಾಗುತ್ತಿದೆ, ಆದರೆ ನಾನು ಉಪಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತಿದ್ದೇನೆಯೇ ಎಂದು ನನಗೆ ಅರ್ಥವಾಗುತ್ತಿಲ್ಲ, ದಯವಿಟ್ಟು ನನ್ನ ಮೊಬೈಲ್ ಸಂಖ್ಯೆಗೆ ನೇರವಾಗಿ ಕರೆ ಮಾಡಬಹುದೇ? ಎಂದಿದ್ದಾರೆ.
ಅಧಿಕಾರಿಯ ಮಾತಿಗೆ ಕೆರಳಿದ ಪವಾರ್, ನಿನಗೆ ಎಷ್ಟು ಧೈರ್ಯ, ನಾನು ಹೇಳಿದರು ಕೇಳುತಿಲ್ಲವಲ್ಲ, ನಿನ್ನ ಮೊಬೈಲ್ ನಂಬರ್ ಕೊಡು ನಾನೇ ನಿನಗೆ ವಿಡಿಯೋ ಕರೆ ಮಾಡಿ ಖಾತ್ರಿ ಪಡಿಸುವೆ ಎಂದಿದ್ದಾರೆ. ಅಜಿತ್ ಪವಾರ್ ನಡೆಯನ್ನು ಸಮರ್ಥಿಸಿಕೊಂಡಿರುವ ಎನ್‌ಸಿಪಿ, ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಅಜಿತ್ ದಾದಾ ಐಪಿಎಸ್ ಅಧಿಕಾರಿಯನ್ನು ಬೆದರಿಸಿರಬಹುದು, ಪವಾರ್ ಕಾನೂನುಬಾಹಿರ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದರು. ಅಜಿತ್ ಪವಾರ್ ಅವರನ್ನು ರಾಜಕೀಯವಾಗಿ ಹಣಿಯಲು ಈ ವಿಡಿಯೋವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಎನ್‌ಸಿಪಿ ಆರೋಪಿಸಿತ್ತು.
ನಿಮ್ಮ ಬಳಿ ಮತಗಳಿವೆ, ನನ್ನ ಬಳಿ ಹಣವಿದೆ
ಪುಣೆ ಜಿಲ್ಲೆಯ ಬಾರಾಮತಿ ತೆಹ್ಸಿಲ್‌ನಲ್ಲಿ ಮಾಲೆಗಾಂವ್ ನಗರ ಪಂಚಾಯತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಅಜಿತ್, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಭ್ಯರ್ಥಿಗಳನ್ನು ಗೆಲ್ಲಿಸಲು ಸಹಾಯ ಮಾಡಿದರೆ, ಹಣದ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಮತದಾರರಿಗೆ ಭರವಸೆ ನೀಡಿದ್ದರು. ಒಂದು ವೇಳೆ ಜನರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ತಿರಸ್ಕರಿಸಿದರೆ, ನಾನು ಜನರನ್ನು ತಿರಸ್ಕರಿಸುತ್ತೇನೆ. ನಿಮ್ಮ ಬಳಿ ಮತಗಳಿವೆ, ನನ್ನ ಬಳಿ ಹಣವಿದೆ ಎಂದಿರುವುದಾಗಿ ವರದಿಯಾಗಿತ್ತು(ಏಜೆನ್ಸೀಸ್).