Gyanesh Hatao Posters: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್ ಪಕ್ಷ, ರಾಷ್ಟ್ರರಾಜಧಾನಿಯಲ್ಲಿ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಆಗ್ರಹಿಸಿ ಪೋಸ್ಟರ್‌ಗಳನ್ನು ಹಾಕಿದೆ. ಇಂದು (ಶುಕ್ರವಾರ ಸೆ.25) ಬೆಳಿಗ್ಗೆ ದೆಹಲಿಯ ಪ್ರಸಿದ್ಧ ಐಟಿಒ ವೃತ್ತದಲ್ಲಿ ದೆಹಲಿ ಕಾಂಗ್ರೆಸ್‌ನ ಒಬಿಸಿ ಘಟಕವು ಜ್ಞಾನೇಶ್ ಹಟಾವೋ, ಚುನಾವ್ ಆಯೋಗ್ ಬಚಾವೋ (ಜ್ಞಾನೇಶ್ ಅವರನ್ನು ತೆಗೆದುಹಾಕಿ, ಚುನಾವಣಾ ಆಯೋಗವನ್ನು ಉಳಿಸಿ) ಎಂಬ ಪೋಸ್ಟರ್‌ಗಳನ್ನು ಪ್ರದರ್ಶಿಸಿದೆ.
ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ದಿ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ತನಿಖಾ ವರದಿ ಬಹಿರಂಗವಾದ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಇದರ ಮರುದಿನವೇ ಈ ಪೋಸ್ಟರ್ ಅಭಿಯಾನ ಪ್ರಾರಂಭವಾಗಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಸೇರಿದಂತೆ ಇತರ ಆಯುಕ್ತರು ಎತ್ತಿದ ಆಕ್ಷೇಪಣೆಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಮತಗಳನ್ನು ಕದಿಯಲಾಗುತ್ತಿದೆ, ಇದರಿಂದಾಗಿ ಸಂಸದರು ಮಾಡಿದ ಕಾನೂನುಗಳು ಅಕ್ರಮವಾಗುತ್ತಿವೆ ಎಂದು ಆರೋಪಿಸುತ್ತಾ, ಸಿಇಸಿಯನ್ನು ದೇಶದ್ರೋಹಿ ಎಂದು ಕರೆದರಲ್ಲದೆ, ಅವರ ರಾಜೀನಾಮೆಗೆ ಪಟ್ಟು ಹಿಡಿದರು. ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾಗುವುದನ್ನು ಕಾಂಗ್ರೆಸ್ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗೆ ಪ್ರತಿಕ್ರಿಯೆ ನೀಡಿದ್ದ ಚುನಾವಣಾ ಆಯೋಗದ ಮೂಲಗಳು, ಕಳೆದ ಒಂದು ವರ್ಷದಲ್ಲಿ ತಾವು ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಸರ್ವಾನುಮತದಿಂದ ಕೂಡಿದ್ದವು ಮತ್ತು ವಿಭಿನ್ನ ಅಭಿಪ್ರಾಯಗಳು ಯಾವುದೇ ಸಂಸ್ಥೆಯ ಚರ್ಚೆಯ ಸಾಮಾನ್ಯ ಭಾಗವಾಗಿವೆ ಎಂದು ಸ್ಪಷ್ಟನೆ ನೀಡಿತ್ತು. ಇನ್ನೊಂದೆಡೆ, ರಾಹುಲ್ ಗಾಂಧಿ ಅವರ ಸುದ್ದಿಗೋಷ್ಠಿಯನ್ನು ಠುಸ್ ಪಟಾಕಿ ಎಂದು ವ್ಯಂಗ್ಯವಾಡಿರುವ ಬಿಜೆಪಿ, ಅವರನ್ನು ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ಜನರ ಬೆಂಬಲವನ್ನು ಪಡೆಯಲು ಸಾಧ್ಯವಾಗದ ನಾಯಕ ಎಂದು ಕರೆದಿದೆ.
ಪ್ರಜಾಪ್ರಭುತ್ವದ ಕಳ್ಳ ಕಾಂಗ್ರೆಸ್ ಇವತ್ತು ನಿರಾಶೆಯಲ್ಲಿದ್ದು, ಗಾಂಧಿ-ವಾದ್ರಾ ಕುಟುಂಬವನ್ನು ಭಾರತದ ಜನರೇ ಪ್ರಜಾಸತ್ತಾತ್ಮಕವಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ವಾಗ್ದಾಳಿ ನಡೆಸಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಬಳಿಕ ಇಂಡಿಯನ್ ಯೂತ್ ಕಾಂಗ್ರೆಸ್ ಗುರುವಾರ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಆಗ್ರಹಿಸಿ ಆನ್‌ಲೈನ್ ಚಳುವಳಿ ಪ್ರಾರಂಭಿಸಿತು. ಅದರ ಅಧಿಕೃತ ಹೇಳಿಕೆಯ ಪ್ರಕಾರ, Gyanesh, It's Done Bro (ಜ್ಞಾನೇಶ್, ಇಷ್ಟೇ ಸಾಕು) ಶೀರ್ಷಿಕೆಯ ಈ ಚಳುವಳಿ ಸಿಇಸಿ ಅವರ ಬಂಧನ ಮತ್ತು ವಿಚಾರಣೆಗೆ ಆಗ್ರಹಿಸಿದೆ. ಜೊತೆಗೆ ಚುನಾವಣಾ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಚುನಾವಣಾ ದಾಖಲೆಗಳು ಮತ್ತು ಆಯೋಗದ ಆಂತರಿಕ ಆಕ್ಷೇಪಣೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದೆ.
ಈ ಅಭಿಯಾನದ ಮೂಲಕ ಚುನಾವಣಾ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ವಿಷಯವನ್ನು ಸೋಷಿಯಲ್ ಮೀಡಿಯಾದಿಂದ ಆಚೆಗೆ ಕೊಂಡೊಯ್ದು ದೇಶಾದ್ಯಂತ ನಾಗರಿಕರನ್ನು, ವಿಶೇಷವಾಗಿ ಯುವಕರನ್ನು ಸಂಘಟಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕಾಂಗ್ರೆಸ್‌ನ ಯುವ ಘಟಕ ತಿಳಿಸಿದೆ.
ಮತ್ತೊಂದೆಡೆ, ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯೋಗದ ವಿರುದ್ಧ ಮುಂಬೈ ಹೈಕೋರ್ಟ್‌ನ ಕೊಲ್ಹಾಪುರ ಪೀಠದಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಚುನಾವಣಾ ಆಯೋಗ ಹೊರಡಿಸಿದೆ ಎನ್ನಲಾದ 14 ಏಕಪಕ್ಷೀಯ ಆಡಳಿತಾತ್ಮಕ ಆದೇಶಗಳು ಮತ್ತು ಬದಲಾವಣೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ. ಪ್ರಥಮೇಶ್ ಗೋಪಾಲ್ ಗವಂಕರ್, ಗೌರವ್ ಸೂರ್ಯಕಾಂತ್ ನಖರೇಕರ್, ಆದೇಶ್ ಶಶಿಕಾಂತ್ ಭಟ್ಕರ್ ಮತ್ತು ಸ್ಮಿತಾಲಿ ನೀಲೇಶ್ ನಾರ್ವೇಕರ್ ಸಲ್ಲಿಸಿರುವ ಈ ಅರ್ಜಿಯಲ್ಲಿ ಮಹಾರಾಷ್ಟ್ರದಲ್ಲಿ ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ತಡೆಹಿಡಿಯಬೇಕೆಂದು ಕೋರಲಾಗಿದೆ.
ಜೊತೆಗೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರನ್ನು ಮತ್ತೆ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಮತ್ತು ಹೊಸ ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಿ ಅನುಮೋದಿಸುವವರೆಗೆ ಮುಂಬರುವ ಚುನಾವಣೆಗಳನ್ನು ಮುಂದೂಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ(ಏಜೆನ್ಸೀಸ್).