ದೇಶ

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ; ಬುಲೆಟ್​ಗೆ ಬುಲೆಟ್​ಗಳಿಂದಲೇ ಉತ್ತರ: ಗ್ಯಾಂಗ್​ವಾರ್​ಗಳಿಗೆ ಡಿಸಿಎಂ ಶಿಂಧೆ ಎಚ್ಚರಿಕೆ | Eknath Shinde

ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ, ಮುಂಬೈನಲ್ಲಿ ಗ್ಯಾಂಗ್ ವಾರ್‌ಗಳನ್ನು ಸರ್ಕಾರ ಸಹಿಸುವುದಿಲ್ಲ. ಬುಲೆಟ್​ಗೆ ಬುಲೆಟ್​ಗಳಿಂದಲೇ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ, ಮುಂಬೈನಲ್ಲಿ ಗ್ಯಾಂಗ್ ವಾರ್‌ಗಳನ್ನು ಸರ್ಕಾರ ಸಹಿಸುವುದಿಲ್ಲ. ಬುಲೆಟ್​ಗೆ ಬುಲೆಟ್​ಗಳಿಂದಲೇ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಟೈಗರ್ ಶ್ರಾಫ್‌ ಮೇಲೆ ಭಾನುವಾರ(ಅ. 18) ಮುಂಬೈನ ಜುಹುವಿನಲ್ಲಿ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್​ ನಟ ಸಣ್ಣ-ಪುಟ್ಟ ಗಾಯಗಳಿಂದ ಪವಾಡ ಸದೃಶ್ಯದಂತೆ ಪಾರಾಗಿದ್ದಾರೆ. ತಡರಾತ್ರಿ ಮುಂಬೈನ ಬಾಂದ್ರಾದಲ್ಲಿರು ಶ್ರಾಫ್ ನಿವಾಸಕ್ಕೆ ಭೇಟಿ ನೀಡಿ ಡಿಸಿಎಂ ಏಕನಾಥ್ ಶಿಂಧೆ ಆರೋಗ್ಯ ವಿಚಾರಿಸಿದ್ದಾರೆ.

ಶ್ರಾಫ್ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಶಿಂಧೆ, ದಾಳಿಯನ್ನು ದುರದೃಷ್ಟಕರ ಎಂದು ಬಣ್ಣಿಸಿದ್ದು, ಶ್ರಾಫ್ ಯಾವುದೇ ಅಪಾಯವಾಗದಂತೆ ಪಾರಾಗಿದ್ದಾರೆ. ಪೊಲೀಸರು ದಾಳಿಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ, ಅದಕ್ಕೆ ಕಾರಣರಾದವರನ್ನು ಗುರುತಿಸಿ, ದಾಳಿಗಳ ಹಿಂದಿನ ಕ್ರಿಮಿನಲ್ ಜಾಲಗಳನ್ನು ಎಡೆಮುರಿ ಕಟ್ಟುತ್ತಾರೆ ಎಂದು ಹೇಳಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತು ಇತರ ಕ್ರಿಮಿನಲ್ ಗ್ಯಾಂಗ್‌ಗಳಿಂದ ಸೆಲೆಬ್ರಿಟಿಗಳಿಗೆ ಬೆದರಿಕೆಗಳಿವೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಸಿದ ಅವರು, 1990ರ ದಶಕದಲ್ಲಿ ಗ್ಯಾಂಗ್ ವಾರ್‌ಗಳು ಪ್ರವರ್ಧಮಾನಕ್ಕೆ ಬಂದಾಗ ಅವರ ಬೇರುಗಳನ್ನು ಕಿತ್ತು ಹಾಕಲಾಯಿತು. ಮತ್ತೆ ಅದೇ ರೀತಿಯಲ್ಲಿ ಅವರನ್ನು ಬೇರು ಸಹಿತ ಕಿತ್ತುಹಾಕುವ ಸಮಯ ಬಂದಿದೆ ಎಂದಿದ್ದಾರೆ.

ಮುಂಬೈ ಅಥವಾ ಮಹಾರಾಷ್ಟ್ರದಲ್ಲಿ ಸೆಲೆಬ್ರಿಟಿಗಳನ್ನು ಬೆದರಿಸುವ ಅಥವಾ ಕ್ರಿಮಿನಲ್ ಗ್ಯಾಂಗ್‌ಗಳ ಪ್ರಾಬಲ್ಯವನ್ನು ಸ್ಥಾಪಿಸುವ ಪ್ರಯತ್ನಗಳನ್ನು ಸರ್ಕಾರ ಸಹಿಸುವುದಿಲ್ಲ. ಗುಂಡಿನ ದಾಳಿಗೆ ಗುಂಡುಗಳಿಂದಲೇ ಉತ್ತರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ನಾಗರಿಕರ ಸುರಕ್ಷತೆ ನಮ್ಮ ಆದ್ಯತೆ. ಸೆಲೆಬ್ರಿಟಿಗಳಿಗೆ ಉದ್ದೇಶಪೂರ್ವಕವಾಗಿ ಬೆದರಿಕೆ ಹಾಕುತ್ತಿರುವುದು ಯಾಕೆ? ಪೊಲೀಸರು ಈ ವಿಷಯದ ಮೂಲವನ್ನು ಪತ್ತೆ ಹಚ್ಚಿ ಅಂತಹ ಗ್ಯಾಂಗ್‌ಗಳನ್ನು ನಾಶಪಡಿಸುತ್ತಾರೆ. ಮುಂಬೈನಲ್ಲಿ ಗ್ಯಾಂಗ್ ವಾರ್‌ಗಳನ್ನು ನಾವು ಸಹಿಸುವುದಿಲ್ಲ. ನಾವು ಸಹ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತೇವೆ ಎಂದು ಪ್ರತಿಪಾದಿಸಿದ್ದಾರೆ.

ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ. ಹಲ್ಲೆಕೋರರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಸರ್ಕಾರ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.

ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಪುಷ್ಪಾ ಪಾರ್ಕ್ ಬಳಿ ಈ ಗುಂಡಿನ ದಾಳಿ ನಡೆದಿದೆ. ಫುಟ್ಬಾಲ್ ಮೈದಾನದಲ್ಲಿ ಆಟವಾಡಿ ಮನೆಗೆ ತೆರಳುವಾಗ ಗೇಟ್ ಬಳಿ ದುಷ್ಕರ್ಮಿಗಳು ಟೈಗರ್ ಶ್ರಾಫ್​ ಅವರ ಬಿಎಮ್​ಡಬ್ಲ್ಯೂ ಕಾರಿನ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದ ಇಬ್ಬರು ದರೋಡೆಕೋರರು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 109(1) ಮತ್ತು 3(5) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 25 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ಗುರುತು ಪತ್ತೆ ಹಚ್ಚಲು ಪೊಲೀಸ್ ತನಿಖೆ ನಡೆಯುತ್ತಿದೆ (ಏಜೆನ್ಸೀಸ್).