ವೈರಲ್ ವಿಡಿಯೋ: ದಸರಾ ಹಬ್ಬದಲ್ಲಿ ಕೆಟ್ಟತನದ ಸಂಹಾರದ ಸಂಕೇತವಾಗಿ ರಾವಣನ ಪ್ರತಿಕೃತಿಯನ್ನು ಸುಡುವುದು ಸಂಪ್ರದಾಯವಾಗಿದೆ. ಪಟಾಕಿಗಳಿಂದ ತುಂಬಿದ ರಾವಣನ ಬೊಂಬೆಗೆ ಬೆಂಕಿ ಹಚ್ಚುತ್ತಿದ್ದಂತೆ ಬಾನಂಗಳದಲ್ಲಿ ಬಣ್ಣ ಬಣ್ಣದ ಬೆಳಕು ಚಿಮ್ಮುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಮೈದಾನದಲ್ಲಿ ಸೇರುತ್ತಾರೆ. ಆದರೆ ಇಲ್ಲೊಂದು ಕಡೆ ನಡೆದ ರಾವಣ ದಹನದ ವೇಳೆ ನಡೆದ ಘಟನೆ ಜನರ ಆತಂಕಕ್ಕೆ ಕಾರಣವಾಗಿದೆ.
ಆಕಾಶಕ್ಕೆ ಚಿಮ್ಮಬೇಕಿದ್ದ ಪಟಾಕಿಗಳು ಇದ್ದಕ್ಕಿದ್ದಂತೆ ಜನರತ್ತ ನುಗ್ಗಿ ಬಂದಿದ್ದು, ನೆರೆದಿದ್ದವರೆಲ್ಲ ಪ್ರಾಣ ಉಳಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡಿಹೋದ ಘಟನೆ ನಡೆದಿದೆ. ಈ ಇಡೀ ಪ್ರಹಸನದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಮೈದಾನದ ಮಧ್ಯದಲ್ಲಿ ರಾವಣನ ಬೃಹತ್ ಪ್ರತಿಕೃತಿಯನ್ನು ನಿಲ್ಲಿಸಲಾಗಿತ್ತು. ಸುತ್ತಲೂ ಸಂಭ್ರಮದಿಂದ ಜನ ಕಾದು ನಿಂತಿದ್ದರು. ಒಬ್ಬ ವ್ಯಕ್ತಿ ಮುಂದೆ ಬಂದು ರಾವಣನ ಕಾಲ ಬಳಿ ಬೆಂಕಿ ಹಚ್ಚುತ್ತಾನೆ. ಬೆಂಕಿ ಹೊತ್ತಿಕೊಂಡು ಜ್ವಾಲೆಗಳು ಮೇಲಕ್ಕೆದ್ದಂತೆ ರಾವಣನ ಹೊಟ್ಟೆಯಲ್ಲಿದ್ದ ಪಟಾಕಿಗಳು ಧಡಬಡನೆ ಸಿಡಿಯಲು ಶುರುವಾಗಿವೆ.
ಸಾಮಾನ್ಯವಾಗಿ ಆಕಾಶಕ್ಕೆ ಚಿಮ್ಮಬೇಕಿದ್ದ ರಾಕೆಟ್‌ಗಳು ಮತ್ತು ಪಟಾಕಿಗಳ ದಿಕ್ಕು ತಪ್ಪಿ, ಸುತ್ತಲೂ ನಿಂತಿದ್ದ ಜನರ ಮುಖಕ್ಕೆ ನುಗ್ಗಲು ಆರಂಭಿಸಿವೆ. ಬಿಸಿಬಿಸಿ ಕಿಡಿಗಳು ಮತ್ತು ರಾಕೆಟ್‌ಗಳು ಮಿಸೈಲ್‌ಗಳಂತೆ ಜನರತ್ತ ಹಾರಿಬರಲು ಶುರು ಮಾಡುತ್ತಿದ್ದಂತೆ ಅಲ್ಲಿ ನೆರೆದಿದ್ದವರಲ್ಲಿ ಆತಂಕ ಶುರುವಾಗಿದೆ. ಕ್ಷಣಾರ್ಧದಲ್ಲೇ ಹಬ್ಬದ ಸಂಭ್ರಮ ಮರೆಯಾಗಿ, ಎಲ್ಲರೂ ಅಡ್ಡಾದಿಡ್ಡಿಯಾಗಿ ಓಡಲು ಶುರುಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಈ ವಿಡಿಯೋ ಇಲ್ಲಿವರೆಗೆ ಸುಮಾರು 15 ಮಿಲಿಯನ್ ಅಂದರೆ 1.5 ಕೋಟಿಗೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಈ ದೃಶ್ಯ ನೋಡಿದ ತಕ್ಷಣ ಬಹುತೇಕ ನೆಟ್ಟಿಗರಿಗೆ ಬಾಲಿವುಡ್‌ನ ಕಾಮಿಡಿ ಸಿನಿಮಾ ಗೋಲ್‌ಮಾಲ್ 3 ನೆನಪಾಗಿದೆ. ಆ ಸಿನಿಮಾದಲ್ಲಿ ಪಟಾಕಿ ಅಂಗಡಿಗೆ ಬೆಂಕಿ ಬಿದ್ದು ಎಲ್ಲರತ್ತ ರಾಕೆಟ್‌ಗಳು ನುಗ್ಗುವ ದೃಶ್ಯವೊಂದಿದೆ. ಅದೇ ರೀತಿ ಇಲ್ಲೂ ಜನರು ದಿಕ್ಕಾಪಾಲಾಗಿ ಓಡುತ್ತಿರುವುದನ್ನು ಕಂಡು, "ಇದು ರಾವಣನ ಕೌಂಟರ್ ಅಟ್ಯಾಕ್! ಎಂದು ಒಬ್ಬರು ತಮಾಷೆಯಾಗಿ ಬರೆದುಕೊಂಡಿದ್ದಾರೆ. "ಗೋಲ್‌ಮಾಲ್ ಸೀನ್ ರಿಯಲ್ ಲೈಫ್‌ನಲ್ಲಿ ನೋಡಿದ ಹಾಗಿದೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋ ನೋಡಲು ನಗು ತರಿಸಿದರೂ, ಇದರ ಹಿಂದಿರುವ ಅಪಾಯವನ್ನು ನಿರ್ಲಕ್ಷಿಸುವಂತಿಲ್ಲ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಪಟಾಕಿ ತುಂಬಿದ ಇಷ್ಟೊಂದು ದೊಡ್ಡ ಪ್ರತಿಕೃತಿ ಸುಡುವಾಗ ಜನರನ್ನು ಅಷ್ಟು ಹತ್ತಿರಕ್ಕೆ ಬಿಟ್ಟಿದ್ದು ಆಯೋಜಕರ ದೊಡ್ಡ ಪ್ರಮಾದ ಎಂದು ಕೆಲವರು ಕಿಡಿಕಾರಿದ್ದಾರೆ.
ಇದು ತಮಾಷೆಯಲ್ಲ, ಅತ್ಯಂತ ಅಪಾಯಕಾರಿ ಹುಚ್ಚುತನ. ಜನರಿಗೂ ಪ್ರಾಣಿಗಳಿಗೂ ಇದರಿಂದ ಭಾರಿ ಅಪಾಯವಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ ಎಂದು ನೆಟ್ಟಿಗರೊಬ್ಬರು ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕವಾಗಿ ನಡೆಯುವ ಇಂತಹ ದೊಡ್ಡ ಆಚರಣೆಗಳಲ್ಲಿ ಕನಿಷ್ಠ ಬ್ಯಾರಿಕೇಡ್ ವ್ಯವಸ್ಥೆ ಮತ್ತು ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೆ ಎಚ್ಚರಿಸಿದೆ, (ಏಜೆನ್ಸೀಸ್).