ಗ್ರಾನೈಟ್ ಉದ್ಯಮಿ ಆರ್. ವೀರಾಮಣಿ  
ದೇಶ

6 ವರ್ಷದ ಹಳೇ ವಿಡಿಯೋ, ಕೈಬಿಟ್ಟಿದ್ದ ಪೋಕ್ಸೊ ಕೇಸ್‌ಗೆ ಹೊಸ ಟ್ವಿಸ್ಟ್​...ಗ್ರಾನೈಟ್ ಉದ್ಯಮಿ ವೀರಮಣಿ ಸಿಕ್ಕಿಬಿದ್ದ ರೋಚಕ ಕಥೆ! Granite baron Veeramani

ಆರಂಭದಲ್ಲಿ ಸಾಕ್ಷ್ಯಗಳಿಲ್ಲ, ಸಂತ್ರಸ್ತೆ ಸಿಕ್ಕಿಲ್ಲ ಎಂದು ಕೈಬಿಡಲು ಯತ್ನಿಸಿದ್ದ ಪ್ರಕರಣವು, ಇದೀಗ ಸ್ಫೋಟಕ ತಿರುವು ಪಡೆದು ಪ್ರಮುಖ ಆರೋಪಿಗಳ ಬಂಧನ ಹಾಗೂ ಉನ್ನತ ಮಟ್ಟದ ತನಿಖೆಗೆ ಕಾರಣವಾಗಿರುವುದು ಇಡೀ ವ್ಯವಸ್ಥೆಯ ಮುಖವಾಡವನ್ನು ಕಳಚಿಟ್ಟಿದೆ.

ಚೆನ್ನೈ: ಗ್ರಾನೈಟ್ ಉದ್ಯಮಿ ಆರ್. ವೀರಾಮಣಿ ( Granite baron Veeramani ) ವಿರುದ್ಧದ ಪೋಕ್ಸೊ (POCSO) ಪ್ರಕರಣವು ಇತ್ತೀಚಿಗೆ ತಮಿಳುನಾಡಿನಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ. ತನಿಖೆಯ ಹಾದಿ, ಪ್ರಕರಣ ಮುಚ್ಚಿ ಹಾಕಲು ಪೊಲೀಸರು ನಡೆಸಿದ ಯತ್ನ ಮತ್ತು ಸ್ಫೋಟಕ ತಿರುವುಗಳ ಮೂಲಕ ಈ ಪ್ರಕರಣ ಮತ್ತೊಮ್ಮೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ ಸಾಕ್ಷ್ಯಗಳಿಲ್ಲ, ಸಂತ್ರಸ್ತೆ ಸಿಕ್ಕಿಲ್ಲ ಎಂದು ಕೈಬಿಡಲು ಯತ್ನಿಸಿದ್ದ ಪ್ರಕರಣವು, ಇದೀಗ ಸ್ಫೋಟಕ ತಿರುವು ಪಡೆದು ಪ್ರಮುಖ ಆರೋಪಿಗಳ ಬಂಧನ ಹಾಗೂ ಉನ್ನತ ಮಟ್ಟದ ತನಿಖೆಗೆ ಕಾರಣವಾಗಿರುವುದು ಇಡೀ ವ್ಯವಸ್ಥೆಯ ಮುಖವಾಡವನ್ನು ಕಳಚಿಟ್ಟಿದೆ.

ಕಳೆದ ವರ್ಷ ಅಂದರೆ 2025ರ ಅಕ್ಟೋಬರ್ 6ರಂದು ಚೆನ್ನೈನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಕ್ಕಳ ಹಕ್ಕುಗಳ ಕಾರ್ಯಕರ್ತೆಯೊಬ್ಬರ ಕಚೇರಿಗೆ ಬಂದು ಒಂದು ಲಕೋಟೆಯನ್ನು ನೀಡಿ ಪರಾರಿಯಾದನು. ಆ ಲಕೋಟೆಯೊಳಗೆ ಒಂದು ಬಿಳಿ ಕಾಗದದ ತುಂಡು ಮತ್ತು ಪೆನ್ ಡ್ರೈವ್ ಇತ್ತು. ಗ್ರಾನೈಟ್ ಉದ್ಯಮಿ ಆರ್. ವೀರಾಮಣಿ ಮತ್ತು ಆತನ ಗೆಳತಿ ಶಾಂತಿ ಎಂಬುವವರ ಮನೆಯ ಮಲಗುವ ಕೋಣೆಯಲ್ಲಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆ ಪತ್ರದಲ್ಲಿ ಆರೋಪಿಸಲಾಗಿತ್ತು. ಅಲ್ಲದೆ, ಆ ಕೃತ್ಯದ ವಿಡಿಯೋ ಪೆನ್ ಡ್ರೈವ್‌ನಲ್ಲಿದೆ ಎಂದು ನಮೂದಿಸಲಾಗಿತ್ತು ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಕಾರ್ಯಕರ್ತೆ ಪೆನ್ ಡ್ರೈವ್ ಅನ್ನು ಪರಿಶೀಲಿಸಿದಾಗ, ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ, ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡುಬಂದಿತು. ತಕ್ಷಣವೇ ಅವರು ಆ ಲಕೋಟೆ ಮತ್ತು ಪೆನ್ ಡ್ರೈವ್‌ನೊಂದಿಗೆ ಆ್ಯಂಟಿ-ವೈಸ್ ಸ್ಕ್ವಾಡ್ (Anti-Vice Squad) ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದರು. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಅಕ್ಟೋಬರ್ 7ರಂದು ಸೆಂಟ್ರಲ್ ಕ್ರೈಮ್ ವಿಭಾಗದಲ್ಲಿ ಪ್ರಕರಣ ದಾಖಲಾಗಿ, ಕೆಲವೇ ದಿನಗಳಲ್ಲಿ ತನಿಖೆಯು ಆ್ಯಂಟಿ-ವೈಸ್ ಸ್ಕ್ವಾಡ್‌ನ ಸಹಾಯಕ ಕಮಿಷನರ್‌ಗೆ ವರ್ಗಾಯಿಸಲ್ಪಟ್ಟಿತು.

ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಸಂಶಯಾಸ್ಪದ ಸ್ಥಳವಾದ ಶಾಂತಿ ಅವರ ಮನೆಗೆ ತೆರಳಿ ಶೋಧ ನಡೆಸಿದರು. ಆದರೆ, ಆರಂಭಿಕ ತನಿಖೆಯಲ್ಲಿ ಯಾವುದೇ ಸುಳಿವು ಸಿಗಲಿಲ್ಲ ಎಂದು ಪೊಲೀಸರು ತಿಳಿಸಿದರು. ವಿಡಿಯೋ 2019ಕ್ಕೆ ಸೇರಿದ್ದರಿಂದ ಸೈಬರ್ ತಜ್ಞರ ಸಹಾಯದಿಂದ ಹಳೆಯ ಡಿವಿಆರ್ (DVR) ಪರಿಶೀಲಿಸಲಾಯಿತಾದರೂ, 6 ವರ್ಷಗಳು ಕಳೆದಿರುವುದರಿಂದ ಯಾವುದೇ ಮೂಲ ರೆಕಾರ್ಡಿಂಗ್ ದೊರೆಯಲಿಲ್ಲ ಎಂದು ಪೊಲೀಸರು ವಾದಿಸಿದರು.

ಪೊಲೀಸರು ಉದ್ಯಮಿ ವೀರಾಮಣಿ ಮತ್ತು ಶಾಂತಿಯವರನ್ನು ವಿಚಾರಣೆಗೆ ಕರೆದು ಪ್ರಶ್ನಿಸಿದರು. ವೀರಾಮಣಿ ವಿಡಿಯೋದಲ್ಲಿರುವುದು ನಾನಲ್ಲ ಎಂದು ಎಲ್ಲವನ್ನೂ ಅಲ್ಲಗಳೆದರು. ಶಾಂತಿ ಎಂಬಾಕೆ ವೀರಾಮಣಿ ಪರಿಚಯವಿರುವುದನ್ನು ಒಪ್ಪಿಕೊಂಡರೂ, ಆ ಬಾಲಕಿ ಯಾರೆಂದು ತನಗೆ ತಿಳಿದಿಲ್ಲ ಎಂದಳು. ಅಲ್ಲದೆ, ತನ್ನ ಮನೆಗೆ "ಯಾವುದೇ ಪರಿಸ್ಥಿತಿಯಲ್ಲಿಯೂ ಹೊರಗಿನವರನ್ನು ಒಳಗೆ ಬಿಡುವುದಿಲ್ಲ" ಎಂದು ವಾದಿಸಿದಳು. ಸ್ಥಳೀಯ ಅಂಗಡಿಯವರು ಮತ್ತು ಆಸುಪಾಸಿನವರ ವಿಚಾರಣೆಯಲ್ಲೂ ಕೂಡ ಆ ಮನೆಗೆ ಹೊರಗಿನವರ ಪ್ರವೇಶವಿರಲಿಲ್ಲ ಎಂಬ ಹೇಳಿಕೆಗಳೇ ದಾಖಲಾದವು.

ಪೊಲೀಸರು ತಮ್ಮ ತನಿಖೆಯಲ್ಲಿ ಸಂತ್ರಸ್ತೆ ಬಾಲಕಿಯನ್ನು ಹುಡುಕಲು ಸಾಧ್ಯವಾಗಿಲ್ಲ, ಆಕೆಯ ವಯಸ್ಸನ್ನು ನಿರ್ಧರಿಸಲು ಆಗಿಲ್ಲ, ಡಿವಿಆರ್ ಸಿಕ್ಕಿಲ್ಲ ಮತ್ತು ಸಿಕ್ಕಿರುವ ಸಾಕ್ಷ್ಯಗಳು ಸಾಕಾಗುವುದಿಲ್ಲ ಎಂಬ ಕಾರಣಗಳನ್ನು ಮುಂದಿಟ್ಟರು. ಫೆಬ್ರವರಿ 18ರಂದು ಈ ಪ್ರಕರಣದಲ್ಲಿ “ಮುಂದಿನ ಯಾವುದೇ ಕ್ರಮವಿಲ್ಲ” (Further Action Dropped) ಎಂದು ಅಂತಿಮ ವರದಿ ತಯಾರಿಸಿ ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಆದರೆ, ಹೈಕೋರ್ಟ್ ಆದೇಶದಂತೆ ಭವಿಷ್ಯದಲ್ಲಿ ಹೊಸ ಸಾಕ್ಷ್ಯ ಸಿಕ್ಕರೆ ಕ್ರಮ ಕೈಗೊಳ್ಳಬಹುದು ಎಂಬ ಸಣ್ಣ ಎಚ್ಚರಿಕೆಯೊಂದಿಗೆ ವರದಿ ಮುಕ್ತಾಯಗೊಳಿಸಲಾಗಿತ್ತು.

ಇದರ ನಡುವೆ ಪೊಲೀಸರು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ವಿಶೇಷ ಪೋಕ್ಸೊ ನ್ಯಾಯಾಲಯವು ಒಪ್ಪಲು ನಿರಾಕರಿಸಿತು ಮತ್ತು ಪ್ರಕರಣದ ಮರುತನಿಖೆಗೆ ಸ್ಪಷ್ಟ ಆದೇಶ ನೀಡಿತು. ನ್ಯಾಯಾಲಯದ ಈ ಮಹತ್ವದ ನಿರ್ಣಯವೇ ಇಡೀ ಪ್ರಕರಣದ ದಿಕ್ಕನ್ನೇ ಬದಲಾಯಿಸಿತು. ಪೊಲೀಸರು ಅಂತಿಮವಾಗಿ ವಿಡಿಯೋದಲ್ಲಿದ್ದ ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ನ್ಯಾಯಾಲಯದ ಮುಂದೆ ಹಾಜರಾದ ಬಾಲಕಿ, ತಾನೇ ಆ ವಿಡಿಯೋದ ಸಂತ್ರಸ್ತೆ ಎಂಬುದನ್ನು ಸ್ಪಷ್ಟಪಡಿಸಿ ತಪ್ಪೊಪ್ಪಿಗೆ ಹೇಳಿಕೆ ನೀಡಿದಳು.

ಮರುತನಿಖೆಯ ತೀವ್ರತೆಯು ಹೆಚ್ಚಾಗುತ್ತಿದ್ದಂತೆ, ಆಗಸ್ಟ್ 29ರಂದು ಪೊಲೀಸರು ಪ್ರಮುಖ ಗ್ರಾನೈಟ್ ಉದ್ಯಮಿ ಆರ್. ವೀರಾಮಣಿ, ಆತನ ಸಹಾಯಕಿ ಶಾಂತಿ ಹಾಗೂ ಅವಳ ಪತಿ ಮಹೇಂದ್ರ ಸಿಂಹನ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕೇವಲ ಪೋಕ್ಸೊ ಕಾಯ್ದೆ ಮಾತ್ರವಲ್ಲದೆ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಎಸ್​ಸಿ/ಎಸ್​ಟಿ (ದೌರ್ಜನ್ಯ ತಡೆ) ಕಾಯ್ದೆಯ ಕಠಿಣ ಸೆಕ್ಷನ್‌ಗಳನ್ನೂ ಕೂಡ ಆರೋಪಿಗಳ ವಿರುದ್ಧ ದಾಖಲಿಸಲಾಯಿತು.

ಈ ತನಿಖೆ ಕೇವಲ ಒಂದು ವಿಡಿಯೋಗೆ ಸೀಮಿತಗೊಳ್ಳದೆ ಇನ್ನಷ್ಟು ಆಳಕ್ಕೆ ಹರಿಯಿತು. ವೀರಾಮಣಿಯ ಜೆಮ್ ಗ್ರಾನೈಟ್ಸ್ ಸಂಸ್ಥೆಯಲ್ಲಿ 23 ವರ್ಷಗಳ ಕಾಲ ಕೆಲಸ ಮಾಡಿದ್ದ ಗಣೇಶನ್ ಎಂಬಾತನ ಮೊಬೈಲ್ ಫೋನ್ ಅನ್ನು ತನಿಖಾಧಿಕಾರಿಗಳು ಪರಿಶೀಲಿಸಿದಾಗ, ವೀರಾಮಣಿ ಮತ್ತು ಮತ್ತೊಬ್ಬ ಬಾಲಕಿಯ ಮತ್ತೊಂದು ಆಘಾತಕಾರಿ ವಿಡಿಯೋ ಲಭ್ಯವಾಯಿತು. ಈ ಸಂಗತಿಯನ್ನು ಪೊಲೀಸರಿಗೆ ಮುಚ್ಚಿಟ್ಟ ಆರೋಪದ ಮೇಲೆ ಗಣೇಶನ್‌ನನ್ನು ಬಂಧಿಸಿ ಪುಝಲ್ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಆರಂಭದ ಹಂತದಲ್ಲಿ ಈ ಪ್ರಕರಣವನ್ನು ಮುಚ್ಚಿಹಾಕಲು ಅಥವಾ ವಿಳಂಬ ಮಾಡಲು ನಡೆದ ಹುನ್ನಾರಗಳ ಬಗ್ಗೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಚೆನ್ನೈ ಪೊಲೀಸ್ ಆಯುಕ್ತ ಎ. ಅಮಲ್‌ರಾಜ್ ಅವರೊಂದಿಗೆ ತುರ್ತು ಸಭೆ ನಡೆಸಿ, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ವೀರಾಮಣಿ ಹೊಂದಿದ್ದ ಸಂಬಂಧಗಳು ಮತ್ತು ಸಂಭಾವ್ಯ ಹಣಕಾಸು ವ್ಯವಹಾರಗಳ ಬಗ್ಗೆಯೂ ಇದೀಗ ಉನ್ನತ ಮಟ್ಟದ ತನಿಖೆ ಶುರುವಾಗಿದೆ. ಹೆಚ್ಚುವರಿ ಆಯುಕ್ತ ಮತ್ತು ಐಜಿಪಿ ನರೇಂದ್ರ ನಾಯರ್ ನೇತೃತ್ವದಲ್ಲಿ ಅಧಿಕಾರಿಗಳು ಡಿಜಿಟಲ್ ಸಾಕ್ಷ್ಯಗಳು ಮತ್ತು ಬ್ಯಾಂಕ್ ದಾಖಲೆಗಳನ್ನು ಜಾಲಾಡುತ್ತಿದ್ದು, ಈ ಕರಾಳ ಜಾಲದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಕಾನೂನಿನ ಕಟಕಟೆಗೆ ತರಲು ಸಜ್ಜಾಗಿದ್ದಾರೆ, (ಏಜೆನ್ಸೀಸ್​).