ನವದೆಹಲಿ: ಭಾರತ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆಯಾದ 'ಸಿಇಆರ್ಟಿ-ಇನ್' (CERT-In - Computer Emergency Response Team - India) ಕೋಟಿಗಟ್ಟಲೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ( Android users ) ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ. ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ (OS) ಹಲವು ಗಂಭೀರ ಭದ್ರತಾ ಲೋಪಗಳು ಕಂಡುಬಂದಿದ್ದು, ಸೈಬರ್ ದಾಳಿಕೋರರು ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ.
ಕೇಂದ್ರ ಸೈಬರ್ ಭದ್ರತಾ ಏಜೆನ್ಸಿ ನೀಡಿರುವ ವರದಿಯ ಪ್ರಕಾರ, ಈ ಆಪರೇಟಿಂಗ್ ಸಿಸ್ಟಮ್ಗಳಲ್ಲಿ ಕಂಡುಬಂದಿರುವ ದೋಷಗಳನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಸಾಧನಗಳ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ. ಫೋನ್ನಲ್ಲಿರುವ ರಹಸ್ಯ ಅಥವಾ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುವುದು, ಬಳಕೆದಾರರ ಅನುಮತಿಯಿಲ್ಲದೆ ಅನಧಿಕೃತ ಕೋಡ್ಗಳನ್ನು ರನ್ ಮಾಡುವುದು ಮತ್ತು ಸಾಧನಗಳಲ್ಲಿ ಹೈ-ಲೆವೆಲ್ ಆಕ್ಸೆಸ್ ಪಡೆಯುವುದು ಈ ದೋಷಗಳ ಮೂಲಕ ಸುಲಭವಾಗಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈ ಗಂಭೀರ ಭದ್ರತಾ ಬೆದರಿಕೆಯು ಮುಖ್ಯವಾಗಿ ಇತ್ತೀಚಿನ ಮತ್ತು ಜನಪ್ರಿಯ ಆಂಡ್ರಾಯ್ಡ್ ಆವೃತ್ತಿಗಳನ್ನು ಹೊಂದಿರುವ ಫೋನ್ಗಳ ಮೇಲೆಯೇ ಪರಿಣಾಮ ಬೀರಲಿದೆ. ಸಿಇಆರ್ಟಿ-ಇನ್ ನೀಡಿರುವ ಮಾಹಿತಿಯಂತೆ ಆಂಡ್ರಾಯ್ಡ್ 14, 15, 16, 16-qpr2 ಹಾಗೂ ಆಂಡ್ರಾಯ್ಡ್ 17 ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಸ್ಮಾರ್ಟ್ಫೋನ್ಗಳು ಈ ಅಪಾಯಕಾರಿ ಲೋಪಕ್ಕೆ ತುತ್ತಾಗುವ ಸಾಧ್ಯತೆಯಿದೆ.
ಸೈಬರ್ ದಾಳಿಕೋರರು ಬಳಕೆದಾರರ ಬ್ಯಾಂಕಿಂಗ್ ವಿವರಗಳು, ವೈಯಕ್ತಿಕ ಫೋಟೋಗಳು, ಪಾಸ್ವರ್ಡ್ಗಳು ಸೇರಿದಂತೆ ಪ್ರಮುಖ ದತ್ತಾಂಶಗಳನ್ನು ಹ್ಯಾಕ್ ಮಾಡಲು ಈ ದೋಷಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಇದರಿಂದಾಗಿ ದೇಶಾದ್ಯಂತ ಲಕ್ಷಾಂತರ ಸ್ಮಾರ್ಟ್ಫೋನ್ ಬಳಕೆದಾರರ ಡಿಜಿಟಲ್ ಭದ್ರತೆ ಹಾಗೂ ಖಾಸಗಿತನಕ್ಕೆ ದೊಡ್ಡ ಮಟ್ಟದ ಬೆದರಿಕೆ ಎದುರಾಗಿದ್ದು, ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.
ಹೀಗಾಗಿ ಆಂಡ್ರಾಯ್ಡ್ ಬಳಕೆದಾರರು ಕೂಡಲೇ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಲಭ್ಯವಿರುವ ಇತ್ತೀಚಿನ ಸೆಕ್ಯುರಿಟಿ ಅಪ್ಡೇಟ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವಂತೆ ವೈದ್ಯಕೀಯ ಮತ್ತು ತಾಂತ್ರಿಕ ತಜ್ಞರು ಸಲಹೆ ನೀಡಿದ್ದಾರೆ. ಯಾವುದೇ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡದಿರುವುದು, ಗೂಗಲ್ ಪ್ಲೇ ಸ್ಟೋರ್ ಹೊರತುಪಡಿಸಿ ಇತರ ಅಪರಿಚಿತ ಮೂಲಗಳಿಂದ ಆ್ಯಪ್ಗಳನ್ನು ಡೌನ್ಲೋಡ್ ಮಾಡದಿರುವುದು ಈ ಸೈಬರ್ ದಾಳಿಗಳಿಂದ ತಪ್ಪಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ, (ಏಜೆನ್ಸೀಸ್).