ಘಟನೆಯ ಸ್ಥಳ 
ದೇಶ

ರಸ್ತೆ ಬದಿಯ ಕಂದಕಕ್ಕೆ ಉರುಳಿದ ಸರ್ಕಾರಿ ಬಸ್; ನಾಲ್ವರು ಸಾವು, ಏಳು ಮಂದಿಗೆ ಗಂಭೀರ ಗಾಯ | Accident

ಡೆಹ್ರಾಡೂನ್: ಹಿಮಾಚಲ ಪ್ರದೇಶದ ಡೆಹ್ರಾಡೂನ್‌ನ ಕಲ್ಸಿ ಪ್ರದೇಶದಲ್ಲಿ ಮಂಗಳವಾರ(ಫೆ. 03) ಬೆಳಿಗ್ಗೆ 30 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸರ್ಕಾರಿ ಬಸ್​ವೊಂದು ಕಂದಕಕ್ಕೆ ಉರುಳಿ ಬಿದ್ದಿದ್ದು, ನಾಲ್ವರು ಮೃತಪಟ್ಟು, 7 ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೀನಕ್ ರಸ್ತೆಯ ಕುವಾನು ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ರಸ್ತೆ ಪ್ರದೇಶ ಹಲವು ಕ್ಲಿಷ್ಟಕರವಾದ ತಿರುವುಗಳನ್ನು ಹೊಂದಿದೆ ಎನ್ನಲಾಗಿದೆ. ಮೃತರನ್ನು ಬಸ್​ ಚಾಲಕ ದಿನೇಶ್ ಕುಮಾರ್(54), ವಿಜ್ಮಲ್ ಗ್ರಾಮದ ಯಾಸ್ಮಿನ್ ಬೇಗಂ(46), ರಿಚಾ(30) ಹಾಗೂ ಕ್ಯಾರ್ಲಾ ನೆರ್ವಾ ನಿವಾಸಿ ಧನ್ ಬಹದ್ದೂರ್ ಎಂದು ಗುರುತಿಸಲಾಗಿದೆ.
ಘಟನೆ ಮಾಹಿತಿ ತಿಳಿದ ತಕ್ಷಣ ಎಸ್​ಡಿಆರ್​ಎಫ್ ತಂಡ ಸ್ಥಳಕ್ಕಾಗಮಿಸಿದ್ದು, ರಕ್ಷಣಾ ಕಾರ್ಯಕೈಗೊಂಡಿದೆ. ಕಂದರದ ಕಡಿದಾದ ಇಳಿಜಾರು ಮತ್ತು ಬಸ್ಸಿನ ತೀವ್ರ ಹಾನಿಗೊಳಗಾದ ಸ್ಥಿತಿಯಿಂದಾಗಿ ರಕ್ಷಣಾ ಕಾರ್ಯಾಚರಣೆ ಸವಾಲಿನ ಕೆಲಸವಾಗಿದ್ದು, ಆದ್ಯಾಗೂ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸಲು ವಿಶೇಷ ಉಪಕರಣಗಳನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಎಸ್​ಡಿಆರ್​ಎಫ್ ಕಮಾಂಡೆಂಟ್ ಯಧುವಂಶಿ, ಬಸ್​ನ ಅವಶೇಷಗಳಡಿ ಸಿಲುಕಿರುವವರನ್ನು ತಲುಪುವುದು ಮತ್ತು ತಕ್ಷಣದ ವೈದ್ಯಕೀಯ ನೆರವು ನೀಡುವುದು ಆದ್ಯತೆಯಾಗಿದೆ. ಭೂಪ್ರದೇಶ ಕಷ್ಟಕರವಾಗಿದೆ, ಆದರೆ ನಮ್ಮ ಸಿಬ್ಬಂದಿಗೆ ಅಂತಹ ಎತ್ತರದ ರಕ್ಷಣಾ ಕಾರ್ಯಾಚರಣೆಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ತಂಡಗಳು ಕಮರಿಯ ಆಳವಾದ ಭಾಗಗಳನ್ನು ತಲುಪುತ್ತಿದ್ದಂತೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಅಧಿಕಾರಿಗಳು ಊಹಿಸಿದ್ದಾರೆ (ಏಜೆನ್ಸೀಸ್).