ಸಿಎಂ ಸಾಮ್ರಾಟ್ ಚೌಧರಿ 
ದೇಶ

ಸರ್ಕಾರಿ ಬಂಗಲೆಗಳು ಪಿತ್ರಾರ್ಜಿತ ಆಸ್ತಿಯಲ್ಲ; ಮನೆ ಖಾಲಿ ಮಾಡದ ಲಾಲು ಕುಟುಂಬದ ವಿರುದ್ಧ ಸಿಎಂ ಸಾಮ್ರಾಟ್ ಚೌಧರಿ ಕಿಡಿ | CM Samrat Chaudhary

ಪಾಟ್ನಾ: ಬಿಹಾರದಲ್ಲಿ ಬಿಜೆಪಿ ಸರ್ಕಾರ ಮತ್ತು ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕುಟುಂಬದ ನಡುವೆ ಸರ್ಕಾರಿ ಬಂಗಲೆ ವಿಚಾರವಾಗಿ ತೀವ್ರ ವಾದ ವಿವಾದ ನಡೆಯುತ್ತಿದ್ದು, ಸರ್ಕಾರಿ ಬಂಗಲೆಗಳು ಪಿತ್ರಾರ್ಜಿತ ಆಸ್ತಿಯಲ್ಲ ಎಂದು ಸಿಎಂ ಸಾಮ್ರಾಟ್ ಚೌಧರಿ(CM Samrat Chaudhary) ಲಾಲು ಕುಟುಂಬವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಮತ್ತು ಬಿಹಾರ ವಿಧಾನ ಪರಿಷತ್ತಿನ ವಿಪಕ್ಷ ನಾಯಕಿ ರಾಬ್ರಿ ದೇವಿ ಅವರಿಗೆ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಅವರು ವಾಸಿಸುತ್ತಿರುವ 10 ಸರ್ಕ್ಯೂಲರ್ ರಸ್ತೆಯ ಮನೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. 39 ಹಾರ್ಡಿಂಗ್ ರಸ್ತೆಯಲ್ಲಿರುವ ಹೊಸ ಸರ್ಕಾರಿ ವಸತಿ ಬಂಗಲೆಗೆ ಶಿಫ್ಟ್ ಆಗುವಂತೆ ಸೂಚನೆ ನೀಡಿದೆ.
ಶೇಖ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಚೌಧರಿ, ಸರ್ಕಾರದ ಅಧಿಕೃತ ಬಂಗಲೆ ಯಾರ ಪೂರ್ವಜರ ಆಸ್ತಿಯೂ ಅಲ್ಲ, ಆದರೆ ಕೆಲವರು ಈ ಬಂಗಲೆಗಳ ಬಗ್ಗೆ ಅತಿಯಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಗನಿಗೆ ಪ್ರತ್ಯೇಕ ಮನೆ ಬೇಕು, ತಾಯಿಗೆ ಪ್ರತ್ಯೇಕ ಮನೆ ಬೇಕು. ಕೆಲವು ವ್ಯಕ್ತಿಗಳು ಯಾವುದೇ ವೆಚ್ಚದಲ್ಲಿ ಬಂಗಲೆಗಳನ್ನು ಆಕ್ರಮಿಸಿಕೊಳ್ಳುವ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ನಾನು ಹಲವಾರು ಬಾರಿ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. 2,400 ಚದರ ಅಡಿ ನಿವಾಸದಲ್ಲಿ ವಾಸಿಸುತ್ತಿದ್ದೆ, ಆದರೆ ಎಂದು ಅದು ನಮ್ಮ ಪೂರ್ವಜರ ಆಸ್ತಿ ಎಂದು ಪರಿಗಣಿಸಿಲ್ಲ ಎಂದಿದ್ದಾರೆ.

ರಾಬ್ರಿ ದೇವಿ ಸವಾಲ್

10 ಸರ್ಕ್ಯುಲರ್ ರಸ್ತೆಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸರ್ಕಾರ ನೋಟಿಸ್ ನೀಡಿದ್ದರ ಈ ಕುರಿತು ಭಾನುವಾರ(ಮೇ 31) ಮಾತನಾಡಿದ್ದ ರಾಬ್ರಿ ದೇವಿ, ಯಾವುದೇ ಕಾರಣಕ್ಕೂ ನಿವಾಸವನ್ನು ಖಾಲಿ ಮಾಡುವುದಿಲ್ಲ. ಸರ್ಕಾರ ಬಯಸಿದರೆ, ಮುಖ್ಯಮಂತ್ರಿಗಳು ಅದನ್ನು ಖಾಲಿ ಮಾಡಿಸಲು ಒತ್ತಾಯವಿದ್ರೆ ಬಲವಂತವಾಗಿ ನಮ್ಮನ್ನು ಹೊರ ಹಾಕಲಿ ನೋಡೋಣ ಎಂದು ವಾಗ್ದಾಳಿ ನಡೆಸಿದ್ದರು (ಏಜೆನ್ಸೀಸ್).