ಆಭರಣ ಪ್ರೀಯರಿಗೆ ಗುಡ್ನ್ಯೂಸ್: ಚಿನ್ನ- ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ, ಕೊಳ್ಳಲು ಇದುವೇ ಸಕಾಲ?
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಹಠಾತ್ ಬೆಳವಣಿಗೆಯಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ(Silver-Gold Price Drop) ಬೆಲೆಗಳು ಬುಧವಾರ ತಲ್ಲಣಗೊಂಡಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಬರೋಬ್ಬರಿ 4,300 ರೂಪಾಯಿ ಕುಸಿತ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ 1.56 ಲಕ್ಷ ರೂಪಾಯಿಗಳಿಗೆ ಬಂದು ತಲುಪಿದೆ. ಇತ್ತ ಬೆಳ್ಳಿಯ ಬೆಲೆಯಂತೂ ಹೂಡಿಕೆದಾರರಿಗೆ ಭಾರಿ ಆಘಾತ ನೀಡಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 10,000 ರೂಪಾಯಿಗಳಷ್ಟು ಪಾತಾಳಕ್ಕೆ ಕುಸಿದು, ಪ್ರತಿ ಕೆಜಿಗೆ 2.45 ಲಕ್ಷ ರೂಪಾಯಿ ಸನಿಹಕ್ಕೆ ತಲುಪಿದೆ.
ಕಚ್ಚಾ ತೈಲ ಬೆಲೆಯಲ್ಲಿ ಉಂಟಾದ ಭಾರಿ ಏರಿಕೆ ಹಾಗೂ ಅಮೆರಿಕನ್ ಡಾಲರ್ ಜಾಗತಿಕವಾಗಿ ಅತ್ಯಂತ ಬಲಿಷ್ಠಗೊಂಡಿರುವುದೇ ಈ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆಯ ತಜ್ಞರು ವಿಶ್ಲೇಷಿಸಿದ್ದಾರೆ.
ಯುಎಸ್-ಇರಾನ್ ಉದ್ವಿಗ್ನತೆ: ಚಿನ್ನದ ಗ್ರಾಹಕರಿಗೆ ವರ, ಹೂಡಿಕೆದಾರರಿಗೆ ಶಾಕ್!
ಸ್ಥಳೀಯ ಮಾರುಕಟ್ಟೆಯ ವ್ಯಾಪಾರಿಗಳ ಪ್ರಕಾರ, 99.9 ರಷ್ಟು ಶುದ್ಧತೆಯ ಚಿನ್ನದ ಬೆಲೆ ಶೇ. 3 ರಷ್ಟು ಕುಸಿದಿದೆ. ಮಂಗಳವಾರದ ಮುಕ್ತಾಯದ ಬೆಲೆ 1,60,300 ರೂಪಾಯಿಗಳಿಗೆ ಹೋಲಿಸಿದರೆ, ಬುಧವಾರದ ಮಾರುಕಟ್ಟೆಯಲ್ಲಿ ಎಲ್ಲಾ ತೆರಿಗೆಗಳು ಸೇರಿದಂತೆ ಚಿನ್ನದ ಬೆಲೆ 1,56,000 ರೂಪಾಯಿಗಳಿಗೆ ಇಳಿಕೆಯಾಗಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆ ಶೇ. 4 ರಷ್ಟು ತೀವ್ರ ಕುಸಿತ ಕಂಡು, ಹಿಂದಿನ ಮುಕ್ತಾಯದ ಬೆಲೆಯಾದ 2,55,700 ರೂಪಾಯಿಗಳಿಂದ ನೇರವಾಗಿ 2,45,700 ರೂಪಾಯಿಗಳಿಗೆ ಬಂದು ನಿಂತಿದೆ.
ಇತ್ತೀಚಿನ ದಿನಗಳಲ್ಲಿ ಸಾರ್ವಕಾಲಿಕ ದಾಖಲೆ ಬರೆಯುತ್ತಿದ್ದ ಚಿನ್ನದ ದರ ಬುಧವಾರ ದಿಢೀರ್ ರಿವರ್ಸ್ ಗೇರ್ ಹಾಕಲು ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ರಾಜಕೀಯ ಉದ್ವಿಗ್ನತೆ ಕಾರಣ ಎನ್ನಲಾಗಿದೆ. ಪಿಎಲ್ ವೆಲ್ತ್‌ನ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥ ರಾಜ್‌ಕುಮಾರ್ ಸುಬ್ರಮಣಿಯನ್ ಅವರ ಪ್ರಕಾರ, ಯುಎಸ್-ಇರಾನ್ ನಡುವಿನ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 90 ಡಾಲರ್ ಗಡಿ ದಾಟಿದೆ. ಇದು ಡಾಲರ್ ಮೌಲ್ಯವನ್ನು ಮತ್ತಷ್ಟು ಬಲಪಡಿಸಿದ್ದು, ಹಳದಿ ಲೋಹದ ಮೇಲಿನ ಬೇಡಿಕೆಯನ್ನು ತಗ್ಗಿಸಿದೆ.
ಹಣದುಬ್ಬರದ ಆತಂಕ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ
ಇಂಧನ ಬೆಲೆಯಲ್ಲಿನ ಈ ಹಠಾತ್ ಜಿಗಿತವು ಜಾಗತಿಕವಾಗಿ ಮಾರುಕಟ್ಟೆಯಲ್ಲಿ ತೀವ್ರ ಹಣದುಬ್ಬರ ಸೃಷ್ಟಿಸಬಹುದು ಮತ್ತು ಬಡ್ಡಿದರಗಳು ದೀರ್ಘಾವಧಿಯವರೆಗೆ ಹೆಚ್ಚಾಗಿಯೇ ಇರಬಹುದು ಎಂಬ ಭೀತಿಯನ್ನು ಹುಟ್ಟುಹಾಕಿದೆ. ಬಡ್ಡಿದರ ಹೆಚ್ಚಾದಾಗ ಸಹಜವಾಗಿಯೇ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದಿಂದ ದೂರ ಸರಿದು ಬಾಂಡ್‌ಗಳತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಆಕರ್ಷಣೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇದರ ಸ್ಪಷ್ಟ ಪ್ರಭಾವ ಕಂಡುಬಂದಿದ್ದು, ಸ್ಪಾಟ್ ಗೋಲ್ಡ್ ಬೆಲೆ ಔನ್ಸ್‌ಗೆ 90.53 ಡಾಲರ್ (ಶೇ 2.13) ಕುಸಿದು 4,168.99 ಡಾಲರ್‌ಗೆ ತಲುಪಿದೆ. ಹಾಗೆಯೇ ಬೆಳ್ಳಿ ಬೆಲೆ ಶೇ 2.24 ರಷ್ಟು ಇಳಿಕೆಯಾಗಿ ಔನ್ಸ್‌ಗೆ 63.87 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.
ಲೆಮನ್ ಮಾರ್ಕೆಟ್ಸ್ ಡೆಸ್ಕ್‌ನ ಸಂಶೋಧನಾ ವಿಶ್ಲೇಷಕ ಗೌರವ್ ಗರ್ಗ್ ಮಾತನಾಡಿ, ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ನೆಲಕಚ್ಚಿವೆ. ಯುಎಸ್ ಟ್ರೆಜರಿ ಬಾಂಡ್ ಇಳುವರಿ ಹೆಚ್ಚಾಗುತ್ತಿರುವುದು ಮತ್ತು ಡಾಲರ್ ಅಬ್ಬರ ಮುಂದುವರಿದಿರುವುದರಿಂದ ಹೂಡಿಕೆದಾರರು ಬುಲಿಯನ್ ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದಿದ್ದಾರೆ. ಚಿನ್ನದ ಬೆಲೆ ಸದ್ಯಕ್ಕೆ ಇಳಿಕೆಯ ಹಾದಿ ಹಿಡಿದಿರುವುದು ಆಭರಣ ಪ್ರಿಯರಿಗೆ ತುಸು ನಿರಾಳ ತಂದಿದ್ದರೂ, ಮಾರುಕಟ್ಟೆಯ ಅಸ್ಥಿರತೆ ಹೂಡಿಕೆದಾರರಲ್ಲಿ ತಳಮಳ ಸೃಷ್ಟಿಸಿದೆ,(ಏಜೆನ್ಸೀಸ್).