West Bengal Election Results
West Bengal Election Results:
ಸತತ ಹದಿನೈದು ವರ್ಷ ದೀದಿ ಆಳ್ವಿಕೆಯ ನಂತರ ಬಂಗಾಳವನ್ನು ಬಿಜೆಪಿ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಮಮತಾ ಬ್ಯಾನರ್ಜಿಯವರ ನೇತೃತ್ವದ ಟಿಎಂಸಿಯು 2026 ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 81 ಸ್ಥಾನವನ್ನು ಪಡೆದುಕೊಂಡಿದ್ದು, ಬಿಜೆಪಿಯು ಬರೋಬ್ಬರಿ 206 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಟಿಎಂಸಿ ಸೋಲಿನ ಬಗ್ಗೆ ಸದ್ಯ ಸಂಸದೆ ಮಹುವಾ ಮೊಯಿತ್ರಾ ಅವರು ಮಾತನಾಡಿದ್ದಾರೆ.
ಮಹುವಾ ಹೇಳಿದ್ದಿಷ್ಟು
'ಬಂಗಾಳಕ್ಕೆ ಬಿಜೆಪಿ ಆಳ್ವಿಕೆ ಬೇಕೆಂದು ಜನ ಬಯಸಿದ್ದಾರೆ. ಅವರ ಇಚ್ಛೆಯಂತೆ ಭಾರತೀಯ ಜನತಾ ಪಾರ್ಟಿ ಬಂದಿದೆ. ಜನರ ತೀರ್ಪನ್ನು ನಾವು ಗೌರವಿಸುತ್ತೇವೆ. ನಾವು ಊಹಿಸಲೂ ಸಾಧ್ಯವಾಗದ ಸವಾಲುಗಳನ್ನು ಎದುರಿಸಿದ್ದೇವೆ. ಅಸಮಾನವಾದ ಅಖಾಡದಲ್ಲಿ ಉತ್ತಮವಾಗಿ ಸ್ಪರ್ಧಿಸಿದ್ದೇವೆ. ಇದಕ್ಕಾಗಿ ನನ್ನ ನಾಯಕಿ(ಮಮತಾ ಬ್ಯಾನರ್ಜಿ) ಮತ್ತು ನನ್ನ ಪಕ್ಷದ ನಾಯಕರ ಬಗ್ಗೆ ನನಗೆ ಹೆಮ್ಮೆಯಿದೆ. ಸಂವಿಧಾನವೇ ಅಂತಿಮವಾಗಿರುವ ಅಖಂಡ ಜಾತ್ಯಾತೀತ ದೇಶಕ್ಕಾಗಿ ನಾವು ನಿರಂತರವಾಗಿ ಹೋರಾಡುತ್ತಲೇ ಇರುತ್ತೇವೆ. ಜೈ ಹಿಂದ್' ಎಂದು ಮಹುವಾ ಅವರು ಎಕ್ಸ್ನಲ್ಲಿ ಟ್ವೀಟ್ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ನ್ನು ರೀಟ್ವೀಟ್ ಮಾಡಿದ್ಯಾಕೆ?
ಬಂಗಾಳದಲ್ಲಿ ಟಿಎಂಸಿ ಸೋತಿರುವ ಬಗ್ಗೆ ಸಂತೋಷ ಪಡಬೇಡಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಅದೇ ಪೋಸ್ಟ್ ಅನ್ನು ಸಂಸದೆ ರೀಟ್ವಿಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸೋಲು ಕಂಡಿದೆ. ಈ ಬಗ್ಗೆ ಕಾಂಗ್ರೆಸ್ನ ಕೆಲವು ನಾಯಕರು ಕಂಡು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅಸ್ಸಾಂ ಮತ್ತು ಬಂಗಾಳದಲ್ಲಿನ ಜನಾದೇಶವು ಕಳ್ಳತನ. ಪ್ರಜಾಪ್ರಭುತ್ವವನ್ನು ನಾಶ ಮಾಡುವ ಧ್ಯೇಯ ಹೊತ್ತಿರುವ ಬಿಜೆಪಿಯ ಬಹುದೊಡ್ಡ ಹೆಜ್ಜೆ ಇದಾಗಿದೆ. ಸಣ್ಣತನದಿಂದ ವರ್ತಿಸುವುದನ್ನು ಬಿಡಿ ಎಂದು ಹೇಳಿ ಟ್ವೀಟ್ ಮಾಡಿದ್ದರು.
ಮತ ಎಣಿಕೆ ಆರಂಭವಾದ ದಿನ ಮಹುವಾ ಅವರು ಸ್ಟ್ರಾಂಗ್ ರೂಮ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಇವಿಎಂ ಟ್ಯಾಪ್ರಿಂಗ್ ಲೋಡ್ ಶೆಡ್ಡಿಂಗ್ ಬಗ್ಗೆ ಆರೋಪಿಸಿದ್ದರು. ಮತ ಎಣಿಕೆಯಲ್ಲಿ ಬಿಜೆಪಿಗೆ ಮುನ್ನಡೆ ಸಿಗುತ್ತಲೇ ಮೌನಿಯಾದರು. ಮಹುವಾ ಮೊಯಿತ್ರಾ ಅವರ ಲೋಕಸಭಾ ಕ್ಷೇತ್ರವಾದ ಕೃಷ್ಣ ನಗರ ದಕ್ಷಿಣ..ಈ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ತಾರಕ್ ನಾಥ್ ಚಟರ್ಜಿ ಮತ್ತು ಸಾಧನ್ ಘೋಷ್ ಜಯ ಕಂಡುಕೊಂಡಿದ್ದಾರೆ.