ಹೈದರಾಬಾದ್: ತಮ್ಮ ಮದುವೆಗೆ ಹಣವಿಲ್ಲದೆ ಕಂಗಾಲಾದ ಪ್ರೇಮಿಗಳಿಬ್ಬರು ಹಣ ಸಂಪಾದಿಸಲು ಅಡ್ಡದಾರಿ ಹಿಡಿದು ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಳ್ಳತನ ( Gold Theft ) ಮಾಡಿರುವ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಪ್ರೀತಿ ಮಾಡಿ ಮದುವೆಯಾಗಲು ನಿರ್ಧರಿಸಿದ ಜೋಡಿಯೊಂದು, ಯಾವುದೇ ನೌಕರಿ ಸಿಗದ ಕಾರಣ ಕೊನೆಗೆ ಕಳ್ಳತನದ ಹಾದಿ ಹಿಡಿದು ಪೊಲೀಸರ ಅತಿಥಿಯಾಗಿದ್ದಾರೆ. ತೆಲಂಗಾಣದ ಹಸ್ತಿನಾಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ದುರ್ಗಾ ರಮಣ ರೆಡ್ಡಿ (23) ಹಾಗೂ ವರಲಕ್ಷ್ಮಿ (24) ಎಂಬುವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಈ ಪ್ರೇಮಿಗಳು ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಹೇಗಾದರೂ ಮಾಡಿ ಮದುವೆಯಾಗಬೇಕೆಂದು ಕನಸು ಕಂಡಿದ್ದರು. ಇದಕ್ಕಾಗಿ ಕಳೆದ ತಿಂಗಳು ಉದ್ಯೋಗ ಹುಡುಕಿಕೊಂಡು ಹೈದರಾಬಾದ್‌ಗೆ ಬಂದಿದ್ದರು. ಆದರೆ, ನಗರದಲ್ಲಿ ಹಗಲಿರುಳು ಕಷ್ಟಪಟ್ಟು ಕೆಲಸ ಹುಡುಕಿದರೂ ತಿಂಗಳವರೆಗೆ ಯಾವುದೇ ಉದ್ಯೋಗ ಸಿಕ್ಕಿರಲಿಲ್ಲ. ಕೈಯಲ್ಲಿ ಹಣವಿಲ್ಲದೆ, ಮದುವೆಯ ಕನಸು ನುಚ್ಚುನೂರಾಗುವ ಹಂತಕ್ಕೆ ತಲುಪಿದಾಗ, ಹೇಗಾದರೂ ಮಾಡಿ ಹಣ ಸಂಪಾದಿಸಬೇಕೆಂಬ ದುರುದ್ದೇಶದಿಂದ ಈ ಜೋಡಿ ಕಳ್ಳತನ ಮಾಡುವ ನಿರ್ಧಾರಕ್ಕೆ ಬಂದಿದೆ.
ಯೋಜನೆಯಂತೆ ಅಕ್ಟೋಬರ್ 18ರ ಬೆಳಗ್ಗೆ ವೆಂಕಟ ರಮಣ ಕಾಲನಿಯಲ್ಲಿರುವ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿದ ಈ ಜೋಡಿ, ಅಲ್ಲಿ ದೇವಸ್ಥಾನವನ್ನು ಗುಡಿಸುತ್ತಿದ್ದ 65 ವರ್ಷದ ವೃದ್ಧೆಯನ್ನು ಗುರಿಯಾಗಿಸಿಕೊಂಡಿದೆ. ವೃದ್ಧೆ ಏಕಾಂಗಿಯಾಗಿರುವುದನ್ನು ಗಮನಿಸಿದ ಇಬ್ಬರು ಒಮ್ಮೆಲೆ ಅವರ ಬಾಯಿಯನ್ನು ಬಲವಂತವಾಗಿ ಮುಚ್ಚಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಅಲ್ಲಿಂದ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾರೆ. ತಮ್ಮ ಕಣ್ಣುಮುಂದೆಯೇ ನಡೆದ ಈ ದರೋಡೆಯಿಂದ ಬೆಚ್ಚಿಬಿದ್ದ ವೃದ್ಧೆ, ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ವೃದ್ಧೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದೇವಸ್ಥಾನದ ಸುತ್ತಮುತ್ತ ಹಾಗೂ ರಸ್ತೆಗಳ ಸಿಸಿಟಿವಿ (CCTV) ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾರ್ಯಾಚರಣೆ ನಡೆಸಿದರು. ಅತ್ಯಂತ ಚತುರತೆಯಿಂದ ತನಿಖೆ ಕೈಗೊಂಡ ಪೊಲೀಸರು ಕೃತ್ಯ ಎಸಗಿದ ಇಬ್ಬರೂ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ, (ಏಜೆನ್ಸೀಸ್).