2003ರಲ್ಲಿ ಬ್ಯಾಂಕ್​ ಲಾಕರ್​ನಲ್ಲಿ ಚಿನ್ನ ಇಟ್ಟಿದ್ದ ಮಹಿಳೆ ಇತ್ತೀಚಗೆ ಓಪನ್ ಮಾಡಿದಾಗ ಕಾದಿತ್ತು ಬಿಗ್​ ಶಾಕ್​!​ Gold Missing 
ದೇಶ

2003ರಲ್ಲಿ ಬ್ಯಾಂಕ್​ ಲಾಕರ್​ನಲ್ಲಿ ಚಿನ್ನ ಇಟ್ಟಿದ್ದ ಮಹಿಳೆ ಇತ್ತೀಚೆಗೆ ಓಪನ್ ಮಾಡಿದಾಗ ಕಾದಿತ್ತು ಬಿಗ್​ ಶಾಕ್​!​ Gold Missing

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಅಂದಾಜು ಐವತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮಾಯವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿ
  • 23ನೇ ನಂಬರಿನ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಲಾಕರ್‌ನಲ್ಲಿ ಒಡವೆಗಳನ್ನು ಭದ್ರವಾಗಿ ಇರಿಸಿದ್ದ ರಶ್ಮಿ ಅರೋರಾ
  • ಬ್ಯಾಂಕ್ ಎಸ್‌ಬಿಐ ಜತೆ ವಿಲೀನಗೊಂಡ ಬಳಿಕ ಲಾಕರ್ ಪರಿಶೀಲಿಸಿದಾಗ ಲಾಕರ್ ಸಂಪೂರ್ಣವಾಗಿ ಖಾಲಿಯಾಗಿರುವುದು ಪತ್ತೆ
  • ಬ್ಯಾಂಕ್ ಮ್ಯಾನೇಜ್‌ಮೆಂಟ್ ಹಾಗೂ ಸಿಬ್ಬಂದಿ ಒಟ್ಟುಗೂಡಿ ಒಡವೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಮಹಿಳೆಯಿಂದ ದೂರು
  • ಶಾಖಾ ವ್ಯವಸ್ಥಾಪಕ ಹಾಗೂ ಸಂಬಂಧಿತ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ ಸಿಸಿಟಿವಿ ದಾಖಲೆಗಳೊಂದಿಗೆ ತನಿಖೆ ಮುಂದುವರಿಸಿದ ಪೊಲೀಸರು
ಲಖನೌ: ಮನೆಯಲ್ಲಿದ್ದರೂ ಸೇಫ್​ ಅಲ್ಲ ಅಂತಾ ಚಿನ್ನವನ್ನು ಬ್ಯಾಂಕ್​ ಲಾಕರ್​ನಲ್ಲಿ ( Gold Missing ) ಇಡುವುದು ಸಾಮಾನ್ಯ. ಆದರೆ, ಲಾಕರ್​ನಿಂದಲೇ ಚಿನ್ನ ಕಳುವಾದರೆ ಹೇಗಾಗಬೇಡ? ಇಂಥದ್ದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಎಲ್ಲರನ್ನೂ ಚಿಂತಿಸುವಂತೆ ಮಾಡಿದೆ. 
55 ವರ್ಷದ ರಶ್ಮಿ ಅರೋರಾ ಎಂಬಾಕೆ ತಮ್ಮ ಜೀವಿತಾವಧಿಯ ಒಡವೆಗಳನ್ನು ಸುರಕ್ಷಿತವಾಗಿರಿಸುವ ಉದ್ದೇಶದಿಂದ 2003ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ (SBT) ಲಾಕರ್‌ನಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಭದ್ರವಾಗಿ ಇರಿಸಿದ್ದರು. ಆದರೆ, ವರ್ಷಗಳ ಬಳಿಕ ತಮ್ಮ ಲಾಕರ್ ತೆರೆದು ನೋಡಿದಾಗ ಅಲ್ಲಿ ಒಡವೆಗಳ ಬದಲಿಗೆ ಖಾಲಿ ಡಬ್ಬಿ ಕಣ್ಣಿಗೆ ಬಿದ್ದಿದ್ದು, 'ನನ್ನ ಒಡವೆಗಳೆಲ್ಲ ಎಲ್ಲಿ ಹೋದವು?' ಎಂದು ದಿಢೀರ್ ಆಘಾತಕ್ಕೊಳಗಾಗಿ ಕಂಗಾಲಾಗುವಂತೆ ಮಾಡಿದೆ.
2003ರ ಫೆಬ್ರವರಿ 26 ರಂದು ರಶ್ಮಿ ಅರೋರಾ ಅವರು ತಮ್ಮ ಪತಿಯೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ (SBT) ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆದು, 23ನೇ ಸಂಖ್ಯೆಯ ಲಾಕರ್‌ನಲ್ಲಿ 50 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಭದ್ರವಾಗಿ ಇರಿಸಿದ್ದರು. ರಶ್ಮಿ ಅವರ ಪತಿ ನಿಧನರಾದ ಬಳಿಕ ಅವರು ಕಾನ್ಪುರದ ಸ್ವರೂಪ್ ನಗರದಿಂದ ಲಖನೌಗೆ ತಮ್ಮ ಮಗಳು ಹಾಗೂ ಅಳಿಯನ ಬಳಿ ವಾಸಿಸಲು ತೆರಳಿದ್ದರಿಂದ, ಬ್ಯಾಂಕಿಗೆ ಭೇಟಿ ನೀಡುವುದನ್ನು ನಿಲ್ಲಿಸಿದ್ದರು.
ನಾಲ್ಕು ತಿಂಗಳ ಹಿಂದೆ ರಶ್ಮಿ ಅವರು ತಮ್ಮ ಕಿರಿಯ ಮಗಳೊಂದಿಗೆ ಬ್ಯಾಂಕಿಗೆ ಭೇಟಿ ನೀಡಿದಾಗ, ಎಸ್‌ಬಿಟಿ ಬ್ಯಾಂಕು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜತೆ ವಿಲೀನಗೊಂಡಿರುವುದಾಗಿ ಮತ್ತು ಅವರ ಹೆಸರಿನಲ್ಲಿ ಯಾವುದೇ ಲಾಕರ್ ಇಲ್ಲವೆಂದು ತಿಳಿಸಲಾಯಿತು. ಬಳಿಕ ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿಯಾದಾಗ, ಲಾಕರ್ ಬಾಡಿಗೆಯನ್ನು ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸುತ್ತಿದ್ದ ಕಾರಣ ಖಾತೆಯಲ್ಲಿ ಶೂನ್ಯ ಬಾಕಿ ಉಳಿದಿದೆ ಎಂದು ತಿಳಿಸಲಾಯಿತು.
ಜುಲೈ 21 ರಂದು ಖಾತೆಯನ್ನು ಮರುತೆರೆಯಲು ಅಥವಾ ಆ್ಯಕ್ಟೀವ್​ ಮಾಡಲು ಹಣ ವರ್ಗಾಯಿಸಿದ ರಶ್ಮಿ ಅವರು, ಜುಲೈ 27 ರಂದು ಲಾಕರ್ ಕೀಯೊಂದಿಗೆ ಬಂದು ತೆರೆದು ನೋಡಿದಾಗ ಲಾಕರ್ ಸಂಖ್ಯೆ 23 ಸಂಪೂರ್ಣವಾಗಿ ಖಾಲಿಯಾಗಿರುವುದು ಕಂಡುಬಂತು.
ಬ್ಯಾಂಕ್ ಮ್ಯಾನೇಜ್‌ಮೆಂಟ್ ಹಾಗೂ ಸಿಬ್ಬಂದಿ ಒಟ್ಟುಗೂಡಿ ಆಭರಣಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮಹಿಳೆಯು ಪೊಲೀಸ್ ದೂರು ದಾಖಲಿಸಿದ್ದು, ಶಾಖಾ ವ್ಯವಸ್ಥಾಪಕ ಹಾಗೂ ಸಂಬಂಧಿತ ಸಿಬ್ಬಂದಿ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಈ ಕುರಿತು ಮಾತನಾಡಿರುವ ಕಾನ್ಪುರದ ಪೊಲೀಸ್ ಉಪ ಆಯುಕ್ತ (DCP) ಅತುಲ್ ಶ್ರೀವಾಸ್ತವ ಅವರು, ಪ್ರಕರಣ ದಾಖಲಿಸಿಕೊಂಡು ಸಂಬಂಧಿತ ಬ್ಯಾಂಕ್ ಉದ್ಯೋಗಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಸಿಸಿಟಿವಿ ದಾಖಲೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಲಾಕರ್ ದಾಖಲೆಗಳು, ಬ್ಯಾಂಕ್ ದಾಖಲೆಗಳು ಮತ್ತು ಉದ್ಯೋಗಿಗಳ ಪಾತ್ರದ ಕುರಿತು ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್​).