ಗೋವಾ ಸಿಎಂ ಪ್ರಮೋದ್ ಸಾವಂತ್ 
ದೇಶ

ಗೋವಾ ಅಗ್ನಿ ದುರಂತ; ನೈಟ್‌ಕ್ಲಬ್ ಮ್ಯಾನೇಜರ್ ಬಂಧನ, ಮಾಲೀಕರ ವಿರುದ್ಧ ವಾರಂಟ್ ಜಾರಿ: ಸಿಎಂ ಪ್ರಮೋದ್ ಸಾವಂತ್ | CM Pramod Sawant

ಪಣಜಿ: ಶನಿವಾರ ತಡರಾತ್ರಿ ಉತ್ತರ ಗೋವಾದ ಅರ್ಪೋರಾದಲ್ಲಿರುವ ರೋಮಿಯೋ ಲೇನ್‌ನ ಜನಪ್ರಿಯ ನೈಟ್‌ಕ್ಲಬ್ ಬಿರ್ಚ್‌ನಲ್ಲಿ ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಕ್ಲಬ್​ ಮ್ಯಾನೇಜರ್ ಬಂಧನವಾಗಿದೆ. ಮಾಲೀಕರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಈ ಕುರಿತು ಎನ್​ಡಿಟಿವಿ ಜೊತೆ ಮಾತನಾಡಿರುವ ಅವರು, ರಾತ್ರಿ 12 ಗಂಟೆ ಸುಮಾರಿಗೆ ಕ್ಲಬ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ಅನೇಕ ಜನರು (ನೈಟ್‌ಕ್ಲಬ್‌ನಿಂದ) ಹೊರಬರಲು ಸಾಧ್ಯವಾಗಲಿಲ್ಲ. ಮತ್ತು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 25 ಜನ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಗಾಯಾಳುಗಳು  ಅಪಾಯದಿಂದ ಪಾರಾಗಿದ್ದಾರೆ, ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಗೋವಾದ ಇತಿಹಾಸದಲ್ಲಿ ಇಂತಹ ಘಟನೆ ಇದೇ ಮೊದಲು ನಡೆದಿರುವುದು ಎಂದು ಹೇಳಿದ್ದಾರೆ.
ಬೆಂಕಿ ಹೊತ್ತಿಕೊಂಡಿದ್ದೇಗೆ? 
ರಾಜ್ಯ ರಾಜಧಾನಿ ಪಣಜಿಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಅರ್ಪೋರಾ ಗ್ರಾಮದ ಜನಪ್ರಿಯ ಪಾರ್ಟಿ ಸ್ಥಳವಾದ ಬಿರ್ಚ್ ಬೈ ರೋಮಿಯೋ ಲೇನ್‌ನಲ್ಲಿರುವ ನೈಟ್​ಕ್ಲಬ್​ನಲ್ಲಿ ಅವಘಡ ಸಂಭವಿಸಿದೆ. 
ಕ್ಲಬ್​ನಲ್ಲಿ  ಸಿಬ್ಬಂದಿ ಸೇರಿ 100 ಮಂದಿ ಇದ್ದಾಗ ಬೆಂಕಿ ಹೊತ್ತಿಕೊಂಡಿದೆ. ಕೆಲವು ಪ್ರವಾಸಿಗರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಇತರರು ಕೆಳಗಿನ ಮಹಡಿಯ ಅಡುಗೆಮನೆಗೆ ಓಡಿಹೋದರು. ಸ್ವಲ್ಪ ಸಮಯದೊಳಗೆ ಇಡೀ ಕ್ಲಬ್ ಬೆಂಕಿಗೆ ಆಹುತಿಯಾಗಿದೆ. 
ಮೃತರಲ್ಲಿ ಹೆಚ್ಚಿನವರು ಅಡುಗೆ ಸಿಬ್ಬಂದಿಯಾಗಿದ್ದು, ಅವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಮೂರರಿಂದ ನಾಲ್ಕು ಪ್ರವಾಸಿಗರು ಕೂಡ ಸೇರಿದ್ದಾರೆ. ಮೃತದೇಹಗಳ ಗುರುತು ಪತ್ತೆ ಹಚ್ಚುವಿಕೆ ಕಾರ್ಯ ನಡೆಯುತ್ತಿದೆ (ಏಜೆನ್ಸೀಸ್).