ನವದೆಹಲಿ: ಕಾಮಿಡಿ ಶೋ ಒಂದರಲ್ಲಿ ಯುವಕನೊಬ್ಬ ತಮಾಷೆಗೆಂದು ಹೇಳಿದ ಮಾತು(Biryani Row) ಆತನ ಕೆಲಸವನ್ನೇ ಕಸಿದುಕೊಂಡಿದೆ. ಡೇಟಿಂಗ್ ಸಂಸ್ಕೃತಿ ಮತ್ತು ಮಹಿಳೆಯರ ಗೌರವದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದ ಗುರುಗ್ರಾಮದ ಹಿಮಾಂಶು ಜಾಂಗ್ರಾ ಎಂಬ 22 ವರ್ಷದ ಯುವಕನನ್ನು ಆತನ ಕಂಪನಿ ಕೆಲಸದಿಂದ ವಜಾ ಮಾಡಿದೆ.
ಅಸಲಿಗೆ ನಡೆದಿದ್ದೇನು?
ಕೆಲವು ದಿನಗಳ ಹಿಂದೆ ಪ್ರಖ್ಯಾತ ಕಾಮಿಡಿಯನ್ ಪ್ರಣೀತ್ ಮೋರೆ ಅವರ ಸ್ಟ್ಯಾಂಡ್-ಅಪ್ ಕಾಮಿಡಿ ಶೋ ನಡೆಯುತ್ತಿತ್ತು. ಈ ವೇಳೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ವೆಬ್ ಡೆವಲಪರ್ ಹಿಮಾಂಶು ಜಾಂಗ್ರಾ ಜೊತೆ ಕಾಮಿಡಿಯನ್ ಮಾತನಾಡುತ್ತಿದ್ದರು. ಆಗ ಹಿಮಾಂಶು, ತಾನು ಇತ್ತೀಚೆಗೆ ಹುಡುಗಿಯೊಬ್ಬಳ ಜೊತೆ ಡೇಟಿಂಗ್‌ಗೆ ಹೋಗಿದ್ದಾಗ ಚಿಕನ್ ಬಿರಿಯಾನಿಗಾಗಿ 370 ರೂಪಾಯಿ ಖರ್ಚು ಮಾಡಿದ್ದಾಗಿ ಹೇಳಿದ್ದ. ಅಷ್ಟೇ ಅಲ್ಲದೆ, "ನಾನು ದುಡ್ಡು ಕೊಟ್ಟಿದ್ದೇನೆ ಅಂದಮೇಲೆ ಆಕೆಯಿಂದ ನನಗೆ ವಾಪಸ್ ಏನಾದರೂ ಸಿಗಬೇಕಲ್ಲವೇ (ಶಾರೀರಿಕ ಸುಖ)?" ಎನ್ನುವ ಅರ್ಥದಲ್ಲಿ ಕಮೆಂಟ್ ಮಾಡಿದ್ದ.
ಇಂಟರ್ನೆಟ್‌ನಲ್ಲಿ ಆಕ್ರೋಶ, ಕೆಲಸದಿಂದ ವಜಾ!
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. "ಹುಡುಗಿಗೆ ಬಿರಿಯಾನಿ ಕೊಡಿಸಿದ ತಕ್ಷಣ ಆಕೆಯ ಮೇಲೆ ನಿನಗೆ ಹಕ್ಕು ಬಂದುಬಿಡುತ್ತದೆಯೇ?" ಎಂದು ನೆಟ್ಟಿಗರು ಹಿಮಾಂಶು ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು.
ವಿವಾದ ಜೋರಾಗುತ್ತಿದ್ದಂತೆ ಹಿಮಾಂಶು ಕೆಲಸ ಮಾಡುತ್ತಿದ್ದ ಗುರುಗ್ರಾಮದ 'ಸ್ಟಾರ್ವಿಕ್ ಡಿಸೈನ್' ಕಂಪನಿಗೆ ಸಾರ್ವಜನಿಕರಿಂದ ಸಾಲು ಸಾಲು ಇಮೇಲ್ ಮತ್ತು ಫೋನ್ ಕರೆಗಳು ಬರಲಾರಂಭಿಸಿದವು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಕಂಪನಿಯ ಮಾಲೀಕ ವಿವೇಕ್ ವಿಶ್ವಕರ್ಮ, ಹಿಮಾಂಶು ಜಾಂಗ್ರಾನನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಪ್ರಕಟಿಸಿದ್ದಾರೆ.
ಬಾಸ್ ವಿರುದ್ಧವೂ ನೆಟ್ಟಿಗರ ಗರಂ! ಯಾಕೆ?
ಹಿಮಾಂಶುನನ್ನು ಕೆಲಸದಿಂದ ತೆಗೆದ ಕಂಪನಿ ಮಾಲೀಕ ವಿವೇಕ್, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ಅವರು, "ಹಿಮಾಂಶು ಮಾಡಿದ್ದು ತಪ್ಪು, ಆದರೆ ಆತನಿಗೆ ಕೇವಲ 22 ವರ್ಷ ವಯಸ್ಸು. ತಪ್ಪುಗಳಿಂದ ಕಲಿಯಲು ಸಮಾಜ ಆತನಿಗೆ ಇನ್ನೊಂದು ಅವಕಾಶ ನೀಡಬೇಕು" ಎಂದು ಹೇಳಿದ್ದರು.
ಕಂಪನಿಯ ಬಾಸ್ ಆಡಿದ ಈ ಮಾತು ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. "ಒಂದು ವೇಳೆ ಸಾರ್ವಜನಿಕರ ಒತ್ತಡ ಇಲ್ಲದಿದ್ದರೆ ನೀವು ಆತನನ್ನು ಕೆಲಸದಿಂದ ತೆಗೆಯುತ್ತಲೇ ಇರಲಿಲ್ಲ. ಇಂತಹ ಘೋರ ಮನಸ್ಥಿತಿಯ ಯುವಕನಿಗೆ ಎರಡನೇ ಅವಕಾಶದ ಹೆಸರಿನಲ್ಲಿ ಸಪೋರ್ಟ್ ಮಾಡಬೇಡಿ" ಎಂದು ಜನರು ಈಗ ಬಾಸ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಸದ್ಯಕ್ಕೆ ಈ '370 ರೂಪಾಯಿ ಬಿರಿಯಾನಿ' ವಿವಾದ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದ್ದು, ಹಿಮಾಂಶು ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿಕೊಂಡಿದ್ದಾನೆ,(ಏಜೆನ್ಸೀಸ್).