ಟಿಕೆಟ್ ತೋರಿಸು ಎಂದು ಟಿಟಿಇ ಕೇಳುತ್ತಿದ್ದಂತೆ ಬಟ್ಟೆ ಹರಿದುಕೊಂಡು ಯುವತಿ ಹೈಡ್ರಾಮ! ಮುಂದೇನಾಯ್ತು ನೀವೇ ನೋಡಿ...TTE
- ಟಿಕೆಟ್ ತೋರಿಸಲು ಕೇಳಿದ ಟಿಟಿಇ ಜತೆ ವಾಗ್ವಾದ ನಡೆಸಿ ಬೆದರಿಕೆ ಹಾಕಿದ ಯುವತಿ
- ವಾಗ್ವಾದ ವಿಕೋಪಕ್ಕೆ ಹೋದಾಗ ಏಕಾಏಕಿ ತಾನೇ ಬಟ್ಟೆ ಹರಿದುಕೊಂಡು ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪದ ನಾಟಕ
- ರೈಲಿನಲ್ಲಿದ್ದವರು ವಿಡಿಯೋ ಸೆರೆಹಿಡಿದಿದ್ದರಿಂದ ಸುಳ್ಳು ಪ್ರಕರಣದಿಂದ ಬಚಾವ್ ಆದ ಟಿಟಿಇ
- ಗದ್ದಲ ಸೃಷ್ಟಿಸಿದ್ದಕ್ಕೆ ಸಾವಿರ ರೂಪಾಯಿ ದಂಡ ವಿಧಿಸಿ ಕ್ರಮ ತೆಗೆದುಕೊಂಡ ಆರ್ಪಿಎಫ್ ಪೊಲೀಸರು
ನವದೆಹಲಿ: ದಾನಾಪುರದಿಂದ ಸಿಕಂದರಾಬಾದ್ಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ ಟಿಕೆಟ್ ತಪಾಸಣೆ ವೇಳೆ ( TTE ) ಯುವತಿಯೊಬ್ಬಳು ನಡೆಸಿದ ಹೈಡ್ರಾಮಾ ಹಾಗೂ ಅತಿರೇಕದ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಮಹಿಳಾ ಪ್ರಯಾಣಿಕರೊಬ್ಬರು ದಾನಾಪುರ-ಸಿಕಂದರಾಬಾದ್ ಎಕ್ಸ್ಪ್ರೆಸ್ನ ಎಸಿ 2-ಟೈಯರ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಟಿಟಿಇ (TTE) ಅವರು ಟಿಕೆಟ್ ತೋರಿಸುವಂತೆ ಕೇಳಿದ್ದೇ ತಡ ಯುವತಿ ಅನುಚಿತವಾಗಿ ವರ್ತಿಸಿದ್ದಾಳೆ. ಆರಂಭದಲ್ಲಿ ತನ್ನ ಬಳಿ ಸರಿಯಾದ ಟಿಕೆಟ್ ಇಲ್ಲದಿರುವುದನ್ನು ಮರೆಮಾಚಲು ಯತ್ನಿಸಿದ ಆ ಯುವತಿ, ಟಿಟಿಇ ಜತೆ ವಾಗ್ವಾದಕ್ಕಿಳಿದಿದ್ದಲ್ಲದೆ, ದಂಡ ಪಾವತಿಸಲು ಸಂಪೂರ್ಣವಾಗಿ ನಿರಾಕರಿಸಿದಳು.
ಮಾತುಕತೆ ವಾಗ್ವಾದಕ್ಕೆ ತಿರುಗಿದಾಗ ಆ ಯುವತಿ ತನ್ನ ಸಹೋದರನ ಪ್ರಭಾವವನ್ನು ಬಳಸಿ ಟಿಟಿಇಗೆ ಬೆದರಿಕೆಗಳನ್ನು ಒಡ್ಡಲು ಆರಂಭಿಸಿದಳು. ತನ್ನ ಹೆಸರು ರಾಧಿಕಾ ತಿವಾರಿ ಹಾಗೂ ತನ್ನ ಸಹೋದರ ಮುನ್ನಾ ತಿವಾರಿ ಎಂದು ಪರಿಚಯಿಸಿಕೊಂಡು, ನನ್ನ ಅಣ್ಣ ಯಾರೆಂದು ನಿನಗೆ ಗೊತ್ತಿಲ್ಲ, ಆತನ ಮುಂದೆ ನೀನೊಬ್ಬ ಸಣ್ಣ ಉದ್ಯೋಗಿ ಎಂದೆಲ್ಲಾ ಏಕವಚನದಲ್ಲಿ ಗದರತೊಡಗಿದಳು.
ವಿವಾದ ತೀವ್ರಗೊಂಡಂತೆ ಆ ಯುವತಿ ಏಕಾಏಕಿ ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ಅತಿರೇಕದ ನಾಟಕವಾಡಿದಳು. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿದ್ದ ಟಿಟಿಇ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅಸಭ್ಯ ವರ್ತನೆಯ ಸುಳ್ಳು ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದಳು. ಅಲ್ಲದೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸಲು ಯತ್ನಿಸಿದಳು.
ಅದೃಷ್ಟವಶಾತ್ ರೈಲಿನಲ್ಲಿದ್ದ ಟಿಟಿಇ ಹಾಗೂ ಸಹಪ್ರಯಾಣಿಕಯೊಬ್ಬರು ಈ ಸಂಪೂರ್ಣ ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡಿದ್ದರು. ಯುವತಿ ಸ್ವತಃ ತನ್ನ ಬಟ್ಟೆ ಹರಿದುಕೊಳ್ಳುತ್ತಿರುವ ದೃಶ್ಯವು ಸ್ಪಷ್ಟವಾಗಿ ದಾಖಲಾಗಿದ್ದರಿಂದ, ಮುಂದೆ ಎದುರಾಗಬಹುದಾದ ಸುಳ್ಳು ಆರೋಪಗಳಿಂದ ಟಿಟಿಇಗೆ ದೊಡ್ಡ ರಕ್ಷಣೆ ಸಿಕ್ಕಂತಾಯಿತು.
ರೈಲು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ (PDDU) ನಿಲ್ದಾಣ ತಲುಪಿದ ಕೂಡಲೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಆರ್ಪಿಎಫ್ (RPF) ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಅಲ್ಲಿಯೂ ಸಹ ಯುವತಿ ಪೊಲೀಸರು ಮತ್ತು ಟಿಟಿಇ ಎದುರು ಗಲಾಟೆ ಮುಂದುವರಿಸಿದಳು. ಕರ್ತವ್ಯಕ್ಕೆ ಅಡ್ಡಿಪಡಿಸಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಆಕೆಗೆ 1000 ರೂ. ದಂಡ ವಿಧಿಸಲಾಗಿದೆ ಎಂದು ಆರ್ಪಿಎಫ್ ಇನ್ಸ್ಪೆಕ್ಟರ್ ಅನಿತಾ ಕುಮಾರಿ ತಿಳಿಸಿದ್ದಾರೆ, (ಏಜೆನ್ಸೀಸ್).