ನವದೆಹಲಿ: ಹೈದರಾಬಾದ್ ಲೋಕಸಭಾ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ದೇಶದ ಯುವಕರನ್ನು ಉದ್ದೇಶಿಸಿ ನೀಡಿರುವ ಹೇಳಿಕೆಯೊಂದು ಈಗ ಸೋಷಿಯಲ್ ಮೀಡಿಯಾನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹುಡುಗರೇ, ನೀವು ಇಷ್ಟ ಪಡುವ ಹುಡುಗಿಗೆ ಐ ಲವ್ ಯೂ ಎಂದು ಹೇಳುವ ಮೊದಲು ಆಕೆಯನ್ನು ಮದುವೆಯಾಗಿ ಎಂದಿರುವ ಸಂಸದರ ಹೇಳಿಕೆ ಈಗ ಎಲ್ಲಡೆ ಚರ್ಚೆಯ ಟಾಪಿಕ್ ಆಗಿ ಮಾರ್ಪಟ್ಟಿದೆ.
ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಓವೈಸಿ, ಹುಡುಗರು, ಯಾವುದಾದರು ಹುಡುಗಿಯನ್ನು ಇಷ್ಟ ಪಟ್ಟಿದ್ದರೆ, ಅವಳಿಗೆ ಐ ಲವ್ ಯೂ ಅನ್ನು ಹೇಳುವ ಪೂರ್ವದಲ್ಲೇ ಮದುವೆಯಾಗುವುದು ಸೂಕ್ತ ಎಂದು ತಿಳಿಸಿದ್ದಾರೆ. ತಮ್ಮ ರಾಜಕೀಯ ಮಿತ್ರರೊಬ್ಬರ ಮಗನ ಜೊತೆ ನಡೆದ ಸಂಭಾಷಣೆಯನ್ನು ನೆನಪಿಸಿಕೊಂಡ ಓವೈಸಿ, ನಾನು, ನನ್ನ ಗೆಳೆಯನೊಬ್ಬನ ಮಗನಿಗೆ ಮೊದಲು ಒಂದು ಮದುವೆ ಮಾಡಿಕೊ ಎಂದು ಹೇಳಿದ್ದೆ. ಅದಕ್ಕವನು, ನಾನು ಮೊದಲು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸೆಟೆಲ್ ಆಗಬೇಕು, ಆಮೇಲೆ ಮದುವೆ ಆಗುತ್ತೆನೆಂದ.
ಆಗ ನಾನು, ನೋಡು ನನ್ನ ಗಡ್ಡ ಬಿಳಿ ಬಣ್ಣಕ್ಕೆ ತಿರುಗಿದೆ, ಆದರೆ ನಾನು ಇಲ್ಲಿವರೆಗೆ ಸೆಟೆಲ್ ಆಗಿಲ್ಲ. ಮೊದಲೊಂದು ಮದುವೆ ಆಗು, ಆಮೇಲೆ ಎಲ್ಲಾ ಅದಾಗದೇ ಸೆಟೆಲ್ ಆಗುತ್ತದೆ ಎಂದೆ, ಎಂದು ಸಂಸದ ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಸಭಿಕರು ನಗೆಗಡಲಿನಲ್ಲಿ ತೇಲಿದ್ದಾರೆ.
ಮಾತನ್ನು ಮುಂದುವರಿಸುತ್ತಾ ಓವೈಸಿ, ಮನೆಯಲ್ಲಿ ಗಂಡಸರಿಗೆ ತೊಂದರೆ ಕೊಡಲು ಯಾರಾದರೂ ಇರಬೇಕು. ಇಲ್ಲದಿದ್ದರೆ ಆ ಗಂಡಸು ದೇಶಕ್ಕೆ ತೊಂದರೆ ಕೊಡುತ್ತಿರುತ್ತಾನೆ. ಅಲ್ಲವೇ? ಎಂದು ಓವೈಸಿ ಹೇಳಿದ್ದಾರೆ. ಆದರೆ ಈ ಮಾತನ್ನು ಸಂಸದ, ನರೇಂದ್ರ ಮೋದಿಗೆ ಹೇಳಿದ್ದೋ ಇಲ್ಲ, ರಾಹುಲ್ ಗಾಂಧಿಗೆ ಹೇಳಿದ್ದೋ ಎಂದು ತಿಳಿದಿಲ್ಲ.
ಇದೇ ವೇದಿಕೆಯಲ್ಲಿ ಏಕರೂಪ ನಾಗರಿಕ ಕಾನೂನಿನ ಬಗ್ಗೆ ಅಸಮಾಧಾನ ಹೊರಹಾಕಿದ ಓವೈಸಿ, ನಾನು ಈ UCC ಕಾನೂನನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಹಿಂದೂಗಳ ಕಾಯಿದೆ, ನೀತಿ-ನಿಯಮಗಳನ್ನು ಹಿಂದೂಯೇತರರ ಮೇಲೆ ಹೇರುವುದೇ ಇದರ ಉದ್ದೇಶವಾಗಿದೆ ಎಂದು ಓವೈಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾಯ್ದೆಯ ಅಂಗೀಕಾರವನ್ನು ಸ್ವೀಕರಿಸಿದರೆ, ನಮ್ಮ ಧಾರ್ಮಿಕ ಸ್ವತಂತ್ರದ ಹಕ್ಕಿಗೆ ಧಕ್ಕೆಯಾಗುತ್ತದೆ, ಈ ಕಾಯ್ದೆ ದೇಶದಲ್ಲಿ ಸಂಪೂರ್ಣ ಜಾರಿಯಾದರೆ, ಅಲ್ಪ ಸಂಖ್ಯಾತರ ಹಕ್ಕಿಗೆ ತೊಂದರೆಯುಂಟಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).