ಅಯೋಧ್ಯೆಗೆ ಬಂದ ಜರ್ಮನ್ ರಾಮಭಕ್ತ
- ಅಯೋಧ್ಯೆಗೆ ಬಂದ ಜರ್ಮನ್ ರಾಮಭಕ್ತ
- ತನ್ನ ಹೆಸರು ಆಂಜನೇಯ ಎಂದು ಪರಿಚಯಿಸಿಕೊಂಡ ಬಾಲಕ
- ಸಂಸ್ಕೃತದಲ್ಲಿ ರಾಮನಾಮ ಜಪ ಮಾಡಿದ ಬಾಲಕನ ವಿಡಿಯೋ ವೈರಲ್
ಅಯೋಧ್ಯಾ: ಸನಾತನ ಪರಂಪರೆಯಲ್ಲಿ ರಾಮ ಮತ್ತು ಹನುಮಂತನ ಬಾಂಧವ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಎಲ್ಲಿ ರಾಮನ ಹೆಸರಿರುತ್ತದೋ ಅಲ್ಲಿ ಹನುಮಂತ ಇರುತ್ತಾನೆ ಎಂಬುದು ಭಕ್ತರ ನಂಬಿಕೆ.
ಆದರೆ, ಭಾನುವಾರ (ಮಾ.22) ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಘಟನೆ ಮಾತ್ರ ಇಡೀ ಜಗತ್ತಿನ ಗಮನ ಸೆಳೆದಿದೆ. ಇಲ್ಲಿ ಹನುಮಂತನ ಹೆಸರಿಟ್ಟುಕೊಂಡ ಜರ್ಮನಿ (German Boy Anjaneya) ಯ ಬಾಲಕನೊಬ್ಬ ರಾಮಲಲ್ಲಾನ ಪಾದಕ್ಕೆ ಶರಣಾಗಿದ್ದು, ಈದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ.
ಜರ್ಮನಿಯಿಂದ ಬಂದ ಆಂಜನೇಯ!
ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಪು, ಹಣೆಯ ಮೇಲೆ ಕೇಸರಿ ತಿಲಕ, ಮುಖದಲ್ಲಿ ಮುಗ್ಧ ನಗು, ಹೀಗೆ ಅಪ್ಪಟ ಭಾರತೀಯ ಬಾಲಕನಂತೆ ಕಾಣುತ್ತಿದ್ದ ಈತನ ಹೆಸರು ಆಂಜನೇಯ. ಈತ ಮೂಲತಃ ಜರ್ಮನಿಯವನು. ರಾಮಮಂದಿರಕ್ಕೆ ಭೇಟಿ ನೀಡಿದ ಈ ಪುಟ್ಟ ಭಕ್ತ, ರಾಮನ ವಿಗ್ರಹದ ಮುಂದೆ ನಿಂತು ಅತ್ಯಂತ ಸ್ಪಷ್ಟವಾದ ಸಂಸ್ಕೃತ ಭಾಷೆಯಲ್ಲಿ ರಾಮ ನಾಮ ಜಪಿಸುತ್ತಿದ್ದುದನ್ನು ನೋಡಿ ಅಲ್ಲಿನ ಭಕ್ತರೇ ಅಚ್ಚರಿಗೊಂಡಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಆಂಜನೇಯ, ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ಭಾರತದಲ್ಲಿ ಈಗ ತುಂಬಾ ಬಿಸಿಲಿದೆ, ಆದರೆ ನಾನು ಈ ಬೇಸಿಗೆಯನ್ನು ನಿಭಾಯಿಸಬಲ್ಲೆ. ಇಲ್ಲಿಗೆ ಬಂದಿದ್ದು ನಿಜಕ್ಕೂ ಒಳ್ಳೆಯ ಅನುಭವ ನೀಡಿದೆ. ಮಂದಿರ ತುಂಬಾ ಸುಂದರವಾಗಿದೆ ಮತ್ತು ರಾಮಲಲ್ಲಾನ ವಿಗ್ರಹವನ್ನು ನೋಡುವುದು ಅದ್ಭುತವಾಗಿತ್ತು, ಎಂದು ಹೇಳಿದ್ದಾನೆ.
ಈ ಬಾಲಕ ಮಾತನಾಡುವ ಶೈಲಿ ಮತ್ತು ಆತನ ಭಕ್ತಿ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಈ ಮಗು ವಿದೇಶಿಯನಲ್ಲ, ಹಿಂದಿನ ಜನ್ಮದಲ್ಲಿ ಭಾರತೀಯನೇ ಇರಬೇಕು ಎಂದು ಸಾವಿರಾರು ಜನರು ಕಮೆಂಟ್ ಮಾಡುತ್ತಿದ್ದಾರೆ.
ಜಾಗತಿಕ ಭಕ್ತಿಯ ಕೇಂದ್ರವಾದ ಅಯೋಧ್ಯೆ
ಆಂಜನೇಯನ ಈ ಭೇಟಿ ಕೇವಲ ಒಂದು ವೈಯಕ್ತಿಕ ಘಟನೆಯಲ್ಲ, ಇದು ಅಯೋಧ್ಯೆಯು ಜಾಗತಿಕ ಮಟ್ಟದಲ್ಲಿ ಹೇಗೆ ಬೆಳೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 2024ರ ಜನವರಿ 22ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆಯ ನಂತರ, ಅಯೋಧ್ಯೆ ವಿಶ್ವದ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.
2025ರ ಅಂತ್ಯದ ವೇಳೆಗೆ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಇದೀಗ ಅಮೆರಿಕ, ಜರ್ಮನಿ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಿಂದ ಪ್ರವಾಸಿಗರ ಓಟ ಹೆಚ್ಚಾಗಿದೆ. ಕೇವಲ ಧಾರ್ಮಿಕ ನಂಬಿಕೆ ಮಾತ್ರವಲ್ಲದೆ, ಭಾರತದ ಶ್ರೀಮಂತ ಸಂಸ್ಕೃತಿಯನ್ನು ನೋಡಲು ವಿದೇಶಿಗರು ಅಯೋಧ್ಯೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಅಭಿವೃದ್ಧಿಯ ಪಥದಲ್ಲಿ ರಾಮ ನಗರಿ
ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಅಯೋಧ್ಯೆಯ ಮೂಲಸೌಕರ್ಯವೂ ಬದಲಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹೈಟೆಕ್ ಹೋಟೆಲ್‌ಗಳು ಮತ್ತು ಸುಸಜ್ಜಿತ ರಸ್ತೆಗಳು ನಗರದ ಚಿತ್ರಣವನ್ನೇ ಬದಲಿಸಿವೆ. ಜರ್ಮನಿಯ ಈ ಪುಟ್ಟ ಆಂಜನೇಯನ ಭಕ್ತಿ ಇಂದು ಕೋಟ್ಯಾಂತರ ರಾಮ ಭಕ್ತರ ಮನ ಗೆದ್ದಿರುವುದಂತೂ ಸುಳ್ಳಲ್ಲ,(ಏಜನ್ಸೀಸ್).