ದೆಹಲಿ ಪೊಲೀಸ್ ಮತ್ತು ಯುಪಿ ಎಸ್‌ಟಿಎಫ್ ಜಂಟಿ ಎನ್‌ಕೌಂಟರ್‌ನಲ್ಲಿ ಹತನಾದ ದಾವೂದ್ ಗ್ಯಾಂಗ್ ಸಹಚರ ನಸೀಮ್ ದುರ್ರಾನಿ 
ದೇಶ

ಸಚಿವರ ಕಚೇರಿ ಬಳಿ ಗುಂಡು ಹಾರಿಸಿದ್ದ ಗ್ಯಾಂಗ್‌ಸ್ಟರ್ ಫಿನಿಶ್: ದಾವೂದ್ ಬಂಟ ನಸೀಮ್ ದುರ್ರಾನಿ ಎನ್‌ಕೌಂಟರ್! Naseem Durrani

ಲಖನೌ: ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿಬೀಳಿಸಿದ್ದ ಭೀಕರ ಹತ್ಯೆ ಪ್ರಕರಣಕ್ಕೆ ಪೊಲೀಸರು ಖಡಕ್ ಉತ್ತರ ನೀಡಿದ್ದಾರೆ. ದೆಹಲಿ ಕಾನೂನು ಸಚಿವ ಕಪಿಲ್ ಮಿಶ್ರಾ ಅವರ ಕಚೇರಿ ಸಮೀಪವೇ ಯುವಕನೊಬ್ಬನ ಮೇಲೆ 20 ಸುತ್ತು ಗುಂಡು ಹಾರಿಸಿ ಕೊಂದಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ನಸೀಮ್ ದುರ್ರಾನಿ (37) ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ದೆಹಲಿ ಪೊಲೀಸರು ಮತ್ತು ನೋಯ್ಡಾ ವಿಶೇಷ ಕಾರ್ಯಪಡೆ (STF) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಕುಖ್ಯಾತ ರೌಡಿಯ ಅಧ್ಯಾಯ ಅಂತ್ಯವಾಗಿದೆ.

ಸಚಿವರ ಕಚೇರಿ ಬಳಿ ನಡೆದಿದ್ದ ಆ ಭೀಕರ ಹತ್ಯೆ!

ನವೆಂಬರ್ 16 ರಂದು ಈಶಾನ್ಯ ದೆಹಲಿಯ ಖಜುರಿ ಖಾಸ್‌ನಲ್ಲಿರುವ ಸಚಿವ ಕಪಿಲ್ ಮಿಶ್ರಾ ಅವರ ಕಚೇರಿ ಬಳಿ ಭಯಾನಕ ಘಟನೆ ನಡೆದಿತ್ತು. ಮುಸ್ತಫಾಬಾದ್ ನಿವಾಸಿ 26 ವರ್ಷದ ಸಮೀರ್ ಎಂಬ ಯುವಕನ ಮೇಲೆ ನಸೀಮ್ ದುರ್ರಾನಿ ಬರೋಬ್ಬರಿ 20 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಮೀರ್‌ನನ್ನು ಆಸ್ಪತ್ರೆಗೆ ಸಾಗಿಸಿದರೂ ಆತ ಬದುಕುಳಿಯಲಿಲ್ಲ. ರಾಜಧಾನಿಯ ಹೃದಯಭಾಗದಲ್ಲೇ ನಡೆದ ಈ ಶೂಟೌಟ್ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಕೊಲೆಯಾದ ಸಮೀರ್ ಕೂಡ ಅಪರಾಧ ಹಿನ್ನೆಲೆ ಹೊಂದಿದ್ದನು ಎಂದು ತಿಳಿದುಬಂದಿದೆ.

ದಾವೂದ್ ಇಬ್ರಾಹಿಂ ಗ್ಯಾಂಗ್‌ನ ನಂಟು, ಛೋಟಾ ರಾಜನ್ ಹತ್ಯೆಗೆ ಸುಪಾರಿ!

ಎನ್‌ಕೌಂಟರ್‌ನಲ್ಲಿ ಹತನಾದ ನಸೀಮ್ ದುರ್ರಾನಿ ಸಾಮಾನ್ಯ ರೌಡಿಯಾಗಿರಲಿಲ್ಲ. ರಿಜ್ವಾನ್ ಎಂಬ ಕರೆಯಲ್ಪಡುತ್ತಿದ್ದ ಈತ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಕಂಪನಿ ಜೊತೆ ನೇರ ಸಂಪರ್ಕ ಹೊಂದಿದ್ದನು. ದಾವೂದ್ ಬಲಗೈ ಬಂಟ ಛೋಟಾ ಶಕೀಲ್‌ಗೆ ಈತ ಆಪ್ತನಾಗಿದ್ದ ಎಂದೂ ಹೇಳಲಾಗುತ್ತಿದೆ.

2016 ರಲ್ಲಿ ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ನನ್ನು ಮುಗಿಸುವ ಜವಾಬ್ದಾರಿಯನ್ನು ಛೋಟಾ ಶಕೀಲ್ ಇದೇ ದುರ್ರಾನಿಗೆ ವಹಿಸಿದ್ದನು. ಅಷ್ಟೇ ಅಲ್ಲದೇ, ಪಾಕಿಸ್ತಾನಿ-ಕೆನಡಿಯನ್ ಪತ್ರಕರ್ತ ತಾರೆಕ್ ಫತಾಹ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲೂ ಈತ ಜೈಲು ಸೇರಿದ್ದ. ಕೊಲೆ, ದರೋಡೆ ಸೇರಿದಂತೆ 20ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ಈತನ ಮೇಲಿದ್ದವು.

ದೆಹಲಿಯ ರಕ್ತಸಿಕ್ತ ಗ್ಯಾಂಗ್ ವಾರ್ ಕಹಾನಿ!

ತನ್ನ ತಲೆಯ ಮೇಲೆ 50,000 ರೂಪಾಯಿ ಬಹುಮಾನ ಹೊಂದಿದ್ದ ದುರ್ರಾನಿ, ಈಶಾನ್ಯ ದೆಹಲಿಯಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಲು ಹೊರಟಿದ್ದ. ಬೆಟ್ಟಿಂಗ್, ಡ್ರಗ್ಸ್ ಮತ್ತು ಹಫ್ತಾ ವಸೂಲಿ ವಿಚಾರವಾಗಿ ಈತನ ಗ್ಯಾಂಗ್ ಮತ್ತು ರಾಜಾ ಮೇವಾತಿ ಹಾಗೂ ಹಾರೂನ್ ಸೈಫಿ ಗ್ಯಾಂಗ್ ನಡುವೆ ದೊಡ್ಡ ಮಟ್ಟದ ಗ್ಯಾಂಗ್ ವಾರ್ ನಡೆಯುತ್ತಿತ್ತು.

ಈ ಸೇಡಿನ ಜ್ವಾಲೆಯಲ್ಲಿ ಮೇ 26ರಂದು ಹಾರೂನ್ ಸೈಫಿಯ ಸೋದರಮಾವ ಮೇವಾತಿಯನ್ನು ದುರ್ರಾನಿ ಗುಂಡಿಕ್ಕಿ ಕೊಂದಿದ್ದ. ಇದಕ್ಕೆ ಪ್ರತೀಕಾರವಾಗಿ ಜೂನ್ 15ರಂದು ದುರ್ರಾನಿಯ ಆಪ್ತ ರಶೀದ್ ಅಲಿಯಾಸ್ ಪಾನಿ ವಾಲಾ ಹತ್ಯೆಯಾಗಿತ್ತು. ಈ ಗ್ಯಾಂಗ್ ವಾರ್‌ನ ಮುಂದುವರಿದ ಭಾಗವಾಗಿಯೇ ನವೆಂಬರ್ 16 ರಂದು ಸಮೀರ್ ಹತ್ಯೆ ನಡೆದಿತ್ತು ಎನ್ನಲಾಗಿದೆ. ಸದ್ಯ ದೆಹಲಿ ಪೊಲೀಸರು ಮತ್ತು ಯುಪಿ ಎಸ್‌ಟಿಎಫ್ ಜಂಟಿಯಾಗಿ ಬಲೆ ಬೀಸಿ ದುರ್ರಾನಿಯನ್ನು ಎನ್‌ಕೌಂಟರ್ ಮಾಡುವ ಮೂಲಕ ದೆಹಲಿಯ ಭೂಗತ ಲೋಕಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ, (ಏಜೆನ್ಸೀಸ್​).