Google Trends | ಪೇಪರ್ ಲೀಕ್ ಕಾವಿನ ನಡುವೆ ಇಡೀ ದೇಶ ಗೂಗಲ್‌ನಲ್ಲಿ ಹುಡುಕಿದ ಆ ರಹಸ್ಯಗಳೇನು ಗೊತ್ತಾ...? 
ದೇಶ

ಸ್ಟ್ರೀಟ್‌ನಲ್ಲಿ ಹೋರಾಟ, ನೆಟ್‌ನಲ್ಲಿ ಹುಡುಕಾಟ!... ಪೇಪರ್ ಲೀಕ್ ಕಾವಿನ ನಡುವೆ ಇಡೀ ದೇಶ ಗೂಗಲ್‌ನಲ್ಲಿ ಹುಚ್ಚೆದ್ದು ಹುಡುಕಿದ ಆ ರಹಸ್ಯಗಳೇನು ಗೊತ್ತಾ...? | Google Trends

Google Trends: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತ್ತೀಚಿನ ವಿದ್ಯಾರ್ಥಿಗಳ ಆತ್ಮಹತ್ಯೆಗಳ ವಿರುದ್ಧದ ಪ್ರತಿಭಟನೆಯು ಇಂದು ಮತ್ತೊಂದು ಹೊಸ ಹಂತಕ್ಕೆ ತಲುಪಿದ್ದು, ಈ ವಿಷಯವು ದೇಶದ ಸಂಸತ್ತಿನ ಕಲಾಪಕ್ಕೂ ತೀವ್ರ ಅಡಚಣೆ ಉಂಟುಮಾಡಿದ್ದು ಮಾತ್ರವಲ್ಲದೆ, ಪ್ರಧಾನಮಂತ್ರಿಯವರ ನಿವಾಸದ ಹೊರಗೆ ವಿರೋಧ ಪಕ್ಷಗಳ ಬೃಹತ್ ಪ್ರತಿಭಟನೆಗಳಿಗೂ ಕಾರಣವಾಗಿದೆ. ಇತ್ತ ದೆಹಲಿಯ ಜಂತರ್ ಮಂತರ್‌ನಲ್ಲಿಯೂ ಪ್ರತಿಭಟನೆಯ ಕಾವು ಮುಂದುವರಿದಿದ್ದು, ಸಾವಿರಾರು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
ಈ ನಡುವೆ ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ, ಕಾಕ್ರೋಚ್ ಜನತಾ ಪಾರ್ಟಿ ಸಂಘಟನೆಯು ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್​ಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ವಿನಂತಿಸಿಕೊಂಡಿದ್ದು, ಅವರ ಸತ್ಯಾಗ್ರಹ ಮುಕ್ತಾಯಗೊಂಡರೂ ಈ ಹೋರಾಟವು ನಿರಂತರವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

ಪ್ರತಿಭಟನೆಯ ಬಿಸಿ ಮತ್ತು ಗೂಗಲ್ ಟ್ರೆಂಡ್ಸ್‌!...

ಈ ಎಲ್ಲಾ ಬೆಳವಣಿಗೆಗಳು ಇಂಟರ್ನೆಟ್ ಬಳಕೆದಾರರ ಮೇಲೆಯೂ ನೇರ ಪರಿಣಾಮ ಬೀರಿದ್ದು, ಗೂಗಲ್ ಸರ್ಚ್​​ನಲ್ಲೂ ಇದು ಸ್ಪಷ್ಟವಾಗಿ ಪ್ರತಿಫಲಿಸಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ಗೂಗಲ್ ಟ್ರೆಂಡ್ಸ್ ನೀಡಿರುವ ದತ್ತಾಂಶದ ಪ್ರಕಾರ, ಈ ಅವಧಿಯಲ್ಲಿ ಜಂತರ್ ಮಂತರ್ ಎಂಬುದು ಪ್ರತಿಭಟನೆಗೆ ಸಂಬಂಧಿಸಿದಂತೆ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಕೀವರ್ಡ್ ಆಗಿ ಹೊರಹೊಮ್ಮಿದೆ. ಇದರ ನಂತರದ ಸ್ಥಾನಗಳಲ್ಲಿ ಸಿಜೆಪಿ, ಸೋನಮ್ ವಾಂಗ್ಚುಕ್ ಮತ್ತು ಧರ್ಮೇಂದ್ರ ಪ್ರಧಾನ್ ಹೆಸರುಗಳು ಇವೆ.
ಪ್ರದೇಶವಾರು ಹುಡುಕಾಟದ ವಿವರಗಳನ್ನು ಗಮನಿಸುವುದಾದರೆ, ದೆಹಲಿಯು ಜಂತರ್ ಮಂತರ್ ಹುಡುಕಾಟದಲ್ಲಿ 100 ಗೂಗಲ್ ಟ್ರೆಂಡ್ಸ್ ಸ್ಕೋರ್‌ ದಾಖಲಿಸಿದೆ. ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ತಲಾ 55 ಸ್ಕೋರ್‌ನೊಂದಿಗೆ ನಂತರದ ಸ್ಥಾನದಲ್ಲಿದ್ದರೆ, ಬಿಹಾರ ಮತ್ತು ಉತ್ತರಾಖಂಡ ರಾಜ್ಯಗಳು 40 ಸ್ಕೋರ್ ದಾಖಲಿಸಿವೆ. ಸಿಜೆಪಿ ಕುರಿತಾದ ಹುಡುಕಾಟದಲ್ಲಿಯೂ ದೆಹಲಿ 100 ಸ್ಕೋರ್‌ನೊಂದಿಗೆ ಮುಂಚೂಣಿಯಲ್ಲಿದ್ದು, ಹರಿಯಾಣ (59), ಉತ್ತರ ಪ್ರದೇಶ (54), ಉತ್ತರಾಖಂಡ (50) ಮತ್ತು ಮಹಾರಾಷ್ಟ್ರ (49) ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
ಸೋನಮ್ ವಾಂಗ್ಚುಕ್ ಕುರಿತಾದ ಹುಡುಕಾಟದ ಆಸಕ್ತಿಯು ಹೆಚ್ಚಾಗಿ ಈಶಾನ್ಯ ರಾಜ್ಯಗಳಲ್ಲಿ ಕಂಡುಬಂದಿದೆ. ಅರುಣಾಚಲ ಪ್ರದೇಶವು 100 ಸ್ಕೋರ್‌ನೊಂದಿಗೆ ಅತ್ಯಧಿಕ ಹುಡುಕಾಟ ನಡೆಸಿದ್ದರೆ, ಸಿಕ್ಕಿಂ (80), ದೆಹಲಿ (68), ನಾಗಾಲ್ಯಾಂಡ್ (58) ಮತ್ತು ಮಿಜೋರಾಂ (56) ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ. ಇನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ಗೆ ಸಂಬಂಧಿಸಿದ ಹುಡುಕಾಟಗಳಲ್ಲಿ ದೆಹಲಿ 100 ಸ್ಕೋರ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ಅರುಣಾಚಲ ಪ್ರದೇಶ 84 ಸ್ಕೋರ್‌ನೊಂದಿಗೆ ನಂತರದ ಸ್ಥಾನದಲ್ಲಿದ್ದರೆ, ಅವರ ತವರು ರಾಜ್ಯವಾದ ಒಡಿಶಾ 78, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಅನುಕ್ರಮವಾಗಿ 74 ಮತ್ತು 72 ಸ್ಕೋರ್ ದಾಖಲಿಸಿದೆ

ಜನಸಾಮಾನ್ಯರ ಕುತೂಹಲಕ್ಕೆ ಕಾರಣಗಳು!...

ಕೇವಲ ವ್ಯಕ್ತಿಗಳು ಹಾಗೂ ಸ್ಥಳಗಳ ಹೆಸರುಗಳಷ್ಟೇ ಅಲ್ಲದೆ, ಈ ಘಟನೆಗಳ ಹಿಂದಿರುವ ನೈಜ ಹಿನ್ನೆಲೆಯನ್ನು ತಿಳಿಯಲು ಸಹ ಜನರು ಗೂಗಲ್‌ನಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದಾರೆ. ಅತ್ಯಂತ ವೇಗವಾಗಿ ಟ್ರೆಂಡಿಂಗ್ ಆದ ಹುಡುಕಾಟಗಳಲ್ಲಿ Sonam Wangchuk hunger strike 1984 ಎಂಬುದು ಒಂದಾಗಿದ್ದು, ಇದು ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ಅವರ ತಂದೆ ಸೋನಮ್ ವಾಂಗ್‌ಯಾಲ್ ನಡುವಿನ ಗೊಂದಲವನ್ನು ತೋರಿಸುತ್ತದೆ. ಏಕೆಂದರೆ ಸೋನಮ್ ವಾಂಗ್‌ಯಾಲ್ 1984 ರಲ್ಲಿ ಲಡಾಖ್‌ಗೆ ಪರಿಶಿಷ್ಟ ಪಂಗಡ (ST) ಸ್ಥಾನಮಾನಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಮತ್ತೊಂದೆಡೆ, 3 ಇಡಿಯಟ್ಸ್ ಸಿನಿಮಾದ ತಮ್ಮ ರಾಂಚೋ ಪಾತ್ರವು ವಾಂಗ್ಚುಕ್​ರನ್ನು ಆಧರಿಸಿದ್ದಲ್ಲ ಎಂದು ಬಾಲಿವುಡ್ ನಟ ಆಮೀರ್ ಖಾನ್ ಸ್ಪಷ್ಟಪಡಿಸಿ, ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ Aamir Khan on Sonam Wangchuk ಎಂಬ ಹುಡುಕಾಟವೂ ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.
ಇದರ ಜೊತೆಗೆ, ಲೋಕಸಭಾ ಸಂಸದ ಚಂದ್ರಶೇಖರ್ ಆಜಾದ್ ಸಿಜೆಪಿಯ ಸದಸ್ಯರಲ್ಲದಿದ್ದರೂ ಪ್ರತಿಭಟನೆಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ ಕಾರಣಕ್ಕಾಗಿ Who is Chandrashekhar Azad in CJP? ಎಂದು ಜನರು ಹುಡುಕಿದ್ದಾರೆ. ಹಾಗೆಯೇ, ಶಿಕ್ಷಣ ಸಚಿವರ ಮಗಳು ನೈಮಿಷಾ ಪ್ರಧಾನ್ ಮತ್ತು ಆಕೆಯ ವಿದೇಶಿ ಶಿಕ್ಷಣದ ಕುರಿತು ಆನ್‌ಲೈನ್‌ನಲ್ಲಿ ಚರ್ಚೆಗಳು ಆರಂಭವಾದ ನಂತರ Dharmendra Pradhan's daughter's name ಎಂಬ ಪ್ರಶ್ನೆಯು ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಹುಡುಕಲ್ಪಟ್ಟಿದೆ(ಏಜೆನ್ಸೀಸ್​).