ಅಜಂ ಖಾನ್ ಮತ್ತು ಅಖಿಲೇಶ್ ಯಾದವ್
ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್‌ಗೆ(Azam Khan) ಮತ್ತೆ ಸಂಕಷ್ಟ ಶುರುವಾಗಿದ್ದು, ಬುಧವಾರ(ಆ. 19) ಅವರಿಗೆ ಸಂಬಂಧಿಸಿದ ಉತ್ತರ ಪ್ರದೇಶದ ರಾಂಪುರ, ಸಹರಾನ್‌ಪುರ ಹಾಗೂ ದೆಹಲಿಯ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿ ಶೋಧ ನಡೆಸಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಮಾಜಿ ಸಚಿವ ಅಜಮ್ ಖಾನ್ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಸಹಚರರು ಮುಖ್ಯ ಟ್ರಸ್ಟಿಯಾಗಿರುವ ಲಕ್ನೋ ಮೂಲದ ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್, ರಾಂಪುರ ಜಿಲ್ಲೆಯಲ್ಲಿ ಮುಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯ ಮತ್ತು ಸಾರ್ವಜನಿಕ ಶಾಲೆಗಳಲ್ಲಿ ಶೋಧ ನಡೆಯುತ್ತಿದೆ.
ಕೆಲವು ಗುತ್ತಿಗೆದಾರರು ಮತ್ತು ಟ್ರಸ್ಟ್ ನಡುವಿನ ಆರ್ಥಿಕ ವಹಿವಾಟುಗಳ ಬಗ್ಗೆಯೂ ತನಿಖೆಯಿಂದ ತಿಳಿದುಬಂದಿದೆ. ಸರ್ಕಾರಿ ಗುತ್ತಿಗೆಗಳಿಂದ ಲಾಭ ಪಡೆದ ಗುತ್ತಿಗೆದಾರರು, ಗಣನೀಯ ದೇಣಿಗೆಗಳು ಮತ್ತು ನಿರ್ಮಾಣ ಕಾಮಗಾರಿಗಳ ರೂಪದಲ್ಲಿ ಹಣವನ್ನು ಟ್ರಸ್ಟ್ ಹಾಗೂ ವಿಶ್ವವಿದ್ಯಾಲಯದತ್ತ ತಿರುಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ಭಾಗವಾಗಿ ಈ ದಾಳಿ ನಡೆದಿದ್ದು, ಸುಮಾರು 10 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಅಪರಾಧದ ಆದಾಯ, ಹಣಕಾಸಿನ ದಾಖಲೆಗಳು, ಸರ್ಕಾರಿ ನಿಧಿಯ ದುರುಪಯೋಗ ಮತ್ತು ಬಳಕೆಗೆ ಸಂಬಂಧಿಸಿದ ಡಿಜಿಟಲ್ ಪುರಾವೆಗಳನ್ನು ಪತ್ತೆಹಚ್ಚುವ ಸಲುವಾಗಿ ಈ ದಾಳಿ ನಡೆದಿದೆ (ಏಜೆನ್ಸೀಸ್).