ಮಾಜಿ ಸಿಎಂ ಎಂ.ಕೆ.ಸ್ಟಾಲಿನ್, ಪುತ್ರ ಉದಯನಿಧಿ ಹಾಗೂ ಅಳಿಯ ವಿ.ಶಬರೀಸನ್
ಚೆನ್ನೈ: ತಮ್ಮ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಟಿವಿಕೆ ಸರ್ಕಾರದ ಇಬ್ಬರು ಸಚಿವರಿಗೆ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಅವರ ಅಳಿಯ(MK Stalin son-in-law) ಮತ್ತು ಪಿಆರ್ ಏಜೆನ್ಸಿ ಫೆನ್ ಅಧ್ಯಕ್ಷ ವಿ. ಶಬರೀಸನ್ ಅವರು ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದಾರೆ ಎಂದು ಸೋಮವಾರ(ಜೂ. 29) ವರದಿಯಾಗಿದೆ.
ಜೂ. 25ರಂದು ಪ್ರತ್ಯೇಕ ಪತ್ರಿಕಾಗೋಷ್ಠಿಗಳಲ್ಲಿ ನೀಡಿದ ಹೇಳಿಕೆಗಳಿಗ ಸಂಬಂಧಿಸಿದಂತೆ ಟಿವಿಕೆ ಸಚಿವರಾದ ಆಧವ್ ಅರ್ಜುನ ಮತ್ತು ಸಿಟಿಆರ್ ನಿರ್ಮಲ್‌ಕುಮಾರ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. 15 ದಿನಗಳಲ್ಲಿ ತಾವು ನೀಡಿದ ಹೇಳಿಕೆಗಳನ್ನು ಹಿಂಪಡೆಯದಿದ್ದರೇ ಅಥವಾ ಕ್ಷಮೆಯಾಚಿಸದಿದ್ದರೇ ಕ್ರಿಮಿನಲ್ ಮತ್ತು ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನೋಟಿಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿರುದ್ಧ ಆಧಾರರಹಿತ ಮತ್ತು ಮಾನನಷ್ಟಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಶಬರೀಸನ್ ಆರೋಪಿಸಿದ್ದು, ಇಬ್ಬರು ಸಚಿವರು ತಮ್ಮ ವಿರುದ್ಧ ಆಧಾರರಹಿತ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಈ ಸುದ್ದಿಯನ್ನು ಹಲವಾರು ಪ್ರಾದೇಶಿಕ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ನನ್ನ ಘನತೆಗೆ ಧಕ್ಕೆಯಾಗಿದ್ದು, ಈ ಬಗ್ಗೆ ಕ್ಷಮೆಯಾಚನೆ ಮಾಡುವಂತೆ ಒತ್ತಾಯಿಸಿದ್ದಾರೆ.
ಸಚಿವರು ಹೇಳಿದ್ದೇನು?
ಜೂ. 25ರಂದು ಸುದ್ದಿಗೋಷ್ಠಿ ನಡೆಸಿದ್ದ ಆಧವ್ ಅರ್ಜುನ್, ಸ್ಟಾಲಿನ್ ಕುಟುಂಬದ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು. ಹಿಂದಿನ ಸರ್ಕಾರದ 36 ಇಲಾಖೆಗಳ ಎಲ್ಲಾ ಡಿಎಂಕೆ ಸಚಿವರು ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ್ದರು. ಮುಂದುವರೆದು ತಲಾ 16 ಇಲಾಖೆಗಳ ಹಣವನ್ನು ಸ್ಟಾಲಿನ್ ಅವರ ಮಗ ಉದಯನಿಧಿ ಸ್ಟಾಲಿನ್ ಮತ್ತು ಅವರ ಅಳಿಯ ಸಬರಿಸನ್ ಅವರಿಗೆ ನೀಡಲಾಗಿದೆ ಎಂದು ಹೇಳಿದ್ದರು.
ಇನ್ನೂ ಅದೇ ರೀತಿ ಮತ್ತೊಬ್ಬ ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಕೂಡ ಹಿಂದಿನ ಡಿಎಂಕೆ ಸರ್ಕಾರದ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು. ಡಿಎಂಕೆ ಅವಧಿಯಲ್ಲಿ ವಿದ್ಯುತ್ ಇಲಾಖೆಯ ಆದಾಯ ಮತ್ತು ವೆಚ್ಚ ಹಾಗೂ ಸಾಲಗಳು ತೀವ್ರವಾಗಿ ಹೆಚ್ಚಾಗಿದ್ದವು. ವಿದ್ಯುತ್ ಬಿಲ್‌ಗಳ ಹೆಚ್ಚಳದಿಂದ ಯಾರು ಲಾಭ ಪಡೆದರು? ಸ್ಟಾಲಿನ್ ಕುಟುಂಬವೇ? ಅವರ ಸೋದರ ಮಾವನೇ? ಅಥವಾ ಅವರ ಮಗನೇ ಎಂದು ಪ್ರಶ್ನಿಸಿದ್ದರು (ಏಜೆನ್ಸೀಸ್).