Tathagata Roy | ಟಿಎಂಸಿ ನಾಯಕಿಯ ಹಳೇ ಇತಿಹಾಸ ನೆನಪಿಸಿ ಮೋದಿ-ಷಾಗೆ ತಥಾಗತ ರಾಯ್ ಮನವಿ
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದರ ಸಾಲು ಸಾಲು ರಾಜೀನಾಮೆ ಹಾಗೂ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಲಿದ್ದಾರೆ ಎಂಬ ವದಂತಿಗಳ ನಡುವೆಯೇ, ಪಶ್ಚಿಮ ಬಂಗಾಳ ಬಿಜೆಪಿಯ ಹಿರಿಯ ನಾಯಕ ತಥಾಗತ ರಾಯ್ (Tathagata Roy), ಜಾದವ್‌ಪುರ ಲೋಕಸಭಾ ಕ್ಷೇತ್ರದ ಟಿಎಂಸಿ ಸಂಸದೆ ಸಾಯೋನಿ ಘೋಷ್ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಮನವಿ ಮಾಡಿದ್ದಾರೆ.
ಟಿಎಂಸಿ ವಿರುದ್ಧ ಬಂಡಾಯ ಸಾರಿರುವ ಸಂಸದರ ಪಟ್ಟಿಯಲ್ಲಿ ಸಾಯೋನಿ ಘೋಷ್ ಹೆಸರೂ ಇದೆ ಎಂಬ ವರದಿಗಳ ಬೆನ್ನಲ್ಲೇ ತಥಾಗತ ರಾಯ್ ಈ ಆಕ್ಷೇಪ ಎತ್ತಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಪಕ್ಷ ತೊರೆಯುವ ಇತರ ಟಿಎಂಸಿ ನಾಯಕರ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ, ಆದರೆ ಸಾಯೋನಿ ಘೋಷ್ ಈ ಹಿಂದೆ ಶಿವಲಿಂಗಕ್ಕೆ ಅವಮಾನ ಮಾಡಿರುವ ವಿವಾದಾತ್ಮಕ ಹಿನ್ನಲೆ ಹೊಂದಿರುವುದರಿಂದ ಅವರನ್ನು ಸೇರಿಸಿಕೊಳ್ಳಬಾರದು ಎಂದು ರಾಯ್ ತೀವ್ರವಾಗಿ ವಿರೋಧಿಸಿದ್ದಾರೆ.
ತಥಾಗತ ರಾಯ್ ಎಕ್ಸ್ ಪೋಸ್ಟ್
"ಉಳಿದವರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಆದರೆ ಟಿಎಂಸಿ ಸಂಸದೆ ಸಾಯೋನಿ ಘೋಷ್ ಹಿಂದೆ ಶಿವಲಿಂಗಕ್ಕೆ ಕಾಂಡೋಮ್ ಧರಿಸಿರುವ ಮೀಮ್ ಒಂದನ್ನು ಪೋಸ್ಟ್ ಮಾಡಿದ್ದರು. ಅದು ನನ್ನ ಅಂತಃಕರಣವನ್ನು ತೀವ್ರವಾಗಿ ಕಲಕಿತ್ತು. ಈ ಬಗ್ಗೆ ನಾನು ಕೋಲ್ಕತ್ತಾದ ರವೀಂದ್ರ ಸರೋವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ, ಆದರೆ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಇದಾದ ಬಳಿಕ ಟಿಎಂಸಿ ಪರ ಚುನಾವಣಾ ಪ್ರಚಾರದ ವೇಳೆ ಆಕೆ, ನನ್ನ ಕಣ್ಣುಗಳಲ್ಲಿ ಕಾಬಾ ಮತ್ತು ಹೃದಯದಲ್ಲಿ ಮದೀನಾ ಇದೆ ಎಂಬ ಹಾಡನ್ನು ಹಾಡಿದ್ದರು. ಆ ಭಗವಾನ್ ಶಿವನ ಮೇಲಾಣೆ, ದಯವಿಟ್ಟು ಆಕೆಯಿಂದ ಪಕ್ಷವು ಅಂತರ ಕಾಯ್ದುಕೊಳ್ಳಲಿ ಎಂದು ರಾಯ್ ಅವರು ಪಿಎಂ ಮೋದಿ, ಅಮಿತ್ ಷಾ ಮತ್ತು ಬಿಜೆಪಿಯ ಅಧಿಕೃತ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿ ಬರೆದಿದ್ದಾರ
ಪ್ರತ್ಯೇಕ ತಂಡದ ರಚನೆಗೆ 20 ಸಂಸದರ ಮನವಿ!
ತೃಣಮೂಲ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಾರಿ ಆಂತರಿಕ ಸಂಘರ್ಷದ ಭಾಗವಾಗಿ, ಪಕ್ಷದ ಟಿಕೆಟ್‌ನಿಂದ ಆಯ್ಕೆಯಾಗಿದ್ದ 20 ಲೋಕಸಭಾ ಸಂಸದರು ತಮಗೆ ಸಂಸತ್ತಿನಲ್ಲಿ ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಲಿಖಿತ ವಿನಂತಿ ಸಲ್ಲಿಸಿದ್ದಾರೆ. ಹಿರಿಯ ನಾಯಕಿ ಕಾಕೊಳಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಈ ಬಂಡಾಯ ಬಣ ಸೃಷ್ಟಿಯಾಗಿದೆ ಎನ್ನಲಾಗಿದ್ದು, ಈ ಗುಂಪು ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕ್ಕೆ ಬೆಂಬಲ ನೀಡಲು ನಿರ್ಧರಿಸಿದೆ.
ಬಂಡಾಯ ಎದ್ದಿದ್ದಾರೆ ಎನ್ನಲಾದ ಪ್ರಮುಖ 20 ಸಂಸದರ ಪಟ್ಟಿ
1. ಕಾಕೋಲಿ ಘೋಷ್ ದಸ್ತಿದಾರ್ (ಬಾರಾಸತ್)
2. ಸಯಾನಿ ಘೋಷ್ (ಜಾದವ್‌ಪುರ)
3. ಯೂಸುಫ್ ಪಠಾಣ್ (ಬಹರಾಂಪುರ್)
4. ಶತ್ರುಘ್ನ ಸಿನ್ಹಾ (ಅಸನ್ಸೋಲ್)
5. ಜಗದೀಶ್ ಚಂದ್ರ ಬರ್ಮಾ ಬಸುನಿಯಾ (ಕೂಚ್ ಬೆಹಾರ್)
6. ಖಲೀಲರ್ ರೆಹಮಾನ್ (ಜಂಗೀಪುರ)
7. ಅಬು ತಾಹೇರ್ ಖಾನ್ (ಮುರ್ಷಿದಾಬಾದ್)
8. ಪಾರ್ಥ ಭೌಮಿಕ್ (ಬ್ಯಾರಕ್‌ಪುರ)
9. ಬಾಪಿ ಹಾಲ್ದಾರ್ (ಮಥುರಾಪುರ)
10. ಮಾಲಾ ರಾಯ್ (ಕೋಲ್ಕತ್ತಾ ದಕ್ಷಿಣ)
11. ರಚನಾ ಬ್ಯಾನರ್ಜಿ (ಹೂಗ್ಲಿ)
12. ಶತಬ್ದಿ ರಾಯ್ (ಬೀರ್‌ಭೂಮ್)
13. ಅಸಿತ್ ಕುಮಾರ್ ಮಾಲ್ (ಬೋಲ್‌ಪುರ)
14. ಡಾ. ಶರ್ಮಿಳಾ ಸರ್ಕಾರ್ (ಬರ್ದಮಾನ್ ಪೂರ್ವ)
15. ಅರೂಪ್ ಚಕ್ರವರ್ತಿ (ಬಾಕುರಾ)
16. ಜೂನ್ ಮಾಲಿಯಾ (ಮೇದಿನಿಪುರ)
17. ಕಾಲಿಪದ ಸೊರೆನ್ (ಝರ್ಗ್ರಾಮ್)
18. ದೀಪಕ್ ಅಧಿಕಾರಿ [ದೇವ್] (ಘಟಾಲ್)
19. ಮಿಟಾಲಿ ಬ್ಯಾಗ್ (ಆರಾಂಬಾಗ್)
20. ಪ್ರಸೂನ್ ಬ್ಯಾನರ್ಜಿ (ಹೌರಾ)
ಇತ್ತೀಚೆಗೆ ಈ ಬಂಡಾಯ ಸಂಸದರ ಗುಂಪು ಪಶ್ಚಿಮ ಬಂಗಾಳದ ಬಿಜೆಪಿ ಚುನಾವಣಾ ಉಸ್ತುವಾರಿ ಭೂಪೇಂದರ್ ಯಾದವ್ ಮತ್ತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಈ ರಾಜಕೀಯ ಬದಲಾವಣೆಗಳು ವೇಗ ಪಡೆದುಕೊಂಡಿವೆ(ಏಜೆನ್ಸೀಸ್).