Terror Attack ಸಾಂದರ್ಭಿಕ ಚಿತ್ರ 
ದೇಶ

ಪಾಕಿಸ್ತಾನದಲ್ಲಿ ಶಾಂತಿ ರ‍್ಯಾಲಿ ವೇಳೆ ಭೀಕರ ಆತ್ಮಹುತಿ ಬಾಂಬ್ ದಾಳಿ: ಐವರು ಪೊಲೀಸರು ಸೇರಿ 14 ಮಂದಿ ಸಾ*ವು! Terror Attack

ಪೇಶಾವರ: ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಾನುವಾರ ನಡೆದ ಶಾಂತಿ ರ‍್ಯಾಲಿಯನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ಭೀಕರ ಆತ್ಮಹುತಿ ಬಾಂಬ್ ದಾಳಿಯಲ್ಲಿ (Terror Attack) ಐವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 14 ಜನರು ಮೃತಪಟ್ಟಿದ್ದು, ಘಟನೆಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಏನು?

ಸ್ವಾತ್ ಜಿಲ್ಲೆಯ ಕಬಾಲ್ ಪಟ್ಟಣದಲ್ಲಿ 'ಸ್ವಾತ್ ಶಾಂತಿ ರ‍್ಯಾಲಿ' ನಡೆಯುತ್ತಿದ್ದಾಗ, ಪೊಲೀಸ್ ಠಾಣೆಯ ಸಮೀಪವೇ ಬಂದ ಆತ್ಮಹುತಿ ದಾಳಿಕೋರನೊಬ್ಬ ತನ್ನಲ್ಲಿದ್ದ ಸ್ಪೋಟಕಗಳನ್ನು ಧರಿಸಿದ್ದ ವೆಸ್ಟ್​ ಅನ್ನು ಸ್ಪೋಟಿಸಿಕೊಂಡಿದ್ದಾನೆ. ಕಬಾಲ್​ ಚೌಕ್​ನಲ್ಲಿರುವ ಪೊಲೀಸ್​ ಠಾಣೆಯನ್ನು ಪ್ರವೇಶಿಸಲು ಯತ್ನಿಸಿದಾಗ ದಾಳಿಕೋರರನ್ನು ಪ್ರಮುಖ ದ್ವಾರದಲ್ಲೇ ಪೊಲೀಸರು ತಡೆದಾಗ ಈ ಸ್ಫೋಟ ಸಂಭವಿಸಿದೆ ಎಂದು ಸ್ವಾತ್ ಡಿಐಜಿ ಫಿದಾ ಹುಸೇನ್ ತಿಳಿಸಿದ್ದಾರೆ.
ಸ್ಫೋಟ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಜನರಲ್ಲಿ ತೀವ್ರ ಭೀತಿ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಪ್ರಸ್ತುತ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಚುರುಕುಗೊಳಿಸಲಾಗಿದೆ.

ಶಾಂತಿ ರ‍್ಯಾಲಿಯ ಮೇಲೆಯೇ ದಾಳಿ

ನಿರಂತರ ಉಗ್ರರ ದಾಳಿ ಮತ್ತು ಸರಣಿ ಸ್ಫೋಟಗಳಿಂದ ತತ್ತರಿಸಿರುವ ಈ ಪ್ರದೇಶದಲ್ಲಿ ಶಾಂತಿ ನೆಲೆಸಬೇಕೆಂದು ಆಗ್ರಹಿಸಿ ಸ್ಥಳೀಯ ಬುಡಕಟ್ಟು ಮಂಡಳಿಯಾದ 'ಸ್ವಾತ್ ಅಮಾನ್ ಜಿರ್ಗಾ' ಈ ರ‍್ಯಾಲಿಯನ್ನು ಆಯೋಜಿಸಿತ್ತು. ರ‍್ಯಾಲಿಯಲ್ಲಿ ಭಾಗವಹಿಸಿದ್ದ ಜನರು ಶಾಂತಿ ಮಂತ್ರ ಪಠಿಸುತ್ತಿದ್ದ ವೇಳೆಯಲ್ಲೇ ಈ ದುರಂತ ಸಂಭವಿಸಿದೆ.

ಟಿಟಿಪಿ ಉಗ್ರರ ಕೈವಾಡದ ಶಂಕೆ

ಈ ರಕ್ತಸಿಕ್ತ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರ ಸಂಘಟನೆ ವಹಿಸಿಕೊಂಡಿಲ್ಲವಾದರೂ, ಪ್ರಾಂತ್ಯದಲ್ಲಿ ನಿರಂತರವಾಗಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಉಗ್ರರೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಉಗ್ರರ ಉಪಟಳದಿಂದಾಗಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲೇ ಇದುವರೆಗೆ 800ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಈ ದಾಳಿಗಳ ಬೆನ್ನಲ್ಲೇ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಬಿಗಿಯಾಗಿದೆ. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಟಿಟಿಪಿ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದ್ದರೆ, ತಾಲಿಬಾನ್ ಇದನ್ನು ನಿರಾಕರಿಸಿದೆ.
ಇದರ ಮಧ್ಯೆಯೇ ಪಾಕಿಸ್ತಾನವು ಅಫ್ಘಾನಿಸ್ತಾನದ ಗಡಿಯಲ್ಲಿದ್ದ ಉಗ್ರರ ಅಡಗುದಾಣಗಳ ಮೇಲೆ ಸರಣಿ ವೈಮಾನಿಕ ದಾಳಿ ನಡೆಸಿದ್ದು, ಅಫ್ಘಾನಿಸ್ತಾನವೂ ಪ್ರತಿಯಾಗಿ ಪಾಕ್ ಮೇಲೆ ದಾಳಿ ನಡೆಸಿದೆ. ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಪ್ರತಿಕ್ರಿಯಿಸಿ, "ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಗಡಿ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ, ಈ ಉದ್ವಿಗ್ನತೆ ಯಾರಿಗೂ ಒಳಿತಲ್ಲ" ಎಂದು ಹೇಳಿದ್ದಾರೆ (ಏಜೆನ್ಸೀಸ್​).