ಲಖನೌ: ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ, ನನ್ನ ಮೊದಲ ಪತ್ನಿ ಬಿಟ್ಟು ಹೋಗಿದ್ದಾಳೆ, ನನಗೆ ಎರಡನೇ ಪತ್ನಿ ಬೇಕು ಎಂದು ಗ್ರಾಮದ ನೀರಿನ ಟ್ಯಾಂಕ್ ಮೇಲೆ ಹತ್ತಿ ಎರಡನೇ ಮದುವೆ ಮಾಡಿಸದಿದ್ದರೇ ಇಲ್ಲಿಂದ ಬಿದ್ದು ಸಾಯುವುದಾಗಿ ಬೆದರಿಕೆ ಹಾಕಿ ಹೈಡ್ರಾಮ ಸೃಷ್ಟಿಸಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜನವರಿ 01ರಂದು ಈ ಘಟನೆ ನಡೆದಿದೆ. ಬದೌನ್ ಜಿಲ್ಲೆಯ ಇಸ್ಲಾಂನಗರದ ಹರ ಪ್ರಸಾದ್ ಮೌರ್ಯ ಎಂಬಾತನೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ 30 ಅಡಿ ಎತ್ತರದ ನೀರಿನ ಟ್ಯಾಂಕ್ ಮೇಲೆ ಹತ್ತಿ ಎರಡನೇ ಮದುವೆ ಬೇಕು ಎಂದು ಪ್ರತಿಭಟಿಸಿದ ವ್ಯಕ್ತಿ. ವ್ಯಕ್ತಿಯ ಪ್ರತಿಭಟನೆ ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿ ಅವರು ಸುಮಾರು 30 ನಿಮಿಷಗಳ ಕಾಲ ಮನವೊಲಿಸಿ ವ್ಯಕ್ತಿಯನ್ನು ಸಮಾಧಾನಪಡಿಸಿ ಕೆಳೆಗೆ ಇಳಿಸಿದ್ದಾರೆ.
ಈ ವೇಳೆ ಪೊಲೀಸರೊಂದಿಗೆ ಮಾತನಾಡಿರುವ ಹರ ಪ್ರಸಾದ್ ಮೌರ್ಯ, ಸರ್ ನಾನು ಹತ್ತು ದಿನಗಳಿಂದ ಇದೇ ಕೊಳಕು ಬಟ್ಟೆಗಳನ್ನು ಧರಿಸಿದ್ದೇನೆ. ಅವುಗಳನ್ನು ತೊಳೆಯಲು ಯಾರು ಇಲ್ಲ. ಎಲ್ಲರಿಗೂ ಹೆಂಡತಿಯರಿದ್ದಾರೆ. ನನಗೂ ಹೆಂಡತಿ ಬೇಕು. ನನ್ನ ಮೊದಲ ಹೆಂಡತಿ ನನ್ನನ್ನು ಬಿಟ್ಟು ಹೋದಳು. ನೀವು ನನಗೆ ಎರಡನೇ ಹೆಂಡತಿಯನ್ನು ನೀಡದಿದ್ದರೆ, ನಾನು ಸಾಯುತ್ತೇನೆ ಎಂದು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.
ಇನ್ನೂ ವ್ಯಕ್ತಿಯ ಪೋಷಕರು ತಮ್ಮ ಮಗ ಅಸ್ವಸ್ಥ ಎಂದು ತಿಳಿಸಿದ್ದಾರೆ. ಪೊಲೀಸರು ಹರ ಪ್ರಸಾದ್‌ಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದು, ಬಳಿಕ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಇದು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಅವರಿಗೆ ಸೂಚಿಸಲಾಯಿತು ಎನ್ನಲಾಗಿದೆ. ಘಟನೆಯ ವಿಡಿಯೋ ಹಾಸ್ಯಮಯವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ (ಏಜೆನ್ಸೀಸ್).