ಜೈಪುರ: ರಾಜಸ್ಥಾನದ ಕೋಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ನೀಮ್ರಾನಾ ಪ್ರದೇಶದ ಸ್ಕ್ರ್ಯಾಪ್ ಗೋದಾಮುನಲ್ಲಿ ಶುಕ್ರವಾರ(ಏ. 24) ರಾತ್ರಿ ಸಂಭವಿಸಿದ ಅಗ್ನಿ(Fire) ಅವಘಡದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿ ನಾಲ್ವರು ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ.
ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸಲು ಬಂದಿದ್ದ ಚಾಲಕನೊಬ್ಬ ಬೀಡಿ ಸೇವನೆಯಿಂದ ಗೋದಾಮಿಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಮೃತರನ್ನು ಕವಿತಾ (15), ಅವರ ಏಳು ವರ್ಷದ ಸಂಬಂಧಿ ಬಾಲಕಿ, ರವಿಂದತ್ ಯಾದವ್ ಎಂಬ ಚಾಲಕ ಹಾಗೂ ಗೋಡೌನ್‌ನಲ್ಲಿ ಪ್ಲಾಸ್ಟಿಕ್ ಸಂಸ್ಕರಣಾ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದ ಜಾನಿ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಗೋದಾಮಿನಲ್ಲಿ ಚಿಕ್ಕ ಹುಡುಗಿ ಸುಗಂಧ ದ್ರವ್ಯದ ಬಾಟಲಿಗಳನ್ನು ವಿಂಗಡಿಸಿ ಅವುಗಳ ಮುಚ್ಚಳಗಳನ್ನು ತೆಗೆಯುತ್ತಿದ್ದಳು. ಫರ್ಪ್ಯೂಮ್ ಬಾಟಲಿಗಳ ಸ್ಪಿರಿಟ್ಗೆ ಚಾಲಕ ಸೇದಿ ಎಸೆದ ಬೀಡಿಯ ಹೊಗೆಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಸತ್ವೀರ್ ಸಿಂಗ್, ತಡರಾತ್ರಿ ಸ್ಕ್ರ್ಯಾಪ್ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲಿ ತಡರಾತ್ರಿ ನಾಲ್ಕು ಸುಟ್ಟ ಶವಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿಲಾಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಗೋಡೌನ್ ಮಾಲೀಕರ ಸಹಚರನನ್ನು ಬಂಧಿಸಿದ್ದು, ಮಾಲೀಕ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).