ತಮಿಳುನಾಡಿನ ಖ್ಯಾತ ಯೂಟ್ಯೂಬರ್​ ಮಧುಮಿತಾ  
ದೇಶ

ಡಬಲ್​ ಮೀನಿಂಗ್​ ಮಾತುಗಳನ್ನಾಡುತ್ತಾ ವೃದ್ಧನಿಂದ 5 ಪವನ್​ ಚಿನ್ನದ ಸರ ಎಗರಿಸಿದ ಖ್ಯಾತ ಯೂಟ್ಯೂಬರ್​ಗೆ ಬಿಗ್​ ಶಾಕ್​! YouTuber Madhumitha

ತಿರುನಲ್ವೇಲಿಯ ಬಿಲ್ಡಿಂಗ್ ಗುತ್ತಿಗೆದಾರರಾಗಿರುವ 89 ವರ್ಷದ ಪೀಚಿ ಮುತ್ತು ಎಂಬುವವರು ದೂರು ದಾಖಲಿಸಿದ್ದಾರೆ. ರಾಜಕ್ಕಮಂಗಲಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಯೂಟ್ಯೂಬರ್ ಮಧುಮಿತಾ ತನಗೆ ಹೇಗೆ ಪರಿಚಿತರಾದರು ಮತ್ತು ತದನಂತರ ನಡೆದ ಘಟನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಚೆನ್ನೈ: ಬಣ್ಣ ಬಣ್ಣದ ಮಾತುಗಳನ್ನಾಡಿ ವೃದ್ಧನೊಬ್ಬನ ಬಳಿ 5 ಪವನ್​ ಚಿನ್ನದ ಸರವನ್ನು ಎಗರಿಸಿದ್ದ ತಮಿಳುನಾಡಿನ ಖ್ಯಾತ ಯೂಟ್ಯೂಬರ್​ ಮಧುಮಿತಾ ( YouTuber Madhumitha ) ವಿರುದ್ಧ ಕೊನೆಗೂ ಎಫ್​ಐಆರ್​ ದಾಖಲಾಗಿದೆ.

89 ವರ್ಷ ವಯಸ್ಸಿನ ಹಿರಿಯ ವ್ಯಕ್ತಿಯೊಬ್ಬರು ನೀಡಿದ ಗಂಭೀರ ದೂರಿನ ಆಧಾರದ ಮೇಲೆ ಕನ್ಯಾಕುಮಾರಿ ಪೊಲೀಸರು ಮಧುಮಿತಾ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಮೈಯಲ್ಲಿದ್ದ 5 ಪವನ್ ಚಿನ್ನದ ಸರವನ್ನು ಕಳವು ಮಾಡಿದ್ದಲ್ಲದೆ, ಪ್ರಶ್ನೆ ಮಾಡಿದ್ದಕ್ಕೆ ಜೀವ ಬೆದರಿಕೆ ಹಾಕಿದರು ಎಂಬ ಗಂಭೀರ ಆರೋಪವನ್ನು ಹಿರಿಯ ವ್ಯಕ್ತಿ ಮಾಡಿದ್ದಾರೆ.

ತಿರುನಲ್ವೇಲಿಯ ಬಿಲ್ಡಿಂಗ್ ಗುತ್ತಿಗೆದಾರರಾಗಿರುವ 89 ವರ್ಷದ ಪೀಚಿ ಮುತ್ತು ಎಂಬುವವರು ದೂರು ದಾಖಲಿಸಿದ್ದಾರೆ. ರಾಜಕ್ಕಮಂಗಲಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಯೂಟ್ಯೂಬರ್ ಮಧುಮಿತಾ ತನಗೆ ಹೇಗೆ ಪರಿಚಿತರಾದರು ಮತ್ತು ತದನಂತರ ನಡೆದ ಘಟನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ತಾನು ನಿರಂತರವಾಗಿ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದೆ ಎಂದು ದೂರುದಾರರು ತಿಳಿಸಿದ್ದಾರೆ.

ಚಿಕಿತ್ಸೆಗೆ ತೆರಳುತ್ತಿದ್ದ ಸಂದರ್ಭದಲ್ಲಿಯೇ ಕನ್ಯಾಕುಮಾರಿಯ ತಂಬಾತುಕೋಣಂ ನಿವಾಸಿ ಮಧುಮಿತಾ ಅವರ ಪರಿಚಯ ಆಯಿತು. ಆರಂಭದಲ್ಲಿ ಪರಿಚಯವಾದ ಆಕೆ, ನಂತರದ ದಿನಗಳಲ್ಲಿ ತನಗೆ ಆಗಾಗ್ಗೆ ಫೋನ್ ಕರೆಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ತನ್ನೊಂದಿಗೆ ಅಸಭ್ಯ ಹಾಗೂ ಡಬಲ್​ ಮೀನಿಂಗ್​ ಮಾತುಗಳನ್ನಾಡುತ್ತ, ಲೈಂಗಿಕ ಪ್ರಚೋದನೆ ಮಾಡಲು ಮುಂದಾಗಿದ್ದರಿಂದ ತಾನು ಆಕೆಯ ಕರೆಗಳನ್ನು ಸಂಪೂರ್ಣವಾಗಿ ತಪ್ಪಿಸಲು ಯತ್ನಿಸಿದ್ದೆ ಎಂದು ಮುತ್ತು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಷಯ ಇಲ್ಲಿಗೆ ನಿಲ್ಲದೆ, 2022ರಲ್ಲಿ ತುರ್ತಾಗಿ ಒಮ್ಮೆ ಭೇಟಿಯಾಗಬೇಕೆಂದು ಮಧುಮಿತಾ, ಪೀಚಿ ಮುತ್ತು ಅವರಿಗೆ ಒತ್ತಾಯಿಸಿದ್ದಾಳೆ. ತಿರುನಲ್ವೇಲಿ ಕೋರ್ಟ್ ಕಾಂಪ್ಲೆಕ್ಸ್ ಬಳಿಯ ಬಸ್ ನಿಲ್ದಾಣಕ್ಕೆ ಬರುವಂತೆ ಆಕೆ ತಿಳಿಸಿದ ಮೇರೆಗೆ, ಮುತ್ತು ಅವರು ತಮ್ಮ ಕಾರಿನಲ್ಲಿ ಅಲ್ಲಿಗೆ ತೆರಳಿದ್ದಾರೆ. ಕಾರು ಹತ್ತಿದ ಮಧುಮಿತಾ ತಾನೇ ಫಿಸಿಯೋಥೆರಪಿ ಮಾಡಿಸುವುದಾಗಿ ನಾಟಕವಾಡಿದ್ದಾಳೆ. ಈ ವೇಳೆ ಮುತ್ತು ಅವರು ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಬಳಿಕ ಆಕೆಯನ್ನು ತಿರುನಲ್ವೇಲಿ ಬಸ್ ನಿಲ್ದಾಣದಲ್ಲಿ ಇಳಿಸಿ ತಾನು ವಾಪಸ್ ಮನೆಗೆ ಮರಳಿದ್ದಾರೆ.

ಆದರೆ, ಮನೆಗೆ ಹೋದ ನಂತರ ತಮ್ಮ ಕುತ್ತಿಗೆಯಲ್ಲಿದ್ದ ಬರೋಬ್ಬರಿ 5 ಪವನ್ ತೂಕದ ಚಿನ್ನದ ಸರ ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ಈ ಕುರಿತು ಮಧುಮಿತಾ ಅವರನ್ನು ನೇರವಾಗಿ ಪ್ರಶ್ನಿಸಿದಾಗ, ಆಕೆ ತನಗೆ ತೀವ್ರವಾದ ಬೆದರಿಕೆಗಳನ್ನು ಹಾಕಿದ್ದಾಳೆ. ಸಮಾಜದಲ್ಲಿ ತನ್ನ ಮಾನ-ಮರ್ಯಾದೆಗೆ ಕುಂದು ಬರುತ್ತದೆ ಹಾಗೂ ಹಿರಿಯ ವಯಸ್ಸಿನ ಕಾರಣದಿಂದ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಭಯದಿಂದ ಆ ಸಮಯದಲ್ಲಿ ತಾನು ಯಾವುದೇ ದೂರು ದಾಖಲಿಸಿರಲಿಲ್ಲ ಎಂದು ಮುತ್ತು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಘಟನೆಯು ತಿರುನಲ್ವೇಲಿ ಜಿಲ್ಲೆ ವ್ಯಾಪ್ತಿಯಲ್ಲಿ ನಡೆದಿದ್ದರಿಂದ, ರಾಜಕ್ಕಮಂಗಲಂ ಪೊಲೀಸರು ಪ್ರಾಥಮಿಕವಾಗಿ ಎಫ್‌ಐಆರ್ ದಾಖಲಿಸಿಕೊಂಡು, ಮುಂದಿನ ತನಿಖೆಗಾಗಿ ಈ ಪ್ರಕರಣವನ್ನು ನೇರವಾಗಿ ತಿರುನಲ್ವೇಲಿ ತಾಲೂಕು ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ವಿಶೇಷವೆಂದರೆ, ಕೆಲವೇ ದಿನಗಳ ಹಿಂದೆ ಮಧುಮಿತಾ ಅವರ ಕನ್ಯಾಕುಮಾರಿ ನಿವಾಸದಲ್ಲೇ ಬರೋಬ್ಬರಿ 118 ಪವನ್ ಚಿನ್ನಾಭರಣಗಳು ಕಳುವಾಗಿದ್ದವು. ಆಕೆಯ ಯೂಟ್ಯೂಬ್ ವಿಡಿಯೋಗಳಲ್ಲಿ ಹಣ ಹಾಗೂ ಚಿನ್ನಾಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ನೋಡಿಯೇ ಕಳ್ಳರು ಈ ಕೃತ್ಯವೆ ಎಸಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇಷ್ಟು ದೊಡ್ಡ ಕಳವು ಪ್ರಕರಣ ನಡೆದರೂ ಸಹ, ಮಧುಮಿತಾ ಮಾತ್ರ ಇನ್ನೂ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಣ ಹಾಗೂ ಚಿನ್ನಾಭರಣಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ವಿಡಿಯೋಗಳನ್ನು ನಿರಂತರವಾಗಿ ಅಪ್‌ಲೋಡ್ ಮಾಡುತ್ತಲೇ ಇರುವುದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ, (ಏಜೆನ್ಸೀಸ್​).