Mamata Banerjee | ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಚೋದನಾಕಾರಿ ಭಾಷಣದ ಆರೋಪದ ಮೇಲೆ ಶುಕ್ರವಾರ ಕೋಲ್ಕತ್ತಾದಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಕಳೆದ ಮಾರ್ಚ್‌ನಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ್ದ ದೀದಿ, ಒಂದು ನಿರ್ದಿಷ್ಟ ಸಮುದಾಯವು ಒಟ್ಟಾಗಿ ಬಂದರೆ, ಅದು ಇತರರ ಮೇಲೆ ಭೀಕರ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದರು.
ಮಮತಾ ಬ್ಯಾನರ್ಜಿ ಅವರ ವಿವಾದಾತ್ಮಕ ಭಾಷಣದ ವಿರುದ್ಧ ಕೋಲ್ಕತ್ತಾದ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ, ಹರೇ ಸ್ಟ್ರೀಟ್ ಪೊಲೀಸರು ಈಗ ಎಫ್‌ಐಆರ್ ದಾಖಲಿಸಿದ್ದಾರೆ.
ಕೋಮು ಸೌಹಾರ್ದತೆಗೆ ಧಕ್ಕೆ ತರುವ ಭಾಷಣ
ಮಮತಾ ಬ್ಯಾನರ್ಜಿ ಅವರ ಭಾಷಣವು ಕೋಮು ಸೌಹಾರ್ದತೆಗೆ ಧಕ್ಕೆ ತರಬಹುದು ಮತ್ತು ಸಾರ್ವಜನಿಕ ಅಶಾಂತಿಗೆ ಕಾರಣವಾಗಬಹುದು ಎಂದು ದೂರುದಾರರು ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ. ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ದೀದಿ ನೀಡಿದ್ದ ವಿವಾದಾತ್ಮಕ ಮತ್ತು ಕೋಮು ಪ್ರಚೋದಿತ ಹೇಳಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಮೇ 20 ರಂದು ದಕ್ಷಿಣ ಕೋಲ್ಕತ್ತಾದ ನೇತಾಜಿ ನಗರ ಪೊಲೀಸ್ ಠಾಣೆಗೆ ಸಲ್ಲಿಕೆಯಾಗಿದ್ದ ದೂರನ್ನು ಆಧರಿಸಿ ಸ್ಥಳೀಯ ನಿವಾಸಿ ತುಷಾರ್ ಕಾಂತಿ ದಾಸ್ ಎಂಬುವವರು, ಮಮತಾ ಬ್ಯಾನರ್ಜಿ ಈ ಹೇಳಿಕೆಯು ಪಶ್ಚಿಮ ಬಂಗಾಳದ ವಿವಿಧ ಸಮುದಾಯಗಳ ನಡುವೆ ಭಯ, ತಪ್ಪು ತಿಳುವಳಿಕೆ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ದೂರಿದ್ದಾರೆ.
ಕಳೆದ ಮೇ ತಿಂಗಳಲ್ಲೂ ದಾಖಲಾಗಿತ್ತು ಎಫ್‌ಐಆರ್
ಇದೇ ವರ್ಷದ ಮೇ ತಿಂಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ವಕೀಲರೊಬ್ಬರ ದೂರಿನ ಮೇರೆಗೆ ಮಮತಾ ಬ್ಯಾನರ್ಜಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು. ವಕೀಲೆ ರಿಂಕಿ ಚಟ್ಟೋಪಾಧ್ಯಾಯ ಸಿಂಗ್, ಮೇ 20 ರಂದು ಸಿಲಿಗುರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಿಸಿದ್ದರು. ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು, ಆದರೆ ನಿರಂತರ ಒತ್ತಡದ ನಂತರ ಎಫ್‌ಐಆರ್ ದಾಖಲಿಸಿದ್ದರು.
ದೂರುದಾರರ ಪ್ರಕಾರ, ಮಮತಾ ಬ್ಯಾನರ್ಜಿ ಅವರು ಕಳೆದ ವರ್ಷ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮತ್ತು ವಿಧಾನಸಭೆ ಚುನಾವಣೆಗೆ ಮುನ್ನ ಧರ್ಮತಾಲಾ ಪ್ರತಿಭಟನೆಯಲ್ಲಿ ಮಾಡಿದ ಎರಡು ಪ್ರತ್ಯೇಕ ಭಾಷಣಗಳು ಭಾರತ ಮತ್ತು ಪ್ರಪಂಚದಾದ್ಯಂತ ಇರುವ ಕೋಟಿಗಟ್ಟಲೆ ಸನಾತನ ಹಿಂದೂಗಳ ಭಾವನೆಗಳು ಮತ್ತು ನಂಬಿಕೆಗಳಿಗೆ ತೀವ್ರ ಧಕ್ಕೆ ತಂದಿವೆ ಎನ್ನಲಾಗಿದೆ. ಅಲ್ಲದೆ, ಇತ್ತೀಚಿನ ಚುನಾವಣಾ ಪ್ರಚಾರದ ಸಮಯದಲ್ಲಿ ಬ್ಯಾನರ್ಜಿ ಅವರು, ಒಂದು ವೇಳೆ ನಿರ್ದಿಷ್ಟ ಸಮುದಾಯವು ಹಿಂದೂಗಳ ಮೇಲೆ ದಾಳಿ ಮಾಡಿದರೆ ಅವರ 12 ಗಂಟೆ ಬಾರಿಸುತ್ತವೆ (ಅಂದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬಂಗಾಳಿ ಭಾಷೆಯ ಆಡುಮಾತು) ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಲಾಗಿತ್ತು.
ಇಂತಹ ಹೇಳಿಕೆಗಳು ಭಯ ಮತ್ತು ಬೆದರಿಕೆಯ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಹಾಗೂ ಸಾಮಾಜಿಕ ಅಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕೆಡಿಸಲು ಉದ್ದೇಶಪೂರ್ವಕವಾಗಿ ಮಾಡಲ್ಪಟ್ಟಿವೆ ಎಂದು ವಕೀಲೆ ಸಿಂಗ್ ವಾದಿಸಿದ್ದರು. ಸದ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಕ್ರಿಮಿನಲ್ ಬೆದರಿಕೆ (ಸೆಕ್ಷನ್ 351(1)) ಮತ್ತು ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನದ (ಸೆಕ್ಷನ್ 352) ಅಡಿಯಲ್ಲಿ ಪ್ರಥಮ ಮಾಹಿತಿ ವರದಿಯನ್ನು (FIR) ದಾಖಲಿಸಿಕೊಂಡಿದ್ದಾರೆ(ಏಜೆನ್ಸೀಸ್).