ಪ್ರೇಮಿಗಳ ದಿನ ವಿರೋಧಿಸಿ ಲಾಠಿ ಪೂಜೆ ಮಾಡುತ್ತಿರುವ ಕ್ರಾಂತಿ ಸೇನೆ ಮಹಿಳೆಯರು
- ಕ್ರಾಂತಿ ಸೇನೆಯಿಂದ ಪ್ರೇಮಿಗಳ ದಿನಕ್ಕೆ ವಿರೋಧ
- ಪ್ರೇಮಿಗಳು ಕಂಡರೆ ಅವರ ಮೂಳೆ ಮುರಿಯುವ ಬೆದರಿಕೆ ಹಾಕಿರುವ ಕ್ರಾಂತಿ ಸೇನೆ ಮಹಿಳೆಯರು
- ಇವರಿಗೆ ಪ್ರೀತಿ ಎಂದರೆ ಏನೆಂದೇ ಗೊತ್ತಿಲ್ಲ ಎಂದ ನೆಟ್ಟಿಗರು
ಮುಜಾಫರ್‌ನಗರ: ಒಂದೆಡೆ ಪ್ರೇಮಿಗಳು ಗುಲಾಬಿ, ಚಾಕೊಲೇಟ್ ಮತ್ತು ಉಡುಗೊರೆಗಳೊಂದಿಗೆ ಪ್ರೇಮಿಗಳ ದಿನವನ್ನು (Valentine's Day) ಆಚರಿಸಲು ಸಿದ್ಧರಾಗುತ್ತಿದ್ದರೆ, ಇನ್ನೊಂದೆಡೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ, ಪ್ರೇಮಿಗಳಿಗೆ ದಿಗಿಲು ಹುಟ್ಟಿಸುವ ದೃಶ್ಯವೊಂದು ಕಂಡುಬಂದಿದೆ. ಇಲ್ಲಿನ ಕ್ರಾಂತಿ ಸೇನಾ ಸಂಘಟನೆಯ ಸದಸ್ಯರು ಪ್ರೇಮಿಗಳ ವಿರುದ್ಧ ಅಸ್ತ್ರವಾಗಿ ಬಳಸಲು ಲಾಠಿ ಪೂಜೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಲಾಠಿಗೆ ತಿಲಕ, ಪ್ರೇಮಿಗಳಿಗೆ ಎಚ್ಚರಿಕೆ!
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸಂಘಟನೆಯ ಮಹಿಳಾ ವಿಭಾಗದ ಅಧ್ಯಕ್ಷೆ ಪೂನಂ ಚೌಧರಿ ನೇತೃತ್ವದಲ್ಲಿ ಸದಸ್ಯರು ಲಾಠಿಗಳಿಗೆ ಪ್ರಾರ್ಥನೆ ಸಲ್ಲಿಸಿ, ಅವುಗಳಿಗೆ ತಿಲಕ ಇಟ್ಟು, ಜಹಾ ಮಿಲೇಂಗೆ ಬಂಟಿ-ಬಬ್ಲಿ, ತೋಡ್ ದೇಂಗೆ ಹಡ್ಡಿ ಪಸ್ಲಿ (ಎಲ್ಲಿ ಪ್ರೇಮಿಗಳು ಸಿಗುತ್ತಾರೋ, ಅಲ್ಲಿ ಅವರ ಮೂಳೆ ಮುರಿಯುತ್ತೇವೆ) ಎಂದು ಫೋಷಣೆ ಕೂಗುತ್ತಿರುವುದನ್ನು ಕೇಳಬಹುದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ, ಪಾರ್ಕ್‌ಗಳಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಜೋಡಿಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈ ಗುಂಪು ಎಚ್ಚರಿಸಿದೆ. ಅಷ್ಟೇ ಅಲ್ಲ, ನಿಯಮ ಮೀರಿದರೆ ತಲೆ ಕೂದಲನ್ನು ಬೋಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಹೋಟೆಲ್ ಮಾಲೀಕರಿಗೆ ನೋಟಿಸ್!
ಕ್ರಾಂತಿ ಸೇನೆಯು ಈಗಾಗಲೇ ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಲಿಖಿತ ನೋಟಿಸ್‌ಗಳನ್ನು ವಿತರಿಸಿದೆ. ಪ್ರೇಮಿಗಳ ದಿನಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇಂತಹ ಆಚರಣೆಗಳು ಸಮಾಜದಲ್ಲಿ ಅಶ್ಲೀಲತೆ ಹರಡುತ್ತವೆ ಎಂಬುದು ಈ ಸಂಘಟನೆಯವಾದವಾಗಿದೆ. ಈ ದಿನವನ್ನು ಪ್ರೇಮಿಗಳ ದಿನವಾಗಿ ಆಚರಿಸುವ ಬದಲು, ಪುಲ್ವಾಮಾ ಹುತಾತ್ಮರ ಸ್ಮರಣಾರ್ಥ ಕಪ್ಪು ದಿನವಾಗಿ ಆಚರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇವರಿಗೆ ಪ್ರೀತಿಯೇ ಗೊತ್ತಿಲ್ಲ: ನೆಟ್ಟಿಗರ ತರಾಟೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್‌ನಲ್ಲಿ ಟೀಕೆಗಳ ಸುರಿಮಳೆಯೇ ಹರಿದುಬಂದಿದೆ. ಒಬ್ಬ ಬಳಕೆದಾರರು ದೇಶದಲ್ಲಿ ಭ್ರಷ್ಟಾಚಾರ ಅಥವಾ ಅಪರಾಧಕ್ಕಿಂತ ಇಬ್ಬರು ಕೈ ಹಿಡಿದು ನಡೆಯುವುದೇ ಇವರಿಗೆ ದೊಡ್ಡ ಅಪರಾಧಿಗಳಂತೆ ಕಾಣುತ್ತಿದ್ದಾರೆ ಎಂದು ಬರೆದಿದ್ದಾರೆ.
ಮತ್ತೊಬ್ಬರು, ಅತ್ಯಾಚಾರಿಗಳು ರಾಜಾರೋಷವಾಗಿ ತಿರುಗುತ್ತಾರೆ, ಆದರೆ ಪ್ರೇಮಿಗಳು ಕಂಡರೆ ಇವರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತೆ ಭಾಸವಾಗುತ್ತದೆ ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಲವರು ಯುಪಿ ಪೊಲೀಸರನ್ನು ಟ್ಯಾಗ್ ಮಾಡಿ, ಹಿಂಸೆ ಪ್ರಚೋದಿಸುತ್ತಿರುವ ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ, ಪ್ರತಿ ವರ್ಷದಂತೆ ಈ ಬಾರಿಯೂ ಪ್ರೇಮಿಗಳ ದಿನದ ಸುತ್ತ ವಿವಾದದ ಕಿಡಿ ಹೊತ್ತಿಕೊಂಡಿದೆ. ಪ್ರೀತಿಯನ್ನು ಹರಡುವ ದಿನದಂದು ಲಾಠಿ ಹಿಡಿದು ನಿಲ್ಲುವುದು ಎಷ್ಟು ಸರಿ ಎಂಬ ಚರ್ಚೆ ಈಗ ಎಲ್ಲೆಡೆ ಜೋರಾಗಿದೆ,(ಏಜನ್ಸೀಸ್).