ಕೇರಳದ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ನೆಡುಂಬಶ್ಶೇರಿಯಲ್ಲಿ ಅಪಘಾತ
ಟೀ ಕುಡಿಯಲು ತೆರಳುತ್ತಿದ್ದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಸಾವು
ಆಕ್ಸಿಡೆಂಟ್ ನಡೆಸಿ ತಂದೆ ನೋಡಿಕೊಳ್ಳುತ್ತಾರೆ ಎಂದು ದರ್ಪದಲ್ಲಿ ಮಾತನಾಡಿದ ಆರೋಪಿ
'ರಸ್ತೆ ಇರೋದ್ಯಾಕೆ, ವಾಹನಗಳು ವೇಗವಾಗಿ ಓಡಾಡೋದಕ್ಕೆ ಅಲ್ವಾ?, ಅಪ್ಪಾ ಎಲ್ಲವನ್ನು ನೋಡಿಕೊಳ್ತಾರೆ' ಹೀಗೆಂದು ಮಾತನಾಡಿದ್ದು, ಕುಡಿದ ಮತ್ತಲ್ಲಿ ವೇಗವಾಗಿ ಕಾರು ಚಲಾಯಿಸಿ ಮೂವರ ಸಾವಿಗೆ ಕಾರಣನಾದ 19 ವರ್ಷದ ಯುವಕ. ಸದ್ಯ ಈತನ ದರ್ಪದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೇರಳದ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ನೆಡುಂಬಶ್ಶೇರಿ ಬಳಿ ವೇಗವಾಗಿ ಬಂದ ಮಿನಿ ಕೂಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮೂವರು ಉದ್ಯೋಗಿಗಳು ಮೃತಪಟ್ಟ ಘಟನೆ ಭಾನುವಾರ (ಅ.11)ತಡರಾತ್ರಿ ನಡೆದಿದೆ. 19 ವರ್ಷದ ಯುವಕ ಆಕ್ಸಿಡೆಂಟ್ಗೂ ಮುನ್ನ ಮಾತನಾಡಿದ ವಿಡಿಯೋ ಸದ್ಯ ಚರ್ಚೆಗೆ ಕಾರಣವಾಗಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ವಯನಾಡಿನ ಮಡಕ್ಕಿಮಲ ಮೂಲದ ದೇವಿಕಾ (21), ಪಾಲಕ್ಕಾಡ್ ಮೂಲದ ಗೋಪಿಕಾ (22), ಮಂಗಳೂರು ಮೂಲದ ಇಜಾಜ್ (21) ಎಂದು ಗುರುತಿಸಲಾಗಿದೆ. ಮೂವರು ಎರ್ನಾಕುಳಂ ಜಿಲ್ಲೆಯ ಕಕ್ಕನಾಡ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಚಹಾ ಕುಡಿಯಲು ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುತ್ತಿದ್ದಾಗ ದುರಂತ ಸಂಭವಿಸಿದೆ ಎನ್ನಲಾಗಿದೆ.
ಗೋಪಿಕಾ ಮತ್ತು ದೇವಿಕಾ ಸ್ಥಳದಲ್ಲೇ ಸಾವನ್ನಪ್ಪಿದರು. ಆದರೆ ಇಜಾಜ್ ಉಸಿರಾಡುತ್ತಿದ್ದ. ಹೀಗಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಉಳಿಸಲಾಗಲಿಲ್ಲ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಅಪಘಾತಕ್ಕೂ ಮುನ್ನ ಕಾರು ಓಡಿಸುತ್ತಿದ್ದ ಸುಹೈಲ್ ಸಜೀವ್ ಮದ್ಯ ಸೇವಿಸಿದ್ದ. ಕೇರಳದಲ್ಲಿ ಕಾನೂನುಬದ್ಧವಾಗಿ ಮದ್ಯಪಾನ ಸೇವಿಸಲು ಅವಕಾಶ ಇರುವುದು 23 ವರ್ಷದ ನಂತರದವರಿಗೆ. ಆದರೆ, 19 ವರ್ಷದ ಯುವಕನಿಗೆ ಮದ್ಯ ಕೊಟ್ಟಿದ್ಯಾರು? ಎಂದು ಅಕ್ರಮವಾಗಿ ಮದ್ಯ ಪೂರೈಕೆ ಮಾಡುತ್ತಿರುವ ಬಾರ್ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ಪೊಲೀಸರ ಪ್ರಕಾರ, ಸುಹೈಲ್ ಸಜೀವ್ ಮಿನಿ ಕೂಪರ್ ಕಾರು ಚಲಾಯಿಸುತ್ತಿದ್ದ. ವೇಗವಾಗಿ ಬಂದ ಆತ ಮೂವರು ಪ್ರಯಾಣಿಸುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಮೂವರು ಸ್ಕೂಟರ್ನಿಂದ ಹಾರಿ ಕಿಲೋಮೀಟರ್ ಗಟ್ಟಲೇ ದೂರಕ್ಕೆ ಬಿದ್ದಿದ್ದಾರೆ. ಇನ್ನೂ ಕಾರು ಸ್ಕೂಟರ್ ಅನ್ನು ಸುಮಾರು 100 ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿ ನಂತರ ನಿಂತಿದೆ.
ಇಷ್ಟು ಭೀಕರವಾಗಿ ಘಟನೆ ನಡೆದಿದ್ದರೂ ಸಹ ಪ್ರಕರಣಕ್ಕೆ ಕಾರಣನಾದ ಸುಹೈಲ್ ಸಜೀವ್ಗೆ ಯಾವುದೇ ಪಶ್ಚಾತಾಪವಿಲ್ಲ. ರಸ್ತೆ ಇರೋದೆ ಡ್ರೈವಿಂಗ್ ಮಾಡೋಕೆ ಎಂದು ಪ್ರಶ್ನಿಸಿದ್ದಾನೆ. ತನ್ನ ತಂದೆಯೇ ಈ ವಿಷಯವನ್ನು ನೋಡಿಕೊಳ್ಳುತ್ತಾರೆ ಎಂದಿರುವುದನ್ನು ಪೊಲೀಸರು ಉಲ್ಲೇಖಿಸಿದರು
ವೈದ್ಯಕೀಯ ಪರೀಕ್ಷೆಗಾಗಿ ಸುಹೈಲ್ನನ್ನು ಪೊಲೀಸರು ಕರೆದೊಯ್ಯುತ್ತಿರುವಾಗ ಯುವಕ ಗುಂಪೊಂದು ಹಲ್ಲೆ ಮಾಡಿರುವ ವಿಡಿಯೋಗಳು ವೈರಲ್ ಆಗಿದೆ. ಸದ್ಯ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.
ಅಪಘಾತಕ್ಕೆ ಕಾರಣನಾದ ಸುಹೈಲ್ಗೆ ಮದ್ಯ ಪೂರೈಸಿದ ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಅಬಕಾರಿ ಸಚಿವ ಎಂ ಲಿಜು ಆದೇಶಿಸಿದ್ದಾರೆ. ಬಾರ್ ಮಾಲೀಕರು ಯಾರೆಂದು ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲಿಸುವಂತೆ ಸಚಿವರು ಅಬಕಾರಿ ಆಯುಕ್ತರು ಮತ್ತು ಎರ್ನಾಕುಲಂ ಜಂಟಿ ಅಬಕಾರಿ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ, (ಏಜೆನ್ಸೀಸ್).