ಮಗುವನ್ನು ಎದೆಗೆ ಕಟ್ಕೊಂಡು ತಂದೆಯಿಂದ ಮ್ಯಾರಥಾನ್ ಓಟ
- ತಂದೆಯೊಬ್ಬರು ತಮ್ಮ ಮಗುವನ್ನು ಎದೆಗೆ ಕಟ್ಟಿಕೊಂಡು ಮ್ಯಾರಥಾನ್ನಲ್ಲಿ ಭಾಗಿ
- ನಿನ್ನೆ ಕೇರಳದ ಕೊಚ್ಚಿಯಲ್ಲಿ ನಡೆದ ಮ್ಯಾರಥಾನ್ನಲ್ಲಿ ತಂದೆಯ ಓಟ
- ಮಗುವಿನೊಂದಿಗೆ ಓಡಿದ ತಂದೆಯ ವಿರುದ್ಧ ನೆಟ್ಟಿಗರಿಂದ ಆಕ್ರೋಶದ ಸುರಿಮಳೆ
ಕೊಚ್ಚಿ: ನಿನ್ನೆ (ಫೆ.01) ಕೊಚ್ಚಿಯಲ್ಲಿ ನಡೆದ ಮ್ಯಾರಥಾನ್ ವೇಳೆ ತಂದೆಯೊಬ್ಬರು ( Father ) ತಮ್ಮ ಮಗುವನ್ನು ಎದೆಗೆ ಕಟ್ಟಿಕೊಂಡು ಓಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬಿಳಿ ಟಿ-ಶರ್ಟ್ ಮತ್ತು ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬ ತನ್ನ ಮಗುವನ್ನು ಹೊತ್ತುಕೊಂಡು ಇತರರೊಂದಿಗೆ ಮ್ಯಾರಥಾನ್ನಲ್ಲಿ ಓಡಿದ್ದಾನೆ. ತನ್ನ ಎಡಗೈಯಲ್ಲಿ ನೀರಿನ ಬಾಟಲಿಯನ್ನು ಹಿಡಿದುಕೊಂಡು ಮತ್ತು ಬಲಗೈಯಿಂದ ಮಗುವಿನ ತಲೆಯನ್ನು ಹಿಡಿದುಕೊಂಡು ಮ್ಯಾರಥಾನ್ನಲ್ಲಿ ಭಾಗವಹಿಸಿದ್ದಾರೆ. ಓಟದ ಸಮಯದಲ್ಲಿ ಮಗು ನಿದ್ರೆಗೆ ಜಾರಿತ್ತು.
ವಿಡಿಯೋ ಹಂಚಿಕೊಂಡರೆ, ಜನರಿಂದ ಮೆಚ್ಚುಗೆಯ ಕಾಮೆಂಟ್ಗಳು ಬರಬಹುದು ಅಂತ ತಂದೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದರು. ಆದರೆ, ಅಲ್ಲಿ ನಡೆದಿದ್ದೇ ಬೇರೆ. ಏಕೆಂದರೆ, ತಂದೆಯ ವಿರುದ್ಧ ನೆಟ್ಟಿಗರು ಆಕ್ರೋಶ ಸುರಿಮಳೆಗೈದಿದ್ದಾರೆ.
ಅನೇಕ ನೆಟ್ಟಿಗರು ಮಗುವಿನ ಆರೋಗ್ಯ ಮತ್ತು ಸುರಕ್ಷತೆಯನ್ನು ಉಲ್ಲೇಖಿಸಿದ್ದಾರೆ. ಓರ್ವ ನೆಟ್ಟಿಗ, ಇದು ಸೂಪರ್ ಡ್ಯಾಡ್ ಶೋ ಅಲ್ಲ, ಫಿಟ್ನೆಸ್ ಹೆಸರಿನಲ್ಲಿ ನಡೆಯುತ್ತಿರುವ ಅಜಾಗರೂಕತೆ ಎಂದು ಕಾಮೆಂಟ್ ಮಾಡಿದ್ದಾರೆ. ಮಕ್ಕಳನ್ನು ಇಂತಹ ವಿಷಯಗಳಿಗೆ ಬಳಸಬಾರದು ಅಂತ ಇನ್ನು ಕೆಲ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಓಟದ ಸಮಯದಲ್ಲಿ ಅಲುಗಾಡುವಿಕೆಯು ಮಗುವಿನ ದೈಹಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಎದೆಗೆ ಕಟ್ಟಿಕೊಳ್ಳುವ ಬದಲಿಗೆ ಓಡುವ ಸ್ಟ್ರಾಲರ್‌ಗಳನ್ನು ಬಳಸಬೇಕಾಗಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದು ಪ್ರಮುಖ ಪ್ರಶ್ನೆಯೆಂದರೆ ಮ್ಯಾರಥಾನ್ ಸಂಘಟಕರು ಇಂತಹ ಅಪಾಯಕಾರಿ ನಡೆಗೆ ಹೇಗೆ ಅವಕಾಶ ನೀಡಿದರು ಎಂದು ಪ್ರಶ್ನಿಸುವ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ, (ಏಜೆನ್ಸೀಸ್).