ಭಾರತ-ಅಮೆರಿಕ ಕೃಷಿ ಮತ್ತು ವ್ಯಾಪಾರ ಒಪ್ಪಂದ ವಿರೋಧಿಸಿ ಪಂಜಾಬ್ ರೈತರಿಂದ ದೆಹಲಿ ಚಲೋ
- ಭಾರತ-ಅಮೆರಿಕ ಕೃಷಿ ಮತ್ತು ವ್ಯಾಪಾರ ಒಪ್ಪಂದ ವಿರೋಧಿಸಿ ಪಂಜಾಬ್ ರೈತರಿಂದ ದೆಹಲಿ ಚಲೋ
- ಶಂಭು ಗಡಿಯಲ್ಲಿ ರೈತರನ್ನು ತಡೆದ ಪೊಲೀಸರು!
- ಪಂಜಾಬ್ ಸರ್ಕಾರದ ಮೌನಕ್ಕೆ ರೈತರ ಆಕ್ರೋಶ
ನವದೆಹಲಿ: ದೇಶದಲ್ಲಿ ಒಂದು ಕಡೆ ನೀಟ್ ಪರೀಕ್ಷೆ ಅಕ್ರಮವನ್ನು ಪ್ರಶ್ನಿಸಿ ಸಿಜೆಪಿಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದರೆ, ಇನ್ನೊಂದು ಕಡೆ ಅಮೆರಿಕ- ಇಂಡಿಯಾ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ರೈತರು ಹೋರಾಟಕ್ಕೆ (Farmers Protest) ಮುಂದಾಗಿದ್ದಾರೆ.
ಈ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಪಂಜಾಬ್ನಿಂದ ನೂರಾರು ರೈತರು, ದೆಹಲಿಯತ್ತ ಬರುತ್ತಿದ್ದಂತೆ ಅವರನ್ನು ಹರಿಯಾಣ-ದೆಹಲಿ ಗಡಿಯಾದ ಶಂಭು ಎಂಬಲ್ಲಿ ತಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ರೈತರ ಆರೋಪದ ಪ್ರಕಾರ, ನಾವು ದೆಹಲಿಗೆ ತೆರಳಿ ನಮ್ಮ ಮನವಿಯನ್ನು ಸಲ್ಲಿಸಲಿದ್ದೆವೆ. ಆದರೆ ಹರಿಯಾಣಾ ಪೊಲೀಸರು, ಪಂಜಾಬ್ ಗಡಿಯೊಳಗೆ ನುಗ್ಗಿ ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ಇದನ್ನು ವಿರೋಧಿಸಬೇಕಾದ ಪಂಜಾಬ್ ಸರ್ಕಾರ ಕಣ್ಮುಚ್ಚಿಕೊಂಡು ಕುಳಿತಿದೆ ಎಂದು ಆರೋಪಿಸಿದ್ದಾರೆ.
ಈ ಒಪ್ಪಂದಕ್ಕೆ ನಮ್ಮ ಸಮ್ಮತಿಯಿಲ್ಲ!
ಫೆಬ್ರುವರಿ 2026 ರಂದು ಭಾರತ ಮತ್ತು ಅಮೆರಿಕ ನಡುವೆ ಆಹಾರ, ಕೃಷಿ, ಡೈರಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವ್ಯಾಪಾರಿ ಒಪ್ಪಂದವಾಗಿದೆ. ಆದರೆ ಈ ಒಪ್ಪಂದಕ್ಕೆ ಭಾರತದ ರೈತರ ಒಪ್ಪಿಗೆಯಿಲ್ಲ. ಅಮೆರಿಕ ಜೊತೆ ಮಾಡಿಕೊಂಡ ಒಪ್ಪಂದ ಜಾರಿಯಾದರೆ, ನಮ್ಮ ಮಾರುಕಟ್ಟೆಯಲ್ಲಿ ಕೇವಲ ವಿದೇಶಿ ಉತ್ಪನ್ನಗಳೇ ಇರುತ್ತದೆ. ನಾವು ಈ ಮಾರುಕಟ್ಟೆಯಿಂದ ಹೊರ ಹೋಗುತ್ತೆವೆ ಎನ್ನುವುದು ರೈತರ ವಾದವಾಗಿದೆ.
ಇಂದಿಗೂ ಭಾರತದ ಸುಮಾರು 8 ಕೋಟಿ ಕುಟುಂಬಗಳು ತಾವು ಬೆಳೆಯುವ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ನಂತರ ತಾವು ಊಟ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ನಾವು ಅಮೆರಿಕದ ಕಂಪನಿಗಳ ಜೊತೆ ಪೈಪೋಟಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಈ ಒಪ್ಪಂದವನ್ನು ಭಾರತ ಮುರಿಯಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದಿದ್ದಾರೆ, (ಏಜನ್ಸೀಸ್).