ನಕಲಿ ಟಿಟಿಇ (Fake TTE) ವೇಷ ಧರಿಸಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡಿದ ಯುವಕ!
- ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ನಕಲಿ TTE ಹಾವಳಿ
- ನಕಲಿ ಟಿಟಿಇ (Fake TTE) ವೇಷ ಧರಿಸಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡಿದ ಯುವಕ!
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಪಾಟ್ನಾ: ಭಾರತೀಯ ರೈಲ್ವೆ ವ್ಯವಸ್ಥೆಯ ಬೆನ್ನೆಲುಬು ಯಾರೆಂದು ಕೇಳಿದರೆ ಅದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಅದರಲ್ಲಿಯೂ ಪ್ರಯಾಣ ಟಿಕೆಟ್ ಪರೀಕ್ಷಕ ಅಥವಾ ಟಿಟಿಇ ಎಂದರೆ ತಪ್ಪಾಗದು. ರೈಲ್ವೆ ಪ್ರಯಾಣ ಮಾಡುವ ಪ್ರತಿ ಪ್ರಯಾಣಿಕ ಟಿಕೆಟ್ ಪಡೆದಿದ್ದಾನೆಯೇ? ಇಲ್ಲವೇ? ಎಂದು ಪರಿಶೀಲಿಸುವುದು ಇವರ ಬಹುಮುಖ್ಯ ಕರ್ತವ್ಯವಾಗಿರುತ್ತದೆ.
ಒಂದು ವೇಳೆ ಟಿಕೆಟ್ ಪಡೆಯದೆ ರೈಲನ್ನು ಏರಿದ ಪ್ರಯಾಣಿಕರಿಗೆ ದಂಡ ವಿಧಿಸುವ ಅಧಿಕಾರ ಕೂಡ ಇವರಿಗೆ ಇರುತ್ತದೆ. ಆದರೆ ಇತ್ತೀಚೆಗೆ ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಯುವಕನೊಬ್ಬ ನಕಲಿ ಟಿಟಿಇ (Fake TTE Viral Video) ವೇಷ ಧರಿಸಿ ದಂಡ ವಿಧಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವಿವಾದಕ್ಕೆ ದಾರಿ ಮಾಡಿ ಕೊಟ್ಟಿದೆ.
ವಿಡಿಯೋನಲ್ಲೇನಿದೆ?
ಈ ವಿಡಿಯೋವನ್ನು ಶಿವಂ ಗುಪ್ತಾ ಎಂಬ ಇನ್ಪ್ಫೂಯೇನ್ಸರ್ ಸೆರೆಹಿಡಿದಿದ್ದು, ಈ ಶಿವಂ ಟಿಟಿಇ ರೀತಿಯಲ್ಲಿ ಬಿಳಿ ಬಣ್ಣದ ಶರ್ಟ್ ಕಪ್ಪು ಕೋಟ್ ಧರಿಸಿ, ನಕಲಿ ಐಡಿಕಾರ್ಡ್ನ್ನು ಕುತ್ತಿಗೆಗೆ ಸಿಕ್ಕಿಸಿಕೊಂಡು ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ನಿಂತಿರುವ ಪ್ರಯಾಣಿಕರ ಟಿಕೆಟ್ ಪರಿಶೀಲನೆಗೆ ಮುಂದಾಗಿದ್ದಾನೆ.
ಟಿಕೆಟ್ ಹೊಂದಿರುವ ಪ್ರಯಾಣಿಕರು ತಮ್ಮ ಟಿಕೆಟ್ನ್ನು ಶಿವಂನಿಗೆ ತೋರಿಸಿದರೆ, ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಶಿವಂ 500 ರೂಪಾಯಿ ದಂಡ ವಸೂಲು ಮಾಡಿದ್ದಾರೆ, ಹೀಗೆ ಕೇವಲ ಅರ್ಧ ಗಂಟೆಯಲ್ಲಿ ಶಿವಂ ಸುಮಾರು 1,200 ಪಡೆದಿದ್ದಾನೆ. ಇದು ಯಾವುದೇ ಪ್ರಾಂಕ್ ವಿಡಿಯೋನಲ್ಲ, ಬದಲಿಗೆ ಜನರನ್ನು ಜಾಗ್ರತರಾಗಿಸಲು ಮಾಡಿರುವ ವಿಡಿಯೋ ಎಂದು ಹೇಳಿದ್ದಾನೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಬಾಕ್ಸ್ ತುಂಬಿಸುವ ಕೆಲಸಕ್ಕೆ ಇಳಿದ್ದಿದ್ದಾರೆ. ನಮ್ಮ ಜನಕ್ಕೆ ರೈಲ್ವೆ ನಿಲ್ದಾಣದಲ್ಲಿ ಕಪ್ಪು ಕೋಟ್ ಹಾಕಿಕೊಂಡು ಯಾರೆ ಬಂದರು ಅವರು ಟಿಟಿಇ ರೀತಿಯಲ್ಲೇ ಕಾಣಿಸುತ್ತಾರೆ ಎಂದು ಒಬ್ಬ ಬಳಕೆದಾರರು ವಿಷಾಧ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಜನರನ್ನು ಮೋಸ ಮಾಡುವುದು ಎಷ್ಟು ಸುಲಭದ ಕೆಲಸ ಎಂದು ಈ ವಿಡಿಯೋನೇ ಸಾಕ್ಷಿ ಎಂದು ಇನ್ನೊಬ್ಬರು ಹೇಳಿದ್ದಾರೆ. ಅವನು ಜನರಿಂದ ದುಡ್ಡನ್ನು ಪಡೆಯುತ್ತಿದ್ದರೂ ಒಬ್ಬನೇ ಒಬ್ಬ ಇತರ ಟಿಟಿಇ ಆಗಲಿ, ರೈಲ್ವೆ ಪೊಲೀಸ್ ಆಗಲಿ ಆಗಮಿಸಲಿಲ್ಲ. ಇದು ನಮ್ಮ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ, (ಏಜನ್ಸೀಸ್).