Tamil Nadu Library Scam: ಎಲ್ಲರೂ ಜ್ಞಾನ ಪಡೆದುಕೊಳ್ಳಲು, ಪುಸ್ತಕಗಳನ್ನು ಓದಲು ಗ್ರಂಥಾಲಯಗಳಿಗೆ ಹೋಗುತ್ತಾರೆ. ಅಲ್ಲಿ ಸಿಗುವ ಪ್ರತಿಯೊಂದು ಮಾಹಿತಿಯೂ ಸತ್ಯ ಮತ್ತು ನಿಖರವಾಗಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆದರೆ ಜ್ಞಾನ ಹಂಚಬೇಕಾದ ಗ್ರಂಥಾಲಯದಲ್ಲೇ ತಪ್ಪು ಮಾಹಿತಿ ಇರುವ ಪುಸ್ತಕಗಳು ಸಿಕ್ಕರೆ? ಪುಸ್ತಕಗಳಲ್ಲಿನ ಲೇಖಕರ ಹೆಸರು, ಸಾಹಿತ್ಯದ ವಿವರಗಳು ಮತ್ತು ಐತಿಹಾಸಿಕ ಸಂಗತಿಗಳೇ ತಪ್ಪಾಗಿದ್ದರೆ ಹೇಗಿರುತ್ತದೆ? ಇಂತಹದ್ದೇ ಗಂಭೀರ ಆರೋಪವೊಂದು ತಮಿಳುನಾಡಿನ ಹೊಸ ಸಾರ್ವಜನಿಕ ಗ್ರಂಥಾಲಯದ ವಿರುದ್ಧ ಕೇಳಿಬಂದಿದ್ದು, ಇದೀಗ ದೇಶದ ಗಮನ ಸೆಳೆದಿದೆ.
ಜ್ಞಾನ ದೇಗುಲವಾಗಬೇಕಿದ್ದ ಸಾರ್ವಜನಿಕ ಗ್ರಂಥಾಲಯವೊಂದು ಇದೀಗ ನಕಲಿ ಮಾಹಿತಿ, ಅನುಮಾನಾಸ್ಪದ ಲೇಖಕರು ಮತ್ತು ಪುಸ್ತಕಗಳ ಖರೀದಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದಿಂದ ಸುದ್ದಿಯಾಗಿದೆ. ಖ್ಯಾತ ತಮಿಳು ಕಾದಂಬರಿಕಾರ ಪೆರುಮಾಳ್ ಮುರುಗನ್ ಅವರು ಗ್ರಂಥಾಲಯದ ಪುಸ್ತಕಗಳನ್ನು ಪರಿಶೀಲಿಸಿದಾಗ ಕಂಡುಬಂದ ಲೋಪಗಳು ಈಗ ತಮಿಳುನಾಡಿನ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
ಗ್ರಂಥಾಲಯದಲ್ಲಿ ಪುಸ್ತಕಗಳಿರಬೇಕು, ಪುಸ್ತಕಗಳಲ್ಲಿ ವಿಶ್ವಾಸಾರ್ಹ ಮಾಹಿತಿಯಿರಬೇಕು. ಆದರೆ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಹೊಸ ಸಾರ್ವಜನಿಕ ಗ್ರಂಥಾಲಯವೊಂದರಲ್ಲಿ ಪುಸ್ತಕಗಳೇ ಅನುಮಾನಕ್ಕೆ ಕಾರಣವಾಗಿವೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪೆರಿಯಾರ್ ಅರಿವುಲಗಂ ಗ್ರಂಥಾಲಯವನ್ನು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಅಕ್ಟೋಬರ್ 16ರಂದು ಉದ್ಘಾಟಿಸಿದ್ದರು. ಇದೀಗ ಇಲ್ಲಿನ ಪುಸ್ತಕಗಳ ಆಯ್ಕೆ ಮತ್ತು ಖರೀದಿ ಪ್ರಕ್ರಿಯೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.
ಖ್ಯಾತ ತಮಿಳು ಸಾಹಿತಿ ಪೆರುಮಾಳ್ ಮುರುಗನ್ ಅವರು ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪುಸ್ತಕಗಳನ್ನು ಪರಿಶೀಲಿಸಿದಾಗ ಹಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ಸುಮಾರು 15 ವರ್ಷಗಳ ಕಾಲ ತಮಿಳು ಸಾಹಿತ್ಯ ಅಧ್ಯಯನ ಮಾಡಿ, 30 ವರ್ಷಗಳಿಗೂ ಹೆಚ್ಚು ಕಾಲ ಬೋಧನೆ ಮಾಡಿದ ಅನುಭವ ಹೊಂದಿರುವ ಅವರಿಗೇ ಕೆಲವು ಪುಸ್ತಕಗಳಲ್ಲಿನ ಮಾಹಿತಿ ಅಚ್ಚರಿ ಮೂಡಿಸಿದೆ. ಈ ಕುರಿತು ಅವರು ಬರೆದ ಲೇಖನ ಈಗ ವಿವಾದದ ಕೇಂದ್ರವಾಗಿದೆ.
ಮುರುಗನ್ ಅವರ ಪ್ರಕಾರ, ನಾಲಡಿಯಾರ್ ಎಂಬ ಪ್ರಸಿದ್ಧ ತಮಿಳು ಸಾಹಿತ್ಯ ಕೃತಿಯನ್ನು ಪುಸ್ತಕವೊಂದರಲ್ಲಿ ಕವಿ ಮತ್ತು ತತ್ವಜ್ಞಾನಿಯ ಕೃತಿಯೆಂದು ಪರಿಚಯಿಸಲಾಗಿದೆ. ಆದರೆ ನಾಲಡಿಯಾರ್ ಒಬ್ಬ ವ್ಯಕ್ತಿಯ ಹೆಸರಲ್ಲ ಜೈನ ತಪಸ್ವಿಗಳಿಗೆ ಸಂಬಂಧಿಸಿದ 400 ಪದ್ಯಗಳ ಸಂಕಲನವಾಗಿದೆ. ಮತ್ತೊಂದು ಪುಸ್ತಕದಲ್ಲಿ ಸಂಗಂ ಸಾಹಿತ್ಯದ ಪ್ರಮುಖ ಕೃತಿ ಮಧುರೈ ಕಾಂಚಿಯ ಕರ್ತೃ ಮಾಂಗುಡಿ ಮರುದನಾರ್ ಅವರ ಹೆಸರಿನ ಬದಲು ಬೇರೊಬ್ಬರ ಹೆಸರನ್ನು ಉಲ್ಲೇಖಿಸಲಾಗಿದೆ ಎಂಬ ಆಕ್ಷೇಪವಿದೆ.ಇಷ್ಟೇ ಅಲ್ಲ, ಕವಿ ಸುಬ್ರಮಣ್ಯ ಭಾರತಿ ಅವರ ಹೆಸರಿನಲ್ಲಿ ಪ್ರಕಟವಾದ ಬರಹದ ಕರ್ತೃತ್ವದ ಬಗ್ಗೆಯೂ ಪ್ರಶ್ನೆ ಎದ್ದಿದೆ. ಕೀಲಾಡಿ ಉತ್ಖನನದಲ್ಲಿ ಪತ್ತೆಯಾದ ವಸ್ತು ಎಂದು ಪುಸ್ತಕವೊಂದರಲ್ಲಿ ನಂದಿಯ ಶಿಲ್ಪದ ಚಿತ್ರವನ್ನು ಬಳಸಿರುವುದನ್ನೂ ಮುರುಗನ್ ಆಕ್ಷೇಪಿಸಿದ್ದಾರೆ. ಹೀಗೆ ಸಾಹಿತ್ಯ, ಇತಿಹಾಸ ಮತ್ತು ಲೇಖಕರ ಪರಿಚಯದಲ್ಲೇ ಹಲವು ತಪ್ಪುಗಳಿರುವುದಾಗಿ ಅವರು ಆರೋಪಿಸಿದ್ದಾರೆ.
ಗ್ರಂಥಾಲಯದ ತಮಿಳು ವಿಭಾಗದಲ್ಲಿ 'ಅಗಲ್ವಿಳಕ್ಕು ಪತಿಪ್ಪಗಂ' ಎಂಬ ಪ್ರಕಾಶನ ಸಂಸ್ಥೆಯ ಸುಮಾರು 1,800 ಪುಸ್ತಕಗಳಿರುವುದಾಗಿ ಮುರುಗನ್ ಉಲ್ಲೇಖಿಸಿದ್ದಾರೆ. ಕೆಲವು ಪುಸ್ತಕಗಳ ಬೆಲೆ, ಲೇಖಕರ ಹಿನ್ನೆಲೆ ಮತ್ತು ಬರಹಗಳ ಗುಣಮಟ್ಟದ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೃತಕ ಬುದ್ಧಿಮತ್ತೆ ಬಳಸಿ ಬರೆಯಲಾದ ವಿಷಯಗಳು, ಕಾಲ್ಪನಿಕ ಲೇಖಕರ ಹೆಸರುಗಳು ಹಾಗೂ ಪರಿಶೀಲನೆ ಅಗತ್ಯವಿರುವ ಐಎಸ್‌ಬಿಎನ್ ಸಂಖ್ಯೆಗಳ ಬಗ್ಗೆಯೂ ಆರೋಪಗಳಿವೆ.
ಈ ವಿವಾದದ ಬೆನ್ನಲ್ಲೇ ಮುಖ್ಯಮಂತ್ರಿ ವಿಜಯ್ ಅವರು ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ನಡೆದ ಪುಸ್ತಕ ಖರೀದಿ ಪ್ರಕ್ರಿಯೆಯ ಕುರಿತು ಪ್ರಶ್ನೆ ಎತ್ತಿದ್ದಾರೆ. ಶಾಲಾ ಶಿಕ್ಷಣ ಸಚಿವ ಎ. ರಾಜಮೋಹನ್ ಅವರು ಈ ಸಂಬಂಧ ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ, ಡಿಎಂಕೆ ಆರೋಪಗಳನ್ನು ತಳ್ಳಿಹಾಕಿದ್ದು, ಪುಸ್ತಕಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇತ್ತು ಎಂದು ಸಮರ್ಥಿಸಿಕೊಂಡಿದೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣವಾದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡುವಾಗ ಯಾವ ಮಾನದಂಡ ಅನುಸರಿಸಲಾಯಿತು? ಪ್ರಕಾಶಕರ ಹಿನ್ನೆಲೆ ಮತ್ತು ಪುಸ್ತಕಗಳ ಬೆಲೆಯನ್ನು ಪರಿಶೀಲಿಸಲಾಗಿತ್ತೇ? ತಪ್ಪು ಮಾಹಿತಿ ಇರುವ ಪುಸ್ತಕಗಳಿಗೆ ಅನುಮೋದನೆ ನೀಡಿದವರು ಯಾರು? ಎಂಬ ಪ್ರಶ್ನೆಗಳು ಈಗ ಮಹತ್ವ ಪಡೆದಿವೆ. ಈ ಆರೋಪಗಳು ತನಿಖೆಯಲ್ಲಿ ದೃಢಪಟ್ಟಿಲ್ಲ. ಆದರೆ ತನಿಖೆಯ ವರದಿ ಹೊರಬಂದ ಬಳಿಕವೇ ಪುಸ್ತಕ ಖರೀದಿಯ ಹಿಂದಿನ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.