ಸ್ಟೀರಿಂಗ್ ಕಾಲಮ್ ಗಟ್ಟಿಯಾಗಿ ಹಿಡಿದಿದ್ದರು... ಅಹಮದಾಬಾದ್ ವಿಮಾನ ದುರಂತದ ಕರಾಳ ಸತ್ಯ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ! Ahmedabad Plane Crash
- ಭಾರತದ ವಾಯುಯಾನ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಅಹಮದಾಬಾದ್ನ ಏರ್ ಇಂಡಿಯಾ ವಿಮಾನ ದುರಂತ
- ಕಳೆದ ವರ್ಷ ಜೂನ್ 12 ರಂದು ಸಂಭವಿಸಿದ ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಭೀಕರ ಸಾವು
- ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳೂ ಸಾವು
- ಭಯಾನಕ ಘಟನೆ ನಡೆದ ಸುಮಾರು 11 ತಿಂಗಳ ಬಳಿಕ ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ
ನವದೆಹಲಿ: ಭಾರತದ ವಾಯುಯಾನ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ( Ahmedabad Plane Crash ) ಕಳೆದ ವರ್ಷ ಜೂನ್ 12 ರಂದು ಸಂಭವಿಸಿತು. ಈ ಘಟನೆ ನಡೆದು ಸುಮಾರು 11 ತಿಂಗಳು ಕಳೆದಿದ್ದು, ಇದೀಗ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.
ವಿಮಾನ ಅಪಘಾತದಲ್ಲಿ ಮೃತಪಟ್ಟ ಹಿರಿಯ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಮೃತದೇಹವು ಕಾಕ್‌ಪಿಟ್‌ನಲ್ಲಿ ವಿಮಾನದ ಸ್ಟೀರಿಂಗ್ ವೀಲ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡ ಸ್ಥಿತಿಯಲ್ಲೇ ಪತ್ತೆಯಾಗಿತ್ತು ಎಂಬ ಆಘಾತಕಾರಿ ಸತ್ಯವನ್ನು ಪ್ರತ್ಯಕ್ಷದರ್ಶಿ ರೋಮಿನ್ ವೋಹ್ರಾ ಎಂಬ ಯುವಕ ಬಹಿರಂಗಪಡಿಸಿದ್ದಾನೆ.
ಅಪಘಾತದ ನಂತರ ಶವಾಗಾರದಲ್ಲಿ ಸುಮೀತ್ ಅವರ ಮೃತದೇಹವನ್ನು ನೋಡಿದ್ದಾಗಿ ತಿಳಿಸಿರುವ ರೋಮಿನ್, ಅವರ ಬೆನ್ನಿನ ಭಾಗ ಸುಟ್ಟುಹೋಗಿತ್ತು, ಆದರೆ ಮುಂಭಾಗಕ್ಕೆ ಯಾವುದೇ ಹಾನಿಯಾಗಿರಲಿಲ್ಲ ಮತ್ತು ಅವರು ಧರಿಸಿದ್ದ ಚಿನ್ನದ ಪಟ್ಟಿಗಳಿದ್ದ ಬಿಳಿ ಯುನಿಫಾರ್ಮ್ ಶರ್ಟ್, ಕಪ್ಪು ಟೈ, ಪ್ಯಾಂಟ್ ಮತ್ತು ಶೂಗಳೆಲ್ಲವೂ ಹಾಗೆಯೇ ಇದ್ದವು. ರಕ್ಷಣಾ ಸಿಬ್ಬಂದಿ ಕಾಕ್‌ಪಿಟ್‌ನಿಂದ ಅವರ ದೇಹವನ್ನು ಹೊರತೆಗೆಯುವಾಗ ವಿಮಾನವನ್ನು ನಿಯಂತ್ರಿಸುವ ಸ್ಟೀರಿಂಗ್ ಕಾಲಮ್ ಅನ್ನು ಅವರು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ, ದೇಹವನ್ನು ಬೇರ್ಪಡಿಸುವಾಗ ಸ್ಟೀರಿಂಗ್ ಭಾಗವೇ ಕೊಂಚ ಜರುಗಿರಬಹುದು ಎಂದು ಆ ಭೀಕರ ಕ್ಷಣವನ್ನು ವೋಹ್ರಾ ನೆನಪಿಸಿಕೊಂಡಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ದೇಹಗಳನ್ನು ಇಡಲಾಗಿದ್ದ ಶವಾಗಾರದ ಭೀಕರ ದೃಶ್ಯಗಳನ್ನು ರೋಮಿನ್ ವೋಹ್ರಾ ವಿವರಿಸಿದ್ದಾರೆ. ಈ ಭೀಕರ ಅಪಘಾತದಲ್ಲಿ ರೋಮಿನ್ ಅವರ ಚಿಕ್ಕಮ್ಮ ಯಾಶ್ಮಿನ್, ಲಂಡನ್‌ನ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರ ಸೋದರ ಪರ್ವೇಜ್ ಮತ್ತು ಅವರ ಮೂರು ವರ್ಷದ ಪುಟ್ಟ ಮಗಳು (ಸೋದರಸೊಸೆ) ದುರದೃಷ್ಟವಶಾತ್ ಸಾವಿಗೀಡಾದರು. ಶವಾಗಾರದಲ್ಲಿ ತಾನು ಕಣ್ಣಾರೆ ಕಂಡ ಆ ದೃಶ್ಯಗಳು ಅತ್ಯಂತ ಮನಕಲಕುವಂತಿದ್ದವು ಮತ್ತು ಬದುಕಿನುದ್ದಕ್ಕೂ ಮರೆಯಲಾಗದಷ್ಟು ಆಘಾತಕಾರಿಯಾಗಿದ್ದವು ಎಂದು ರೋಮಿನ್ ಅವರು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅತ್ಯಂತ ಭಾವುಕರಾಗಿ ಹೇಳಿಕೊಂಡಿದ್ದಾರೆ.
ದುರಂತದಲ್ಲಿ ಮೃತಪಟ್ಟ ತನ್ನ ಸಂಬಂಧಿಕರ ಶವಗಳನ್ನು ಗುರುತಿಸಲು ರೋಮಿನ್ ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ಬಂದಿದ್ದರು. ಕೋವಿಡ್ ಸಮಯದಲ್ಲಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಪ್ಯಾಥಾಲಜಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ ಅನುಭವವಿದ್ದ ಕಾರಣ ಆತನಿಗೆ ಶವಾಗಾರದೊಳಗೆ ಪ್ರವೇಶ ಸಿಕ್ಕಿತ್ತು. ಅಲ್ಲಿನ ನೆಲದ ಮೇಲೆ ಸಾಲು ಸಾಲಾಗಿ ಬಿದ್ದಿದ್ದ ನೂರಾರು ಶವಗಳು, ಕತ್ತರಿಸಿ ಬಿದ್ದಿದ್ದ ತಲೆ ಮತ್ತು ಕೈಕಾಲುಗಳು ಹಾಗೂ ತನ್ನ ಮಗುವನ್ನು ಎದೆಗಪ್ಪಿ ಹಿಡಿದ ಸ್ಥಿತಿಯಲ್ಲೇ ಸುಟ್ಟು ಕರಕಲಾಗಿದ್ದ ತಾಯಿಯ ಭೀಕರ ದೇಹ ಆತನ ಮನಸ್ಸನ್ನು ತೀವ್ರವಾಗಿ ಕಲಕಿದ್ದವು.
ಅದರಲ್ಲೂ ಪ್ರಮುಖವಾಗಿ, ಅಲ್ಲಿ ಬಿದ್ದಿದ್ದ ಪುಟ್ಟ ಹೆಣ್ಣು ಮಗುವಿನ ಕತ್ತರಿಸಿದ ತಲೆಯೊಂದು ತನ್ನದೇ ಮೃತ ಸಂಬಂಧಿಕರ ಮಗುವಿಗೆ ಸೇರಿದ್ದೇ ಎಂದು ಪತ್ತೆಹಚ್ಚಲು ತಾನು ಪಟ್ಟ ಪಾಡನ್ನು ಬದುಕಿನಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ರೋಮಿನ್ ಅತ್ಯಂತ ವೇದನೆಯಿಂದ ನೆನಪಿಸಿಕೊಂಡಿದ್ದಾರೆ.
ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತ
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿತು. 2025, ಜೂನ್ 12ರಂದು ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾದರು. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವಿಗೀಡಾದರು, (ಏಜೆನ್ಸೀಸ್).