ಸಾಂದರ್ಭಿಕ ಚಿತ್ರ 
ದೇಶ

ಅಬಕಾರಿ ನೀತಿ ಪ್ರಕರಣ; ಸಿಬಿಐ ಅಧಿಕಾರಿಗಳ ವಿರುದ್ಧ ವಿಚಾರಣಾ ನ್ಯಾಯಾಲಯದ ಟೀಕೆಗೆ ತಡೆ ನೀಡಿದ ದೆಹಲಿ ಹೈಕೋರ್ಟ್ | Excise policy case

ನವದೆಹಲಿ: ಅಬಕಾರಿ ನೀತಿ ಹಗರಣ ಆರೋಪ ಪ್ರಕರಣದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಷ್ ಸಿಸೋಡಿಯಾ ಸೇರಿ 21 ಜನರನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿನ ಸಿಬಿಐ ಅಧಿಕಾರಿಗಳ ವಿರುದ್ಧದ ಟೀಕೆಗೆ ದೆಹಲಿಯ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣದ 21 ಜನರನ್ನು ಖುಲಾಸೆಗೊಳಿಸುವುದರ ವಿರುದ್ಧ ಕೇಂದ್ರೀಯ ತನಿಖಾ ದಳ(ಸಿಬಿಐ) ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಸಿಬಿಐ ಅಧಿಕಾರಿಗಳ ಮೇಲೆ ವಿಚಾರಣಾ ನ್ಯಾಯಾಲಯದ ಪೂರ್ವಾಗ್ರಹ ಪೀಡಿತ ಹೇಳಿಕೆಗಳಿಗೆ ತಡೆ ನೀಡುವುದಾಗಿ ತಿಳಿಸಿದೆ.
ಇನ್ನೂ ಖುಲಾಸೆಗೊಂಡಿರುವ ಅರವಿಂದ್ ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರರನ್ನು ಬಿಡುಗಡೆ ಮಾಡುವುದರ ವಿರುದ್ಧ ಸಿಬಿಐ ಸಲ್ಲಿಸಿದ ಅರ್ಜಿಯ ಕುರಿತು ತಮ್ಮ ನಿಲುವನ್ನು ತಿಳಿಸುವಂತೆ ಕೋರ್ಟ್ ನೋಟಿಸ್ ನೀಡಿದ್ದು, ಮಾರ್ಚ್ 16ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಸಿಬಿಐ ಪರವಾಗಿ ವಾದ ಮಂಡಿಸಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿಚಾರಣೆಗೆ ಸಮಯ ನಿಗದಿಪಡಿಸುವ ಮೂಲಕ ಸಿಬಿಐ ಅರ್ಜಿಯನ್ನು ಅಂತಿಮವಾಗಿ ನಿರ್ಧರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಮತ್ತು ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವು ವಿಕೃತವಾಗಿದ್ದು, ಕ್ರಿಮಿನಲ್ ಕಾನೂನನ್ನು ತಲೆಕೆಳಗಾಗಿಸಿದೆ ಎಂದು ವಾದಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣವು ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದೆ. ಪ್ರಕರಣದ್ಲಿ ಭ್ರಷ್ಟಾಚಾರ ಸ್ಪಷ್ಟವಾಗಿದೆ. ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರರ ಪರವಾಗಿ ವಿಚಾರಣೆಯಿಲ್ಲದೆ ಖುಲಾಸೆಗೊಳಿಸುವ ಆದೇಶವನ್ನು ನೀಡಿದೆ. ಆದರೆ ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರ ಆರೋಪಿಗಳ ವಿರುದ್ಧ ಆರೋಪ ಹೊರಿಸಿದ್ದಕ್ಕಾಗಿ ಸಾಕಷ್ಟು ಪುರಾವೆಗಳಿವೆ. ಸಿಬಿಐ ಪ್ರಕರಣವನ್ನು ಅನುಮೋದಕರು ಮತ್ತು ಸಾಕ್ಷಿಗಳು ಬೆಂಬಲಿಸಿದ್ದಾರೆ ಎಂದಿದ್ದಾರೆ.
ಫೆ. 27ರಂದು ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್, ಸಿಸೋಡಿಯಾ ಸೇರಿ ಇತರೆ 21 ಜನರನ್ನು ದೋಷಮುಕ್ತಗೊಳಿಸಿ, ಪ್ರಕರಣವು ಸುಳ್ಳಿನಿಂದ ಕೂಡಿದ್ದು, ಉದ್ದೇಶಪೂರ್ವಕವಾಗಿ ಪ್ರಕರಣವನ್ನು ಸೃಷ್ಟಿ ಮಾಡಲಾಗಿದೆ ಎಂದು ಸಿಬಿಐ ವಿರುದ್ಧ ಟೀಕೆ ಮಾಡಿತ್ತು. ಮತ್ತು ನ್ಯಾಯಾಲಯವು ತನಿಖೆ ಮಾಡಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿತ್ತು (ಏಜೆನ್ಸೀಸ್).