ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿ 
ದೇಶ

Letter To Sonia Gandhi | ರಾಹುಲ್​ ವಿರುದ್ಧ ಸೋನಿಯಾಗೆ ಕಂಪ್ಲೇಂಟ್​ ನೀಡಿದ ಮಾಜಿ ಶಾಸಕ; ಎಚ್ಚೆತ್ತುಕೊಳ್ಳಿ ಎಂದು ವಾರ್ನಿಂಗ್​

ಭುವನೇಶ್ವರ: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ದೇಶದ ಯುವಜನತೆಯೊಂದಿಗೆ ಸಂಪರ್ಕ ಕಡಿದುಕೊಂಡಿರುವುದೇ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಹಿನ್ನಡೆಗೆ ಕಾರಣಗಳಾಗಿವೆ ಎಂದು ಒಡಿಶಾದ ಮಾಜಿ ಶಾಸಕ ಮೊಹಮ್ಮದ್ ಮೋಕಿಮ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಮೋಕಿಮ್​, ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಕುಸಿತ ಮತ್ತು ನಾಯಕತ್ವ ವೈಫಲ್ಯಗಳ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ರಾಹುಲ್ ಅಲಭ್ಯತೆಯನ್ನು ಉಲ್ಲೇಖಿಸಿ, ಪರಿಸ್ಥಿತಿಯನ್ನು ಸರಿ ಮಾಡುವಂತೆ ಒತ್ತಾಯಿಸಿದ್ದಾರೆ.

ಪತ್ರದಲ್ಲೇನಿದೆ..?

ನಾನು ಶಾಸಕನಾಗಿದ್ದರೂ ಸುಮಾರು ಮೂರು ವರ್ಷಗಳ ಕಾಲ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಭಾರವಾದ ಹೃದಯದಿಂದ ಹೇಳಿಕೊಳ್ಳುತ್ತೇನೆ. ಇದು ವೈಯಕ್ತಿಕ ಅಸಮಾಧಾನವಲ್ಲ, ಬದಲಾಗಿ ಭಾರತದಾದ್ಯಂತ ಕಾರ್ಮಿಕರು ಅನುಭವಿಸುತ್ತಿರುವ ಭಾವನಾತ್ಮಕ ಸಂಪರ್ಕ ಕಡಿತದ ಪ್ರತಿಬಿಂಬವಾಗಿದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ಕಾರ್ಮಿಕರ ಬೆಂಬಲಕ್ಕೆ ನಿಂತಿದ್ದರು, ಅವರ ಕಷ್ಟ ಕೇಳುತ್ತಿದ್ದರು. ಇದು ನಿಷ್ಠೆ ಮತ್ತು ದೃಢಸಂಕಲ್ಪವನ್ನು ಬೆಳೆಸಲು ಸಹಾಯ ಮಾಡಿತು ಎಂದು ಅವರು ಹೇಳಿದರು.
ಪಕ್ಷದ ಬೆನ್ನೆಲುಬಾಗಿರುವ ಬೂತ್ ಕಾರ್ಯಕರ್ತರು, ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಮಟ್ಟದ ನಾಯಕರು ತಮ್ಮನ್ನು ಕಾಣವವರು ಮತ್ತು ಕೇಳದವರು ಯಾರು ಎಂದು ವ್ಯಥೆ ಪಡುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಬಲವಾಗಿ ನಿಂತ ಅನೇಕ ನಿಸ್ವಾರ್ಥ ಕಾರ್ಯಕರ್ತರಿಗೆ ಇಂದು ದಿಕ್ಕಿಲ್ಲದಂತಾಗಿದೆ. ಅವರ ಕಾರ್ಯಗಳಿಗೆ ಮನ್ನಣೆ ಸಿಗುತ್ತಿಲ್ಲ ಎಂದು ಭಾವಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಇತ್ತೀಚಿನ ಬಿಹಾರ, ದೆಹಲಿ, ಹರಿಯಾಣ, ಮಹಾರಾಷ್ಟ್ರ ಮತ್ತು ಕಾಶ್ಮೀರದ ಚುನಾವಣಾ ಸೋಲುಗಳನ್ನು ಉಲ್ಲೇಖಿಸಿದ ಮೋಕಿಮ್​, ಇವೆಲ್ಲಾ ಕೇವಲ ಚುನಾವಣಾ ಹಿನ್ನಡೆಗಳಲ್ಲ, ಆಳವಾದ ಸಾಂಸ್ಥಿಕ ಸಂಪರ್ಕ ಕಡಿತವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ತಪ್ಪು ನಿರ್ಧಾರಗಳ ಸರಣಿ, ದಾರಿ ತಪ್ಪಿದ ನಾಯಕತ್ವದ ಆಯ್ಕೆಗಳು ಪಕ್ಷವನ್ನು ಒಳಗಿನಿಂದ ದುರ್ಬಲಗೊಳಿಸಿದೆ.
ಈ ಎಲ್ಲಾ ದೋಷಗಳನ್ನು ಸರಿಪಡಿಸುವ ಬದಲು, ನಾವು ಅವುಗಳನ್ನು ಪುನರಾವರ್ತಿಸುತ್ತಿರುವಂತೆ ತೋರುತ್ತಿದೆ ಮತ್ತು ಅದರ ಪರಿಣಾಮಗಳು ಈಗ ಇಡೀ ರಾಷ್ಟ್ರಕ್ಕೆ ಗೋಚರಿಸುತ್ತಿವೆ. ತಮ್ಮನ್ನು ಕಾಂಗ್ರೆಸ್‌ನ ಶ್ರದ್ಧೆಯ ಕಾರ್ಯಕರ್ತ ಎಂದಿರುವ ಮೋಕಿಮ್, ಶತಮಾನದಷ್ಟು ಹಳೆಯದದಾದ ಪಕ್ಷದ ಪರಂಪರೆಯು ಪಕ್ಷದೊಳಗಿನ ಆಂತರಿಕ ನಿರ್ಧಾರಗಳಿಂದ ಜಾರಿಹೋಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೆ, ನಾವು ಆನುವಂಶಿಕವಾಗಿ ಪಡೆದ ಕಾಂಗ್ರೆಸ್ ಪಕ್ಷವನ್ನು ಕಳೆದುಕೊಳ್ಳುವ ಅಪಾಯವಿದೆ, ತಮ್ಮ ಪತ್ರವು ಲಕ್ಷಾಂತರ ಸಮರ್ಪಿತ ಕಾಂಗ್ರೆಸ್ ಕಾರ್ಯಕರ್ತರ ಮೌನದ ಕೂಗಾಗಿದೆ ಎಂದು ಬರೆದುಕೊಂಡಿದ್ದಾರೆ(ಏಜೆನ್ಸೀಸ್​).