Amit Shah | ಗೃಹ ಸಚಿವ ಅಮಿತ್ ಷಾ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಅಕ್ಷರಶಃ ಅಬ್ಬರಿಸಿದ್ದು, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಅಂಗವಾಗಿ ಕೋಲ್ಕತ್ತಾದ ಭವಾನಿಪುರದಲ್ಲಿ ಆಯೋಜಿಸಿದ್ದ ಬೃಹತ್ ರೋಡ್ ಶೋ ಮತ್ತು ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದ್ದು, ಮತದಾರರು ಯಾವುದೇ ಗೂಂಡಾಗಳಿಗೆ ಭಯಪಡುವ ಅಗತ್ಯವಿಲ್ಲ. ಟಿಎಂಸಿಯನ್ನು ಬೇರುಸಹಿತ ಕಿತ್ತು ಬಂಗಾಳಕೊಲ್ಲಿಗೆ ಎಸೆಯಲು ಪ್ರತಿಯೊಬ್ಬರೂ ಧೈರ್ಯದಿಂದ ಮತ ಚಲಾಯಿಸಬೇಕು ಎಂದಿದ್ದಾರೆ.
ಬಂಗಾಳದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಷಾ, ರಾಜ್ಯದಲ್ಲಿ ಪ್ರತಿದಿನ ಬಾಂಬ್ ದಾಳಿ ಮತ್ತು ಗುಂಡಿನ ಚಕಮಕಿಗಳು ವರದಿಯಾಗುತ್ತಿವೆ. ಈ ಗೂಂಡಾರಾಜ್‌ಗೆ ಮುಕ್ತಿ ನೀಡುವ ಸಮಯ ಈಗ ಬಂದಿದ್ದು, ಈ ಬಾರಿ ಯಾವುದೇ ಶಕ್ತಿ ಬಂಗಾಳದ ಮತದಾರರನ್ನು ತಡೆಯಲು ಸಾಧ್ಯವಿಲ್ಲ. ಭಯಮುಕ್ತವಾಗಿ ಮತದಾನ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಸೋನಾರ್ ಬಾಂಗ್ಲಾ ನಿರ್ಮಿಸಲು ಸಹಕರಿಸಿ ಮನವಿ ಮಾಡಿದರು.
ಭವಾನಿಪುರದಲ್ಲೂ ಬದಲಾವಣೆಯ ಪರ್ವ
ಮಮತಾ ಬ್ಯಾನರ್ಜಿ ಭದ್ರಕೋಟೆ ಎನಿಸಿಕೊಂಡಿರುವ ಭವಾನಿಪುರ ಕ್ಷೇತ್ರದಲ್ಲೂ ಈ ಬಾರಿ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿರುವ ಷಾ, ಬಂಗಾಳದಾದ್ಯಂತ ಬದಲಾವಣೆ ಬಯಸುವ ನೀವು ಭವಾನಿಪುರದಲ್ಲೂ ಅದನ್ನು ಮಾಡಬೇಕಿದೆ. ನಮ್ಮ ಅಭ್ಯರ್ಥಿ ಸುವೇಂದು ಅಧಿಕಾರಿ ಅವರನ್ನು ಗೆಲ್ಲಿಸುವ ಮೂಲಕ ಇಡೀ ರಾಜ್ಯಕ್ಕೆ ಸಂದೇಶ ರವಾನಿಸಿ ಎಂದರು.
ನಗರದ ವಿವಿಧ ಭಾಗಗಳ ಮೂಲಕ ಸಾಗಿದ ಈ ಬೃಹತ್ ರೋಡ್ ಶೋನಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಕೇಸರಿ ಧ್ವಜಗಳೊಂದಿಗೆ ಪಾಲ್ಗೊಂಡಿದ್ದರು. ಸರ್ವೆ ಕಟ್ಟಡದವರೆಗೆ ನಡೆದ ಈ ಮೆರವಣಿಗೆಯಲ್ಲಿ ಷಾ, ಸುವೇಂದು ಅಧಿಕಾರಿ ಅವರಿಗೆ ಸಾಥ್ ನೀಡುವ ಮೂಲಕ ಈ ಕ್ಷೇತ್ರಕ್ಕೆ ಬಿಜೆಪಿ ನೀಡುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭವಾನಿಪುರದಲ್ಲಿ ಪ್ರಚಾರ ನಡೆಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ(ಏಜೆನ್ಸೀಸ್).