ನವದೆಹಲಿ: ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಶನಿವಾರ (ಅ.10) ಕಾಕ್ರೋಚ್ ಜನತಾ ಪಾರ್ಟಿ (CJP) ದೆಹಲಿಯ ಜಂತರ್-ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ.
ಆದರೆ, ಪ್ರತಿಭಟನೆಗೂ ಮುನ್ನವೆ, ದೆಹಲಿ ಪೊಲೀಸರು ಕಾಕ್ರೋಚ್ ಜನತಾ ಪಾರ್ಟಿಯ ಪ್ರಮುಖ ನಾಯಕರಾದ ಅಭಿಜಿತ್ ದಿಪ್ಕೆ, ಸೌರವ್ ದಾಸ್, ಆಶುತೋಶ್ ರಾಂಕಾ ಸೇರಿದಂತೆ ಸುಮಾರು 50 ಜನರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿಯೇ ಬಂದಿಸಿದೆ. ಇದಕ್ಕೂ ಮೊದಲು ಜರ್ಮನ್ಲ್ಲಿ ವಾಸವಿರುವ ವಿವಾದಿತ ಯೂಟ್ಯೂಬರ್, ಧ್ರುವ್ ರಾಠಿಯನ್ನು ಗುರುಗ್ರಾಮದಲ್ಲಿರುವ ಅವರ ಮನೆಯಲ್ಲಿಯೇ ಹೋಂ ಅರೆಸ್ಟ್ ಮಾಡಲಾಗಿದೆ.
ಈಗ, ಸಿಜೆಪಿ ನಾಯಕರ ಹಾಗೂ ಬೆಂಬಲಿಗರ ಬಂಧನದ ಬಗ್ಗೆ ಕಾಕ್ರೋಚ್ ಜನತಾ ಪಾರ್ಟಿಯ ಮಾಜಿ ವಕ್ತಾರ, ವಿಜೇತಾ ದಹಿಯಾ ನೀಡಿರುವ ಪ್ರತಿಕ್ರಿಯೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. "ಅಭಜಿತ್ ದಿಪ್ಕೆ ಅರೆಸ್ಟ್, ಸೌರವ್ ದಾಸ್ ಅರೆಸ್ಟ್, ಆಶುತೋಶ್ ರಾಂಕಾ ಅರೆಸ್ಟ್, ಧ್ರುವ್ ರಾಠಿ ಅರೆಸ್ಟ್. ಆದರೆ ವಿಜೇತಾ ದಹಿಯಾ ಮಾತ್ರ ಬಾಹರ್ ಎಂದು ವ್ಯಂಗ್ಯವಾಗಿ ಮುಖಚರ್ಯೆಯನ್ನು ಮಾಡಿದ್ದಾರೆ.
ನಂತರ ಮಾತು ಮುಂದುವರಿಸಿದ ದಹಿಯಾ, ನಾನು ಈಗ ಪ್ರತಿಭಟನಾ ಸ್ಥಳಕ್ಕೆ ತೆರಳಲಿದ್ದೆನೆ. ಅಲ್ಲಿಗೆ ಹೋಗಿ ಒಂಡೆರಡು ಕವಿತೆ ಓದಿ, ಘೋಷಣೆ ಕೂಗಿ ಬರಲಿದ್ದೆನೆ. ದೇಶದಲ್ಲಿ ಬಹಳಷ್ಟು ಜನ ಅಪರಾಧಿಗಳಿದ್ದಾರೆ, ಹೋಗಿ ಅವರನ್ನು ಬಂಧಿಸಿ, ನೀವು ನೋಡಿದರೆ ಪ್ರತಿಭಟನಾಕಾರರ ಹಿಂದೆ ಬಿದ್ದಿದ್ದಿರಿ ಎಂದು ಪೊಲೀಸರು ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿಯನ್ನು ಅಭಿಜಿತ್ ದಿಪ್ಕೆ ಸ್ಥಾಪನೆ ಮಾಡಿದಾಗ, ಸೌರವ್ ದಾಸ್, ಆಶುತೋಷ್ ರಾಂಕಾ ಹಾಗೂ ವಿಜೇತಾ ದಹಿಯಾ ಅವರನ್ನು ಪಕ್ಷದ ಅಧಿಕೃತ ವಕ್ತಾರರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ ನಡೆದ ಪ್ರತಿಭಟನೆ ದಿನ, ವಿಜೇತಾ ದಹಿಯಾ ಪ್ರತಿಭಟನಾ ಸ್ಥಳದಿಂದ ದೂರವಿದ್ದು, ಕೆಫೆಯೊಂದರಲ್ಲಿ ಬರ್ಗರ್ ತಿನ್ನುತ್ತಾ ಕುಳಿತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಸಿಜೆಪಿ ಪಾರ್ಟಿಯಿಂದ ವಿಜೇತಾ ದಹಿಯಾರನ್ನು ಉಚ್ಚಾಟನೆ ಮಾಡಲಾಗಿತ್ತು.
ಒಂದೆಡೆ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದೆಡೆ, ಸಿಜೆಪಿ ನಾಯಕ ಅಭಿಜಿತ್ ದಿಪ್ಕೆ ಅವರ ಅಜ್ಜಿ ಸಾವಿತ್ರಿಭಾಯಿ ದಿಪ್ಕೆ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಮಾಹಿತಿ ಪ್ರಕಾರ ಸಾವಿತ್ರಿಭಾಯಿ ಅವರ ಅಂತ್ಯಕ್ರಿಯೆಯು ಮಹಾರಾಷ್ಟ್ರದ ಹಿಂಗೋಳಿ ಜಿಲ್ಲೆಯ ಶಾಂತುಕ್ ಪಿಂಪ್ರಿಯಲ್ಲಿ ನಡೆಯಲಿದ್ದು, ಅಭಿಜಿತ್ ಅವರ ತಂದೆ ಮತ್ತು ತಾಯಿ ಊರಿನತ್ತ ಪ್ರಯಾಣ ಬೆಳೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ದೆಹಲಿ ಪೊಲೀಸರ ವಶದಲ್ಲಿರುವ ಅಭಿಜಿತ್ ದಿಪ್ಕೆ ಅಜ್ಜಿಯ ಅಂತಿಮ ದರ್ಶನ ಪಡೆಯಲು ಮುಂಬೈಗೆ ಮರಳಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್).