ನವದೆಹಲಿ: ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತವು ಆರ್ಥಿಕ ವಿಪತ್ತಿನ ಮೇಲೆ ಕುಳಿತಿದೆ ಎಂದು ನೀಡಿದ್ದ ಹೇಳಿಕೆಯು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.
ಈ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ರಾಹುಲ್ ಗಾಂಧಿ ಅವರನ್ನು ಮೀರ್ ಜಾಫರ್, ಅಪ್ರಬುದ್ಧ ನಾಯಕ ಎಂದು ಕರೆಯುವ ಮೂಲಕ ತೀವ್ರ ವಾಗ್ದಾಳಿ ನಡೆಸಿದೆ. ಮತ್ತೊಂದೆಡೆ, ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ನಾಯಕರು ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರಗತಿಯನ್ನು ಕುಗ್ಗಿಸುವ ಏಕೈಕ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ. ಅವರ ಹೇಳಿಕೆಗಳಿಂದ ಪ್ರತಿಯೊಬ್ಬ ಭಾರತೀಯನೂ ತಲೆತಗ್ಗಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಭಾರತದ ಮೀರ್ ಜಾಫರ್ (ದೇಶದ್ರೋಹಿ) ಮತ್ತು ಅರಾಜಕತಾವಾದಿ ಎಂದು ಟೀಕಿಸಿದ ಭಾಟಿಯಾ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 12 ವರ್ಷಗಳಲ್ಲಿ ಭಾರತವು ಪ್ರಜಾಪ್ರಭುತ್ವ, ಆರ್ಥಿಕತೆ, ಯುವ ಸಬಲೀಕರಣ ಮತ್ತು ಜಾಗತಿಕ ಮಟ್ಟದಲ್ಲಿ ಹೊಸ ಎತ್ತರಕ್ಕೆ ಏರಿದೆ. ಆದರೆ, ರಾಹುಲ್ ಗಾಂಧಿ ವಿದೇಶಿ ಶಕ್ತಿಗಳ ಸೂಚನೆಯಂತೆ ದೇಶವನ್ನು ಅಸ್ಥಿರಗೊಳಿಸುವ ದುಷ್ಟ ಪಿತೂರಿಯ ಭಾಗವಾಗಿದ್ದಾರೆ. ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದಲ್ಲಿ ಉಂಟಾದಂತಹ ಅಸ್ಥಿರ ಪರಿಸ್ಥಿತಿಯನ್ನು ದೇಶದಲ್ಲೂ ಸೃಷ್ಟಿಸಲು ಬಯಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಸಂಸತ್ತಿನ ಪ್ರತಿ ಅಧಿವೇಶನ ಆರಂಭವಾಗುವ ಕೆಲವೇ ದಿನಗಳ ಮೊದಲು ರಾಹುಲ್ ಗಾಂಧಿ ವಿದೇಶಕ್ಕೆ ಹಾರುತ್ತಾರೆ. ಭಾರತದ ಪ್ರಜಾಪ್ರಭುತ್ವವನ್ನು ಹೇಗೆ ಅಸ್ಥಿರಗೊಳಿಸಬೇಕು ಎಂಬುದರ ಕುರಿತು ತಮ್ಮ ಒಡೆಯರಾದ ಜಾರ್ಜ್ ಸೊರೊಸ್ ಅವರಿಂದ ಸಲಹೆ ಪಡೆಯಲು ಅಥವಾ ಅಮೆರಿಕದ ರಾಜಕಾರಣಿ ಇಲ್ಹಾನ್ ಒಮರ್ ಅವರಿಂದ ನಿರ್ದೇಶನ ಪಡೆಯಲು ಅವರು ವಿದೇಶಕ್ಕೆ ಹೋಗುತ್ತಿರಬಹುದು. ಯಾವುದೇ ಅಧ್ಯಯನವಿಲ್ಲದೆ ಸುಳ್ಳು ಪ್ರಚಾರಕ್ಕಾಗಿ ಇಂತಹ ಆಘಾತಕಾರಿ ಹೇಳಿಕೆಗಳನ್ನು ನೀಡುತ್ತಾರೆ ಎಂದು ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಪ್ರಮುಖ ಮಿತ್ರಪಕ್ಷವಾದ ಶಿವಸೇನೆ (ಶಿಂಧೆ ಬಣ) ಕೂಡ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದೆ. ಶೈನಾ ಎನ್ಸಿ, ರಾಹುಲ್ ಗಾಂಧಿ ಅವರ ಕುರುಡುತನವು ದೇಶದಲ್ಲಿ ದ್ವೇಷವನ್ನು ಹುಟ್ಟುಹಾಕುತ್ತಿದೆ. ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ದೇಶದ ಜಿಎಸ್ಟಿ ಸಂಗ್ರಹವು ದಾಖಲೆಗಳನ್ನು ಮುರಿಯುತ್ತಿದೆ ಮತ್ತು ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಹೊಸ ಎತ್ತರವನ್ನು ತಲುಪುತ್ತಿದೆ. ವಾಸ್ತವ ಹೀಗಿರುವಾಗ ರಾಹುಲ್ ಗಾಂಧಿ ದೇಶದ ಆರ್ಥಿಕತೆಯ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ, ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಸಂಸದ ಸಂಜಯ್ ರಾವುತ್, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅವರೊಂದಿಗೆ ನೇರ ಚರ್ಚೆಗೆ ಬರಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್ಥಿಕ ಪ್ರಗತಿಯ ಕುರಿತ ಸರ್ಕಾರದ ವಾದಗಳನ್ನು ಪ್ರಶ್ನಿಸಿದ ರಾವುತ್, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ ಎಂದು ಪ್ರಧಾನಿ ಮೋದಿ ಪದೇ ಪದೇ ಹೇಳುತ್ತಾರೆ. ಅದು ನಿಜವಾಗಿದ್ದರೆ, ಆ ಪ್ರಗತಿ ತಳಮಟ್ಟದಲ್ಲಿ ಕಾಣಿಸಬೇಕಲ್ಲವೇ? ಇಂದಿಗೂ ದೇಶದ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಮತ್ತು ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರವೇ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುತ್ತಿದೆ. ದೇಶದಲ್ಲಿ ಬಡತನ ಇದೆ ಎಂಬುದಕ್ಕೆ ಇದೇ ಸಾಕ್ಷಿಯಲ್ಲವೇ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ(ಏಜೆನ್ಸೀಸ್).